ಹುಬ್ಬಳ್ಳಿ: ಕೊಲೆ ಆರೋಪಿಗಳಿಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದು, ವಿಚಾರಣಾಧೀನ ಕೈದಿಯೊಬ್ಬ ಮತ್ತೊಬ್ಬ ಖೈದಿಗೆ ಕಲ್ಲಿನಿಂದ ಹೊಡಿದಿರುವ ಘಟನೆ ಹುಬ್ಬಳ್ಳಿ ಕಾರಾಗೃಹದಲ್ಲಿ ನಡೆದಿದೆ.
ರಾಯನಾಳ ಗ್ರಾಮದ ಸಿದ್ದಪ್ಪ ಕೋಳೂರು ಹಾಗೂ ಹುಬ್ಬಳ್ಳಿ ತಾಲೂಕಿನ ಬೊಮ್ಮಸಂದ್ರದ ಖಾದರಸಾಬ ಮುನಿಯಾರ್ ಹೊಡೆದಾಡಿಕೊಂಡಿದ್ದಾರೆ. ಖಾದರಸಾಬ ಮುನಿಯಾರ್ ಕಲ್ಲಿನಿಂದ ಹೊಡೆದ ಪರಿಣಾಮ ಸಹ ಕೈದಿ ಸಿದ್ದಪ್ಪ ಕೋಳೂರು ಗಾಯಗೊಂಡಿದ್ದಾನೆ.
ಸ್ನೇಹಿತರಾಗಿದ್ದ ಈ ಕೈದಿಗಳಿಬ್ಬರು ಬಿಡುವಿನ ವೇಳೆ ಆವರಣದಲ್ಲಿ ಮಾತಾನಾಡುತ್ತಿದ್ದಾಗ ಸಿದ್ದಪ್ಪ ಸಹ ಕೈದಿ ಖಾದರಸಾಬ್ ಮುನಿಯಾರಗೆ ನಿನಗ್ಯಾರು ಭೇಟಿ ಮಾಡಲು ಬರುವುದಿಲ್ಲ, ನೀನು ಜೈಲಿನಲ್ಲೇ ಕೊಳೆಯಬೇಕಾಗುತ್ತದೆ ಎಂದು ಕಿಚಾಯಿಸಿದ್ದಕ್ಕೆ ರೊಚ್ಚಿಗೆದ್ದ ಮುನಿಯಾರ ಸಿದ್ದಪ್ಪನಿಗೆ ಕಲ್ಲಿನಿಂದ ಹೊಡೆದಿದ್ದಾನೆ.
ಹೊಡೆತಕ್ಕೆ ಕೈದಿ ಸಿದ್ದಪ್ಪ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಪ್ಪ 2015 ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಖಾದರಸಾಬ ಮುನಿಯಾರ್ 2017ರಲ್ಲಿ ನಡೆದ ಕೊಲೆ ಪ್ರಕರಣ ಆರೋಪಿಯಾಗಿದ್ದಾನೆ. ಇಬ್ಬರೂ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.