ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಹುಬ್ಬಳ್ಳಿಯಲ್ಲಿ ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಚೆನ್ನಮ್ಮ ಸರ್ಕಲ್ ಬಳಿಯ ಹಳೆ ಬಸ್ ನಿಲ್ದಾಣದ ಬಳಿ ಕುಡಿದು ಮಂಗಳಮುಖಿಯರು ಹಾಗೂ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಯುವಕ ಮಂಗಳಮುಖಿಯರು ಹಾಗೂ ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ್ದ. ಹೀಗಾಗಿ ಮಹಿಳೆಯರು ಹಾಗೂ ಮಂಗಳಮುಖಿಯರ ಜೊತೆ ವಾಗ್ವಾದ ನಡೆಸಿದ ಯುವಕನಿಗೆ ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಬಳಿಯ ಕೆಲ ಲಾಡ್ಜ್ ಗಳಲ್ಲಿ ವೇಶ್ಯಾವಾಟಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಯುವಕ ಮಹಿಳೆಯನ್ನು ಹಿಡಿಯಲು ಹೋಗಿಯೇ ಒದೆ ತಿಂದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲವಾದರೂ ಜನನಿಬಿಡ ಹಳೆ ಬಸ್ ನಿಲ್ದಾಣ ಹಾಗೂ ಚನ್ನಮ್ಮ ಸರ್ಕಲ್ ಬಳಿ ಮಹಿಳೆಯರು ಓಡಾಡಲು ಕಷ್ಟವಾಗುತ್ತಿದೆ. ಕುಡುಕರು ಹಾಗೂ ವಿಟಪುರುಷರ ಕಾಟ ಹೆಚ್ಚಳವಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವ ಮೂಲಕ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡುವ ಮೂಲಕ ಮರ್ಯಾದೆಯಿಂದ ಓಡಾಡುವಂತೆ ಅನುಕೂಲ ಮಾಡಿಕೊಡಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ.