ಹುಬ್ಬಳ್ಳಿ: ಧಾರವಾಡದ ಹೊಸಯಲ್ಲಾಪೂರ ಕೋಳಿಕೆರೆಯ 35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಪ್ರಕರಣ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದು, ಕಿಮ್ಸ್ ಸಿಬ್ಬಂದಿಗೂ ಆತಂಕವನ್ನು ತಂದೊಡ್ಡಿದೆ.
ಒಂದೆಡೆ ಸೋಂಕಿತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಈ ಸೋಂಕು ದೃಢಪಟ್ಟಿರುವುದು ಅಚ್ಚರಿ ಮೂಡಿಸಿದೆ. ಕಳೆದ ಏಪ್ರಿಲ್ 30ರಂದು ಬೇರೆ ರೋಗ ಲಕ್ಷಣಗಳುಳ್ಳ ಈ ವ್ಯಕ್ತಿ ಸಿವಿಲ್ ಆಸ್ಪತ್ರೆಯಲ್ಲಿ ಒಂದು ದಿನದ ಚಿಕಿತ್ಸೆ ಪಡೆದಿದ್ದಾನೆ. ಅಲ್ಲದೆ ಹೊಟ್ಟೆ ಹಾಗೂ ಲಿವರ್ ಸಂಬಂಧಿಸಿದ ಕಾಯಿಲೆ ಹಿನ್ನೆಲೆಯಲ್ಲಿ ಮೇ 01ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗೆ ಮೇ 07ರಂದು ಸೋಂಕು ದೃಢಪಟ್ಟಿದ್ದು, ಕಿಮ್ಸ್ ಸಿಬ್ಬಂದಿಗೆ ಆತಂಕವನ್ನುಂಟು ಮಾಡಿದೆ.
ಸೋಂಕಿತನಿಗೆ ಪಿರಿನೋನೈಟಸ್ (ಹೊಟ್ಟೆ ಹಾಗೂ ಲಿವರ್ ಸಂಬಂಧಿತ ಕಾಯಿಲೆ) ಆಪರೇಷನ್ ಮಾಡಿದ ವೈದ್ಯರಲ್ಲಿ ಆತಂಕ ಹೆಚ್ಚಾಗಿದ್ದು, ಸೋಂಕಿತನಿಗೆ ಆಪರೇಷನ್ ಮಾಡಿದ 12 ಡಾಕ್ಟರ್ ಹಾಗೂ 6 ಪಿಜಿ ವಿದ್ಯಾರ್ಥಿಗಳು ಹಾಗೂ ನಾಲ್ಕು ನರ್ಸ್ ಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಅಲ್ಲದೆ ಶಸ್ತ್ರಚಿಕಿತ್ಸೆ ಮಾಡಿದ ಶಸ್ತ್ರಚಿಕಿತ್ಸೆ ವಿಭಾಗವನ್ನು ಕೂಡ ಸಿಲ್‍ಡೌನ್ ಮಾಡಲಾಗಿದೆ. ಧಾರವಾಡದ ಹೊಸ ಯಲ್ಲಾಪೂರದ 35 ವರ್ಷದ ವ್ಯಾಪಾರಿಯಿಂದ ಕಿಮ್ಸ್ ಸಿಬ್ಬಂದಿಗೆ ಆತಂಕ ಸೃಷ್ಟಿಯಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೋಂಕಿತನಿಗೆ ಆಪರೇಷನ್ ನಂತರ ಕೊರೊನಾ ಸೋಂಕು ದೃಢಪಟ್ಟಿದ್ದು, ಈಗ ಕಿಮ್ಸ್ ಸಿಬ್ಬಂದಿಗೆ ಕೊರೊನಾ ಭಯ ನಿರ್ಮಾಣವಾಗಿದೆ.