ನವದೆಹಲಿ: ಟಾಲಿವುಡ್ ನಟ ನಾಗಚೈತನ್ಯ ಮತ್ತು ಸಮಂತಾ (Samantha Ruth Prabhu) ದಾಂಪತ್ಯ ಮುರಿದುಬೀಳಲು ಬಿಆರ್‌ಎಸ್ ಮುಖಂಡ ಕೆಟಿಆರ್ ಅವರೇ ಕಾರಣ ಎಂದು ಸಚಿವೆ ಕೊಂಡಾ ಸುರೇಖಾ ಸ್ಫೋಟಕ ಆರೋಪ ಮಾಡಿದ್ದಾರೆ.
ಕೆಟಿಆರ್ (KT Rama Rao) ಬಳಿ ಹೋಗ್ಲಿಲ್ಲ ಅಂದ್ರೆ ಮನೆಯಲ್ಲಿ ಇರುವಂತಿಲ್ಲ ಎಂದು ಸಮಂತಾಗೆ ನಟ ನಾಗಾರ್ಜುನ ಬೆದರಿಕೆ ಹಾಕಿದ್ರೂ ಅಂತಾನೂ ಆಪಾದಿಸಿದ್ದಾರೆ. ಅಷ್ಟೇ ಅಲ್ಲ, ರಕುಲ್ ಪ್ರೀತ್ ಸಿಂಗ್ ಸೇರಿ ನಟಿಯರು ಬೇಗ ಮದ್ವೆ ಮಾಡಿಕೊಂಡು ಫೀಲ್ಡ್ ತೊರೆಯಲು ಕೂಡ ಕೆಟಿಆರ್ ಕೊಟ್ಟ ಟಾರ್ಚರ್ ಕೂಡ ಕಾರಣ ಎಂದು ಕೊಂಡಾ ಸುರೇಖ ಹೇಳಿರುವ ಆಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದಕ್ಕೆ ನಟ ನಾಗಾರ್ಜುನ, ನಟಿ ಸಮಂತಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಚಿವೆ ಕೊಂಡಾ ಸುರೇಖಾ ಹೇಳಿಕೆಯನ್ನು ಖಂಡಿಸ್ತಿದ್ದೇನೆ. ರಾಜಕಾರಣದಿಂದ ದೂರ ಇರುವ ಸಿನಿ ಪ್ರಮುಖರನ್ನು ದಯಮಾಡಿ, ನಿಮ್ಮ ಎದುರಾಳಿಗಳನ್ನು ಟೀಕೆ ಮಾಡಲು ಬಳಸಿಕೊಳ್ಳಬೇಡಿ. ದಯಮಾಡಿ ಇತರರ ವೈಯಕ್ತಿಕ ವಿಷಯಗಳನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಮಾಡಿರುವ ಆರೋಪಗಳು ಸಂಪೂರ್ಣ ಅಸಂಬದ್ಧ. ಸುಳ್ಳಿನಿಂದ ಕೂಡಿವೆ. ನಿಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ನಾಗಾರ್ಜುನ ಆಗ್ರಹಿಸಿದ್ದಾರೆ.
ಸಮಂತಾ ಹೇಳಿದ್ದೇನು?
ಕೊಂಡಾ ಸುರೇಖಾ ಅವರ ಹೇಳಿಕೆಗೆ ನಟಿ ಸಮಂತಾ ರುತ್ ಪ್ರಭು ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಬ್ಬರ ವೈಯಕ್ತಿಕ ವಿಚಾರಗಳನ್ನು ಗೌರವಿಸಿ, ರಾಜಕೀಯ ಜಗಳಗಳಿಂದ ನನ್ನ ಹೆಸರನ್ನು ದೂರವಿಡಿ ಎಂದು ಹೇಳಿದ್ದಾರೆ.