ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ವಾಹನಗಳಿಗೆ ಹೆದ್ದಾರಿ ಟೋಲ್ ಹಾಗೂ ಮೋಟಾರು ವಾಹನ ತೆರಿಗೆ ವಿನಾಯಿತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಹೇಳಿದರು.
ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಜನರಿಗೆ ಅನುಕೂಲವಾಗುವಂತೆ ಹೊಸ ಮಾರ್ಗದಲ್ಲಿ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಹುಬ್ಬಳ್ಳಿ ನಗರದಲ್ಲಿ ರಸ್ತೆ ದುರಸ್ತಿ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ವಿವಿಧ ಮಾರ್ಗದಲ್ಲಿ ಬಸ್‍ಗಳ ವ್ಯವಸ್ಥೆ ಕಡಿಮೆಯಿದ್ದು, ಕಾಮಗಾರಿ ಪೂರ್ಣವಾದ ನಂತರ ಹೆಚ್ಚುವರಿ ಹೊಸ ಬಸ್‍ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸಂಸ್ಥೆಯ ಅಭಿವೃದ್ಧಿ ಕುರಿತು ಈಗಾಗಲೇ ವ್ಯಾಪ್ತಿಯಲ್ಲಿನ ಎಲ್ಲ 36 ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಶಾಸಕರನ್ನು ಖುದ್ದಾಗಿ ಭೇಟಿ ಮಾಡಲಾಗಿದೆ. ಉಳಿದ ಕಡೆಗಳಿಗೂ ಭೇಟಿ ನೀಡಲಾಗುವುದು ಎಂದರು.
ವಾಕರಸಾಸಂನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾತನಾಡಿ, ಕಿತ್ತೂರು ಚನ್ನಮ್ಮ ವೃತ್ತದ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದ್ದು, ಚನ್ನಮ್ಮ ವೃತ್ತದಿಂದ ವಾಣಿವಿಲಾಸ ವೃತ್ತದವರೆಗೆ ಕಾಮಗಾರಿ ಪೂರ್ಣಗೊಂಡ ನಂತರ ಬಿಆರ್‍ಟಿಎಸ್ ಬಸ್‍ಗಳನ್ನು ಕಲ್ಪಿಸಲಾಗುವುದು. ಚನ್ನಮ್ಮ ವೃತ್ತದಿಂದ ವಾಣಿವಿಲಾಸ ವೃತ್ತದವರೆಗೆ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ರಸ್ತೆಯ ಪ್ರಗತಿ ನಂತರ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.