ಚಿಕ್ಕಮಗಳೂರು: ರಾಜ್ಯ ಹೆದ್ದಾರಿ ಮಾರ್ಗ ಮಧ್ಯೆ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಯವರೆಗೂ ರಸ್ತೆ ಬಿರುಕು ಬಿಟ್ಟಿದ್ದು ಸ್ಥಳೀಯರು ಹಾಗೂ ವಾಹನ ಸವಾರರು ಆತಂಕಕ್ಕೀಡಾಗುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಇಟ್ಟಿಗೆ-ಸೀಗೋಡು ಗ್ರಾಮದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಇದರಿಂದ ಜಯಪುರ, ಕೊಪ್ಪ, ಶೃಂಗೇರಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಚರಿಸುವ ಜನರಲ್ಲಿ ಭಯ ಮೂಡಿದೆ.
Advertisement
Advertisement
ಬಾಳೆಹೊನ್ನೂರು ಸಮೀಪದ ಸೀಗೋಡು ಬಳಿಯ ಶಿವನಗರದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣಕ್ಕಾಗಿ ಬೋರ್ ವೆಲ್ ಕೊರೆಸುವ ವೇಳೆ ರಸ್ತೆ ಬಿರುಕು ಬಿಟ್ಟಿದೆ. ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಜಯಪುರ ಸೇರಿದಂತೆ ಹತ್ತಾರು ಹಳ್ಳಿಗಳ ಸಂಚಾರಕ್ಕೆ ಇರುವುದು ಇದೊಂದೇ ಮಾರ್ಗ. ಈಗ ಈ ದಾರಿಯೂ ಬಿರುಕು ಬಿಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಈ ಮಾರ್ಗ ಬಂದ್ ಆದ್ರೆ, ಶೃಂಗೇರಿ ಶಾರದಾಂಬೆ ದರ್ಶನಕ್ಕೆ ಹೋಗುವ ಭಕ್ತರು ಹಾಗೂ ಈ ಭಾಗದ ಜನ ಹತ್ತಾರು ಕಿಮೀ ಬಳಸಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದೇ ರಸ್ತೆ ಮೇಲೆ ಸರಕುಗಳನ್ನು ಸಾಗಿಸುವ ದೊಡ್ಡ ದೊಡ್ಡ ವಾಹನಗಳು ಸಂಚರಿಸಿದಲ್ಲಿ ರಸ್ತೆ ಕುಸಿಯುವ ಆತಂಕ ಸ್ಥಳೀಯರಲ್ಲಿ ದಟ್ಟವಾಗಿದೆ.
Advertisement
2019ರ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಇಲ್ಲಿ ಯತೇಚ್ಛವಾಗಿ ಮಳೆ ಸುರಿದಿತ್ತು. ಮಳೆ ನೀರು ರಾಜ್ಯ ಹೆದ್ದಾರಿಯಲ್ಲಿ ನದಿಯಂತೆ ಹರಿದು ಅಲ್ಲಲ್ಲೇ ಭೂಕುಸಿತ ಸಂಭವಿಸಿತ್ತು. ಭೂಮಿಯ ತೇವಾಂಶ ಹೆಚ್ಚಿದ್ದು ರಸ್ತೆ ಬಿರುಕು ಬಿಟ್ಟಿರಬಹುದೆಂದು ಸ್ಥಳೀಯರೇ ಶಂಕಿಸಿದ್ದಾರೆ. ಆದರೆ ಮಲೆನಾಡಲ್ಲಿ ಮಳೆ ನಿಂತ್ರು ಮಳೆಯ ಅವಾಂತರ ನಿಂತಿಲ್ವಾ ಎಂಬಂತಾಗಿದ್ದು ಮುಂದೇನೋ ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಬೋರ್‍ಗೆ ಭೂಮಿ ಬಾಯ್ಬಿಟ್ಟಿದ್ದು ಮಲೆನಾಡಿನ ಇತಿಹಾಸದಲ್ಲಿ ಇದೇ ಮೊದಲು. ಭೂಮಿ ಬಾಯ್ಬಿಟ್ಟಿರುವುದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಿದ್ದರು ಕೂಡ, ಕೂಡಲೇ ಸಂಬಂಧಪಟ್ಟ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಹಾಗೂ ಭೂಮಿಯ ಸಾಮಥ್ರ್ಯ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.