ಹುಬ್ಬಳ್ಳಿ: ಧಾರವಾಡ ಜಿ.ಪಂ ಸದಸ್ಯ ಯೋಗೇಶ್‍ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯ ಮುಖ್ಯ ಪೇದೆಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದೆ.
ಬೆಂಡಿಗೇರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಬಾಬು ಕಟಗಿಯನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಬಾಬು ಕಟಗಿ ಯೋಗೇಶ್ ಗೌಡ ಕೊಲೆಯಲ್ಲಿ ಪೇದೆಯ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗಿದ್ದು, ಬಾಬು ಕಟಗಿ ಕೊಲೆ ಆರೋಪಿಗಳ ನಿರಂತರ ಸಂಪರ್ಕದಲ್ಲಿದ್ದರು ಎಂಬುವ ಮಾಹಿತಿ ಸಿಬಿಐ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಕೊಲೆಯಾದ ದಿನವೂ ಆರೋಪಿಗಳ ಜೊತೆ ಬಾಬು ಕಟಗಿ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಕೊಲೆ ನಡೆದ ದಿನ ಪೇದೆ ರಜೆಯಲ್ಲಿದ್ದರೂ ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಬಗ್ಗೆ ಸಿಬಿಐಗೆ ಸಾಕ್ಷ್ಯಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ವೇಳೆ ಪೊಲೀಸ್ ಪೇದೆ ಹಲವು ಮಹಿಳೆಯರ ಜೊತೆ ಸಂಪರ್ಕದಲ್ಲಿದ್ದ ವಿಚಾರದ ಬಗ್ಗೆಯೂ ಸಿಬಿಐ ಮಾಹಿತಿ ಕಲೆ ಹಾಕಿದೆ.
Advertisement
Advertisement
2017 ಜೂನ್ 15ರಂದು ಯೋಗೇಶ್ ಗೌಡನ ಕೊಲೆಯಾಗಿತ್ತು. ಅಂದು ಬೆಳಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‍ಗೆ ಎಂಟ್ರಿ ಕೊಟ್ಟಿದ್ದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರನ್ನು ಬಂಧಿಸಿದ್ದರು.