ಜೈಪುರ: ಇತ್ತೀಚೆಗಷ್ಟೇ ಭಾರತದಲ್ಲಿ (India) ಮೊದಲ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಲಿಥಿಯಂ (Lithium) ನಿಕ್ಷೇಪ ಪತ್ತೆಯಾಗಿತ್ತು. ಇದೀಗ 3 ತಿಂಗಳ ಬಳಿಕ ರಾಜಸ್ಥಾನದಲ್ಲಿ (Rajasthan) ಭಾರೀ ಪ್ರಮಾಣದ ಲಿಥಿಯಂ ಪತ್ತೆಯಾಗಿದ್ದು, ಇದಕ್ಕೆ ಭಾರತದ 80% ದಷ್ಟು ಬೇಡಿಯನ್ನು ಪೂರೈಸುವ ಸಾಮರ್ಥ್ಯವಿದೆ ಎನ್ನಲಾಗಿದೆ.
ರಾಜಸ್ಥಾನದ ನಗೌರ್ ಜಿಲ್ಲೆಯ ದೇಗಾನಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಿಥಿಯಂನ ಗಣನೀಯ ಪ್ರಮಾಣದ ನಿಕ್ಷೇಪಗಳನ್ನು ಗುರುತಿಸಿರುವುದಾಗಿ ರಾಜಸ್ಥಾನದ ಸರ್ಕಾರಿ ಅಧಿಕಾರಿಗಳು ಮತ್ತು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ತಿಳಿಸಿದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 59 ದಶಲಕ್ಷ ಟನ್ಗಳಷ್ಟು ಲಿಥಿಯಂ ನಿಕ್ಷೇಪ ಪತ್ತೆಯಗಿತ್ತು. ಆದರೀಗ ರಾಜಸ್ಥಾನದಲ್ಲಿ ಪತ್ತೆಯಾಗಿರುವ ನಿಕ್ಷೇಪ ಅತ್ಯಂತ ದೊಡ್ಡ ಪ್ರಮಾಣದ್ದಾಗಿದ್ದು, ಇದು ದೇಶದಲ್ಲಿಯೇ ಬೇಡಿಕೆಯ ಹಾಗೂ ಅವಶ್ಯಕತೆಯ ಸುಮಾರು 80% ದಷ್ಟು ಪೂರೈಕೆ ಮಾಡಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿಥಿಯಂ ಹಗುರ ಹಾಗೂ ಮೃದುವಾದ ಲೋಹವಾಗಿದೆ. ಇದು ರಾಸಾಯನಿಯಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇದನ್ನು ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಪ್ರಸ್ತುತ ಭಾರತ ಲಿಥಿಯಂನಂತಹ ಖನಿಜಗಳಾದ ನಿಕಲ್, ಕೋಬಾಲ್ಟ್ಗಳ ಆಮದುಗಳ ಮೇಲೆ ಅವಲಂಬಿತವಾಗಿದೆ. ಈ ಪ್ರಮುಖ ಖನಿಜಗಳ ಪೂರೈಕೆಯನ್ನು ಭಾರತ ಬಲಪಡಿಸಲು ಪ್ರಯತ್ನಿಸುತ್ತಿದ್ದು, ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ವಿಸ್ತರಿಸುವ ಯೋಜನೆಯನ್ನು ಹೆಚ್ಚಿಸಲು ಮುಂದಾಗಿದೆ. ಇದನ್ನೂ ಓದಿ: ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ
ಸದ್ಯ ವಿಶ್ವದಲ್ಲಿ ಲಿಥಿಯಂ ಉತ್ಪಾದನೆ ಆಸ್ಟ್ರೇಲಿಯಾದಲ್ಲಿ 47% ಇದ್ದು, ಚಿಲಿಯಲ್ಲಿ 30% ಇದೆ. ಚೀನಾದಲ್ಲಿ 15% ಇದೆ. ಖನಿಜ ಸಂಸ್ಕರಣೆ ಚೀನಾದಲ್ಲಿ 56% ಮಾಡಲಾಗುತ್ತಿದ್ದು, ಚಿಲಿಯಲ್ಲಿ 29% ಹಾಗೂ ಅರ್ಜೆಂಟೀನಾದಲ್ಲಿ 10% ನಷ್ಟು ಮಾಡಲಾಗುತ್ತದೆ. ಇದನ್ನೂ ಓದಿ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಮೀನುಗಾರರ ರಕ್ಷಣೆ