ಹುಬ್ಬಳ್ಳಿ: ಲಾಕ್‍ಡೌನ್ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಹಾಗೂ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಹತ್ತು ಜನ ಆರೋಪಿಗಳನ್ನು ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಖಾಜಾ ಅಬ್ದುಲ್ ಕರೀಂ ಬೇಪಾರಿ, ರಾಜಾ ಹಸನ್‍ಸಾಬ್ ನದಾಫ್, ಅಲಾಬಕ್ಷ್ ಹಸನ್‍ಸಾಬ್ ನದಾಫ್, ಜಾವೀದ್ ಅಬ್ದುಲ್ ರಜಾಕ್ ಬಿಜಾಪುರ, ಅಫ್ಜಲ್ ಮೋದಿನಸಾಬ್ ರೋಣ, ಮಹ್ಮದ್ ಗೌಸ್ ಮೆಹಬೂಬ್‍ಸಾಬ್ ಹಾವನೂರ, ಇರ್ಪಾನ್ ಖಾಜಾ ಭೇಪಾರಿ, ಗೂಡುಸಾಬ್ ರೇಹಮಾನಸಾಬ್ ಬೆಣ್ಣೆ, ಮಹ್ಮದ್ ಇಕ್ಬಾಲ್ ಗೂಡುಸಾಬ್ ಬೆಣ್ಣೆ, ಪಾತೀಮ್ ದಾವಲಸಾಬ್ ನದಾಫ್ ಬಂಧಿತ ಆರೋಪಿಗಳು. ಅರಳಿಕಟ್ಟಿ ಕಾಲೋನಿಯ ಶಭಾನಾ ರೋಣ, ಶಹನಜಾ ರೋಣ, ರೇಷ್ಮಾ ಗದಗ, ಮೆಹಬೂಬಿ ಮಾಂಡಲಿ,ಸಬೀರಾ ಬೆಣ್ಣಿ ಎಂಬವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದರು.
ಏನಿದು ಪ್ರಕರಣ?:
ಲಾಕ್‍ಡೌನ್ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಮಾಜ್ ಮಾಡುವುದನ್ನು ನಿಲ್ಲಿಸಲಾಗಿದೆ. ಕೆಲ ಮೌಲ್ವಿಗಳೇ ನಮಾಜ್ ಮಾಡಲು ಮಸೀದಿಗೆ ಬರಬೇಡಿ ಎಂದು ಮನವಿ ಕೂಡ ಮಾಡಿದ್ದಾರೆ. ಆದರೆ ಈ ಮಧ್ಯೆಯೂ ಹುಬ್ಬಳ್ಳಿ ಮಂಟೂರ್ ರೋಡ್ ಹತ್ತಿರದ ಅರಳಿಕಟ್ಟಿ ಕಾಲೋನಿ ಬಳಿ ಶುಕ್ರವಾರ ನಮಾಜ್ ನಡೆಸಲಾಗಿತ್ತು. ಈ ವಿಚಾರವಾಗಿ ಮುಸ್ಲಿಮರು ಮತ್ತು ಪೊಲೀಸರ ನಡುವೆ ಜಗಳವಾಗಿ, ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.
ಈ ಘಟನೆಯಲ್ಲಿ ಮೂರು ಜನ ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಶಹರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.