ಕಷ್ಟದಲ್ಲಿದ್ದಾಗ ಕಣ್ಣೀರು ಒರೆಸಲು, ನೋವು, ಸಂಕಟ, ಹತಾಷೆಯಲಿ ಮುಳುಗಿದಾಗ ತಲೆ ನೇವರಿಸಲು, ಕುಸಿದು ಬಿದ್ದಾಗ ಕೈ ಹಿಡಿದು ಮೇಲಕ್ಕೆತ್ತಲು ಎಲ್ಲರಿಗೂ ಎಲ್ಲರೂ ಇರುವುದಿಲ್ಲ. ಅದರಲ್ಲೂ ಈ ಸೋಲೆಂಬ ಸುಳಿಗೆ ಸಿಕ್ಕಿ ಒದ್ದಾಡುವಾಗ್ಲಂತೂ, ನಷ್ಟದಲ್ಲಿ ನಲುಗುತ್ತಿರುವಾಗ್ಲಂತೂ, ಯಾರೊಬ್ಬರೂ ಹತ್ತಿರಕ್ಕೂ ಸುಳಿಯಲ್ಲ. ಅಂತಹ ಪರಿಸ್ಥಿತಿಯಲ್ಲಿ ಯಾರೊಬ್ಬರ ಸಹಾಯಹಸ್ತ ಬೇಡದೇ ಯಾವ ರೀತಿ ಸೋಲಿಗೆ ಸೆಡ್ಡು ಹೊಡೆದು ನಿಲ್ಲಬಹುದು? ಗುರಿ ಮುಟ್ಟೋಕೆ, ಗೆದ್ದು ಗಹಗಹಿಸೋಕೆ ಯಾವ ದಾರಿಯಲ್ಲಿ ಸಾಗಬಹುದು ಎಂಬುದಕ್ಕೆ ಈ ‘ಕೊಡೆಮುರುಗನೇ’ ಸಾಕ್ಷಿ. ಕೊಡೆಮುರುಗ (Kodemuruga) ಈ ಹೆಸರು ಕಿವಿಗೆ ಬಿದ್ದಾಕ್ಷಣ ಎಲ್ಲೋ ಕೇಳಿದ್ದೀವಲ್ಲ ಎಂದೆನಿಸೋದು ಸತ್ಯ. ಆದರೆ, ಎಲ್ಲರ ಕಣ್ಣಮುಂದೆ ಕೊಡೆಮುರುಗ ಬಂದು ನಿಲ್ಲುವುದಿಲ್ಲ. ಯಾಕಂದ್ರೆ, ಆ ಕೀಚಕಿ ಕೊರೋನಾನೇ ಅದಕ್ಕೆ ಆಸ್ಪದ ಮಾಡಿಕೊಡಲಿಲ್ಲ. ಕೇಳಿ ಪ್ರೇಮಿಗಳೇ ಅಂತ ಆ ಕೊಡೆಮುರುಗ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದೇನೋ ಸತ್ಯ. ಆದರೆ ಅಷ್ಟರಲ್ಲಿ ಅಟ್ಟಹಾಸ ಶುರುವಿಟ್ಟುಕೊಂಡಿದ್ದ ರಣರಕ್ಕಸಿ ಕೊರೋನಾ, ಕೊಡೆಮುರುಗನ ಆಟಕ್ಕೆ ಕಡಿವಾಣ ಹಾಕಿಬಿಟ್ಟಳು. ಮೂರೇ ದಿನಕ್ಕೆ ಥಿಯೇಟರ್ ನಿಂದ ಎತ್ತಂಗಡಿ ಮಾಡಿಸಿಬಿಟ್ಟಳು.
ಇಷ್ಟು ಹೇಳಿದ್ಮೇಲೆ ಇದು ಸಿನಿಮಾದ ಕಥೆ-ವ್ಯಥೆ ಎಂಬುದು ನಿಮಗೆ ಗೊತ್ತಾಗಿರುತ್ತೆ. ಹಂಡ್ರೆಂಡ್ ಪರ್ಸೆಂಟ್ ಇದು ಕೊಡೆಮುರುಗ ಎನ್ನುವ ಚಿತ್ರದ ಕಥೆ. ಸುಬ್ರಮಣ್ಯ ಪ್ರಸಾದ್ ಅನ್ನೋರು ಈ ಚಿತ್ರದ ನಿರ್ದೇಶಕ ಕಂ ನಾಯಕ. ಕೆ.ರವಿಕುಮಾರ್ ಮತ್ತು ಅಶೋಕ್ ಶಿರಾಲಿ ನಿರ್ಮಾಪಕರು. ಕರೋನಾ ಕಾಲದಲ್ಲಿ ನಲುಗಿದ ನಮ್ಮ ಚಿತ್ರ ಈಗ ಬಿಡುಗಡೆ ಮಾಡಿದರೆ ಬೆಳ್ಳಿತೆರೆ ಮೇಲೆ ನಳನಳಿಸಬಹುದು ಅಂತ ರಿರಿಲೀಸ್ ಮಾಡಿದ್ರು. ಆದರೆ ಪ್ರಯೋಜನವಾಗಲಿಲ್ಲ. ಒಂದು ಸಿನಿಮಾ ಗೆದ್ದರೆ ಮತ್ತೊಂದು ಸಿನಿಮಾಗೆ ಸ್ಪೂರ್ತಿ ಕೊಡುತ್ತೆ. ಅದೇ ಸೋಲಾದರೆ ಈ ಸಿನಿಮಾನೂ ಬೇಡ, ಇದರ ಸಹವಾಸವೂ ಬೇಡ ಎಂದೆನಿಸೋದು ಸತ್ಯ. ಆದರೆ, ಕೊಡೆಮುರುಗ ಚಿತ್ರದ ಸಾರಥಿ ಸುಬ್ರಮಣ್ಯ ಪ್ರಸಾದ್ ಸೋಲಿಗೆ ಶರಣಾಗದೇ ಸೆಡ್ಡು ಹೊಡೆದು ನಿಂತಿದ್ದಾರೆ. ಕನಸುಗಳು ನನಸಾಗಬೇಕು ಎಂದರೆ ಹೋರಾಡಬೇಕು. ನಮ್ಮ ಹಣೆಬರಹವನ್ನು ನಾವೇ ಬದಲಾಯಿಸಿಕೊಳ್ಳಬೇಕು. ಪ್ರಯತ್ನಪಟ್ಟರೆ ಇಡೀ ಜಗತ್ತನ್ನೇ ನಿಮ್ಮತ್ತ ತಿರುಗಿ ನೋಡುವಂತೆ ಮಾಡಬಹುದು ಎನ್ನುತ್ತಿರೋ ಸುಬ್ರಮಣ್ಯ, ಸೋಲಿನ ಸುಳಿಗೆ ಸಿಕ್ಕವರನ್ನ, ಕೈ ಚೆಲ್ಲಿ ಕುಳಿತವರನ್ನು ಬಡಿದೆಬ್ಬಿಸೋ ಕೆಲಸ ಮಾಡಿದ್ದಾರೆ. ‘ಹುಡುಕಾಡು ಅಲೆದಾಡು’ ಎನ್ನುವ ಹಾಡು ಕಟ್ಟಿಕೊಟ್ಟು ಭರವಸೆಯ ಬೆಳಕು ಮೂಡಿಸಿದ್ದಾರೆ.
ಕಷ್ಟದಲ್ಲಿದ್ದಾಗ ಕಣ್ಣೀರು ಒರೆಸಲು, ನೋವು, ಸಂಕಟ, ಹತಾಷೆಯಲಿ ಮುಳುಗಿದಾಗ ತಲೆ ನೇವರಿಸಲು, ಕುಸಿದು ಬಿದ್ದಾಗ ಕೈ ಹಿಡಿದು ಮೇಲಕ್ಕೆತ್ತಲು ಎಲ್ಲರಿಗೂ ಎಲ್ಲರು ಇರುವುದಿಲ್ಲ. ಅದರಲ್ಲೂ ಈ ಸೋಲೆಂಬ ಸುಳಿಗೆ ಸಿಕ್ಕಿ ಒದ್ದಾಡುವಾಗ್ಲಂತೂ, ನಷ್ಟದಲ್ಲಿ ನಲುಗುತ್ತಿರುವಾಗ್ಲಂತೂ, ಯಾರೊಬ್ಬರೂ ಹತ್ತಿರಕ್ಕೂ ಸುಳಿಯಲ್ಲ. ಇಂತವರಿಗೆ ಸುಬ್ರಮಣ್ಯ ಪ್ರಸಾದ್ ಅಂಥವರು ಸ್ಪೂರ್ತಿಯಾಗುತ್ತಾರೆ. ಕೊಡೆಮುರುಗ ಚಿತ್ರದ ಹುಡುಕಾಡು ಅಲೆದಾಡು (Hudukaadu Aledaadu) ತರಹದ ಹಾಡುಗಳು (Song) ಮೈಕೊಡವಿಕೊಂಡು ಅಖಾಡಕ್ಕಿಳಿಯಲು ಎನರ್ಜಿ ನೀಡುತ್ತವೆ. ಈ ಹಾಡಿಗೆ ಸುಬ್ರಮಣ್ಯ ಅವರೇ ಸಾಹಿತ್ಯ ರಚಿಸಿದ್ದು, ರಾಪರ್ ಚಂದನ್ ಶೆಟ್ಟಿ ಧ್ವನಿಯಾಗಿದ್ದಾರೆ. ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಆನಂದ್ ಆಡಿಯೋ ಯೂಟ್ಯೂಬ್ ಪೇಜ್‍ನಲ್ಲಿ ಈ ಹಾಡು ಲಭ್ಯವಿದೆ. ಹುಡುಕಾಡು ಅಲೆದಾಡು ಹಾಡು ನೋಡಿದ್ಮೇಲೆ ಸುಬ್ರಮಣ್ಯ ಪ್ರಸಾದ್‍ರನ್ನ ನೀವೆಲ್ಲರೂ ಮಲ್ಟಿಟ್ಯಾಲೆಂಟೆಡ್ ಅಂತ ಒಪ್ಪಿಕೊಳ್ಳುತ್ತೀರಿ. ಇವರ ಸಿನಿಮಾಗಳು ಗೆಲ್ಲಬೇಕು, ಇವರಿಗೆ ಯಶಸ್ಸು ಸಿಗಬೇಕು ಅಂತ ಭಾವಿಸ್ತೀರಿ. ಇದೇ ಭಾವನೆ ಸಿನಿಮಾ ಮಂದಿಯಲ್ಲೂ ಬರಬೇಕು. ನಿರ್ದೇಶನ ಹಾಗೂ ನಟನೆಯ ಎರಡನ್ನೂ ಬ್ಯಾಲೆನ್ಸ್ ಮಾಡುವ ತಾಕತ್ತಿರೋ ಸುಬ್ರಮಣ್ಯ ಪ್ರಸಾದ್‍ಗೆ (Subramanya Prasad) ಅವಕಾಶಗಳು ಸಿಗಬೇಕು. ಅದು ನಟನೆಯಾದ್ರೂ ಸೈ, ನಿರ್ದೇಶನವಾದರೂ ಜೈ ಅಂತಿರೋ ಕೊಡೆಮುರುಗ ಕ್ಯಾಪ್ಟನ್‍ಗೆ ಒಳ್ಳೆದಾಗಬೇಕು.
ಅಷ್ಟಕ್ಕೂ, ಈ ಸುಬ್ರಮಣ್ಯ ಪ್ರಸಾದ್ ಏಕಾಏಕಿ ಡೈರೆಕ್ಟರ್ ಹ್ಯಾಟ್ ತೊಟ್ಟವರಲ್ಲ. ಮುಖಕ್ಕೆ ಮೇಕಪ್ ಹಾಕ್ಕೊಂಡು ನೇರವಾಗಿ ಕ್ಯಾಮೆರಾ ಮುಂದೆ ಬಂದು ನಿಂತವರಲ್ಲ. ದಶಕಗಳಿಂದ ತೆರೆಮರೆಯಲ್ಲಿ ದುಡಿದು ದಣಿದಿದ್ದಾರೆ. ಬಾಲಾಜಿ ಟೆಲಿಫಿಲಂಸ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟು ಪುಣ್ಯಕೋಟಿಯಂತಹ ಸೀರಿಯಲ್ ಗಳಿಗೆ ಎಪಿಸೋಡ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಗಾಳಿಪಟ, ಒಂದೇ ಗೂಡಿನ ಹಕ್ಕಿಗಳು, ರಾಧಾ ಕಲ್ಯಾಣ, ಆನಂದ್ ಭೈರವಿ ಧಾರಾವಾಹಿಗಳಿಗೆ ಪ್ರಧಾನ ನಿರ್ದೇಶನ ಇವ್ರದ್ದೆ.
ಹೀಗೆ, ಒಂದೊಂದೆ ಹೆಜ್ಜೆ ಇಡುತ್ತಾ ಕಿರುತೆರೆಯಲ್ಲಿ ಗುರ್ತಿಸಿಕೊಂಡಿದ್ದ ಸುಬ್ರಮಣ್ಯ ಪ್ರಸಾದ್, ಕೊಡೆಮುರುಗ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಕಮಾಲ್ ಮಾಡೋದಕ್ಕೆ ಬಂದರು. ಆದರೆ, ಈ ಕೊರೋನಾ ಅನ್ನೋ ಮಹಾಮಾರಿ ಅದಕ್ಕೆ ಕತ್ತರಿಹಾಕಿದಳು. ಹಾಗಂತ ಕೊಡೆಮುರುಗ ಕಂಗಾಲಾಗಿಲ್ಲ. ಕೈಚೆಲ್ಲಿ ಕುಳಿತಿಲ್ಲ. ಬದಲಾಗಿ ಸೋಲಿಗೆ ಸೆಡ್ಡುಹೊಡೆದು ನಿಂತಿದ್ದಾನೆ. ಗೆಲುವೆಂಬ ಕುದುರೆಯನ್ನೇರಿ ಸವಾರಿ ಹೊರಟೇ ತೀರುತ್ತೇನೆ ಎನ್ನುವ ಆತ್ಮವಿಶ್ವಾಸದಲ್ಲಿ ಹೊಸ ಹೆಜ್ಜೆ ಹಾಕಲು ರೆಡಿಯಿದ್ದಾನೆ. ಈಗಾಗಲೇ ಎರಡನೇ ಚಿತ್ರದ ತಯಾರಿಯಲ್ಲಿ ತೊಡಗಿಸಿಕೊಂಡು, 50 ಪರ್ಸೆಂಟ್ ಸ್ಕ್ರಿಪ್ಟ್ ವರ್ಕಿಂಗ್ ಕೆಲಸ ಮುಗಿಸಿರುವ ಸುಬ್ರಮಣ್ಯ ಪ್ರಸಾದ್, ಜುಲೈ ಅಥವಾ ಆಗಸ್ಟ್ ನಲ್ಲಿ ಸಿನಿಮಾಗೆ ಚಾಲನೆ ನೀಡೋದಕ್ಕೆ ರೆಡಿಯಾಗಿದ್ದಾರೆ.