ಚಿಕ್ಕಬಳ್ಳಾಪುರ/ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ದೇಶಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ (Bengaluru Airport) ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಸತತ 4ನೇ ದಿನವೂ ಕಾಲಿಟ್ಟಿದೆ. ನಿನ್ನೆ ಒಂದೇ ದಿನ ಬರೋಬ್ಬರಿ 550 ವಿಮಾನಗಳ ಸಂಚಾರ ರದ್ದಾಗಿದೆ. ಸಿಬ್ಬಂದಿಯ ಕೊರತೆಯಿಂದಾಗಿ ಇಂಡಿಗೋ ದೇಶೀಯ, ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಿದೆ. ಇದರಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಒಂದರಲ್ಲೇ ಒಟ್ಟು 205 ಇಂಡಿಗೋ (IndiGo) ವಿಮಾನಗಳ ಹಾರಾಟ ರದ್ದಾಗಿದೆ. ಕಳೆದ 3-4 ದಿನಗಳಿಂದ ಈ ಸಮಸ್ಯೆ ಆಗುತ್ತಿದ್ದು, ಸಾವಿರಾರು ಪ್ರಯಾಣಿಕರು ಪರದಾಡಿದ್ದಾರೆ.
ಎಲ್ಲಿ ನೋಡಿದ್ರೂ ಜನವೋ ಜನ
ಇನ್ನೂ ಕಳೆದ 24 ವರ್ಷಗಳಲ್ಲೇ ಅತಿಹೆಚ್ಚು ವಿಮಾನಗಳ ಹಾರಾಟದಲ್ಲಿ ಸಮಸ್ಯೆ ಆಗಿರೋದು ಸಹಜವಾಗಿಯೇ ಪ್ರಯಾಣಿಕರಲ್ಲಿ ಸಮಸ್ಯೆ ಉಂಟು ಮಾಡಿದೆ. ಇಂದೂ ಕೂಡ ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಹಲವು ವಿಮಾನಗಳು ರದ್ದಾಗಿವೆ. ಇಂದು ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 102 ಇಂಡಿಗೋ ವಿಮಾನಗಳು ರದ್ದಾಗಿವೆ. ಹೈದ್ರಾಬಾದ್‌ನಲ್ಲಿ 92 ವಿಮಾನಗಳು ರದ್ದಾಗಿದ್ದು, ಮುಂಬೈ, ದೆಹಲಿಯಲ್ಲೂ ವಿಮಾನಗಳನ್ನ ಕ್ಯಾನ್ಸಲ್ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ಇಂಡಿಗೋ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು ಏರ್‌ಪೋರ್ಟ್‌ನ ದೃಶ್ಯ ಹೇಗಿದೆಯೆಂದರೆ, ರೈಲ್ವೆ ಸ್ಟೇಷನ್ ನಂತಾಗಿದೆ.
ತಂದೆ ಅಸ್ಥಿ ಜೊತೆ ಏರ್‌ಪೋರ್ಟ್‌ನಲ್ಲೇ ಮಗಳು
ಇನ್ನು.. ಇಂಡಿಗೋ ವಿಮಾನಗಳಲ್ಲಿ ತಾಂತ್ರಿಕ ತೊಂದ್ರೆ ಹಾಗೂ ಪೈಲಟ್‌ಗಳ ಕೊರತೆಯಿಂದ ದೇಶದಾದ್ಯಂತ ಹಲವು ವಿಮಾನಗಳು ರದ್ದಾಗುತ್ತಿವೆ. ಇದೇ ರೀತಿ ಭುವನೇಶ್ವರಕ್ಕೆ ತೆರಳಬೇಕಿದ್ದ ವರನ ಕುಟುಂಬ ಪರದಾಡಿದೆ. 110 ಮಂದಿ ಏರ್‌ಪೋರ್ಟ್‌ನಲ್ಲೇ ಪರದಾಡಿದ್ದಾರೆ. ಹೀಗಾಗಿ ಇಂಡಿಗೋ ವಿರುದ್ಧ ವರನ ತಂದೆ ಮಹೇಂದ್ರ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ಇತ್ತ, ಹರಿದ್ವಾರಕ್ಕೆ ತಂದೆಯ ಅಸ್ಥಿ ಬಿಡಲು ತೆರಳುತ್ತಿದ್ದ ಮಗಳು ಕೂಡ ವಿಮಾನ ಸ್ಥಗಿತದಿಂದ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇನ್ನು, ಬೆಂಗಳೂರಿನಿಂದ ಅಹಮದಾಬಾದ್‌ಗೆ ತಾಯಿಯನ್ನ ಚಿಕಿತ್ಸೆಗೆ ಕರೆದುಕೊಂಡು ಹೊರಟಿದ್ದ ಮಗನಿಗೂ ಶಾಕ್ ಎದುರಾಗಿದೆ. ಏರ್‌ಪೋರ್ಟ್‌ಗೆ ತಾಯಿಯನ್ನು ಕರೆದುಕೊಂಡು ಬಂದ ಮಗನ ಮೊಬೈಲ್‌ಗೆ ವಿಮಾನ ರದ್ದು ಮಾಹಿತಿ ಬಂದಿದೆ. ಹೀಗಾಗಿ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ತಾಯಿ ಚಿಕಿತ್ಸೆಗೆ ಅಪಾಯಿಂಟ್ಮೆಂಟ್ ಪಡೆದಿದ್ದ ರಂಜಿತ್ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಏರ್‌ಪೋರ್ಟ್‌ನಲ್ಲೇ ಭಜನೆ ಮಾಡಿ ಆಕ್ರೋಶ
ಇನ್ನು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಕ್ಯಾನ್ಸಲ್‌ನಿಂದ ಪ್ರಯಾಣಿಕರು ಪರದಾಡಿದ್ರು. ಇಂಡಿಗೋ ಸಂಸ್ಥೆ ವಿರುದ್ಧ ಹಿಡಿಶಾಪ ಹಾಕಿದ್ರು. ಏರ್‌ಪೋರ್ಟ್‌ನಲ್ಲೇ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ಪ್ರಯಾಣಿಕರು, ಭಜನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ರು. ಇಂದು ಕೂಡ 400ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ದೆಹಲಿ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ ಹಾಗೂ ಹೊರಡಬೇಕಿದ್ದ 220ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಹೀಗಾಗಿ ನಿಲ್ದಾಣಗಳಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಟಿಕೆಟ್ ಬುಕಿಂಗ್ ಕ್ಯಾನ್ಸಲ್‌ಗೆ ಸಾಲು ನಿಂತ ಪ್ರಯಾಣಿಕರು
ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ದಂಡೇ ಬಂದಿದೆ. ಸುಮಾರು ಗಂಟೆಗಳ ಕಾಲ ನಿಂತಲ್ಲೇ ನಿಂತಿರುವ ಪ್ರಯಾಣಿಕರು ಇದೀಗ ಟಿಕೆಟ್ ಬುಕಿಂಗ್ ಕ್ಯಾನ್ಸಲೇಷನ್‌ಗೆ ಮುಂದಾಗಿದ್ದಾರೆ. ಅಯೋಧ್ಯೆಯಲ್ಲಿ ನಾಳೆ ಶೌರ್ಯ ದಿನ ಹಿನ್ನೆಲೆ ಅಯೋಧ್ಯೆಗೆ ತೆರಳಬೇಕಿದ್ದ ವಿಮಾನ ಕೂಡ ರದ್ದಾಗಿದ್ದು, ನೂರಾರು ಪ್ರಯಾಣಿಕರು ಪರದಾಡಿದ್ದಾರೆ. ಈ ಮಧ್ಯೆ, ಇಂಡಿಗೋ ವಿಮಾನಗಳ ಹಾರಾಟದಲ್ಲೆ ಸಮಸ್ಯೆ ಹಾಗೂ ಇತರೆ ವಿಮಾನಗಳ ಟಿಕೆಟ್ ಬೆಲೆ ಏರಿಕೆ ಕಾರಣ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಇಂಡಿಗೋ ವೈಫಲ್ಯವು ಸರ್ಕಾರದ ಈ ಏಕಸ್ವಾಮ್ಯ ಮಾದರಿಯ ಬೆಲೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


