ಹುಬ್ಬಳ್ಳಿ: ಅಂಗವಿಕಲ ಮಗಳ ಆರೈಕೆಗಾಗಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೇ ಸಿಲುಕಿಕೊಂಡಿದ್ದ ತಾಯಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬರುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದ ಅಗೆನೆಸ್ಟ್ ಕೋವಿಡ್-19 ಸಹಾಯ ಗುಂಪು ಮಾನವೀಯತೆ ಮೆರೆದಿದ್ದಾರೆ.
ಅಂಗವಿಕಲೆ ಪೂಜಾ ಮಲಕಾಪುರ ತಾಯಿ ಶಾಂತಾ ಮಲಕಾಪುರ ಒಂದು ದಿನದ ಲಗ್ನದ ಕಾರ್ಯಕ್ರಮ ನಿಮಿತ್ತ ಅಂಗವಿಕಲೆ ಮಗಳನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಬೆಳಗಾವಿ ಸಂಬಂಧಿಕರ ಮದುವೆಗಾಗಿ ಹೋಗಿದ್ದರು. ಆದರೆ ದೀರ್ಘ ಅವಧಿಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅವರು ಅನಿವಾರ್ಯವಾಗಿ ಬೆಳಗಾವಿಯಲ್ಲಿಯೇ ಉಳಿಯಬೇಕಾಯಿತು. ಆದರೆ ಅಂಗವಿಕಲ ಮಗುವಿನ ಊಟೋಪಚಾರ ಮತ್ತು ಆರೈಕೆಯನ್ನು ಕಳೆದ 20 ದಿನಗಳಿಂದ ಸ್ಥಳೀಯ ಜೈನ ಸಮಾಜದವರು ಮಾಡುತ್ತಿದ್ದರು.
ಆದರೆ ಪುನಃ ದೀರ್ಘ ಅವದಿಯ ಲಾಕಡೌನ್ ಘೋಷಿಸಿದ್ದರಿಂದ ಅಂಗವಿಕಲ ಮಗಳು ಮತ್ತು ತಾಯಿ ತುಂಬಾ ಆತಂಕಕ್ಕೆ ಒಳಗಾಗಿದ್ದು, ಕಳೆದ ಎಂಟು ದಿನಗಳಿಂದ ಬಹಳಷ್ಟು ಪ್ರಯತ್ನ ಮಾಡಿದರು ಬರಲು ಆಗಿರಲಿಲ್ಲ. ನಂತರ ಈ ವಿಚಾರವನ್ನು ಸ್ಥಳೀಯರು ಸಹಾಯ ಗುಂಪು ಅಗೆನೆಸ್ಟ್ ಕೋವಿಡ್-19 ಗಮನಕ್ಕೆ ತಂದರು. ನಂತರ ಕಾಂಗ್ರೆಸ್ ಮುಖಂಡರಾದ ಶಾಕಿರ್ ಸನದಿ ಮತ್ತು ರಾಜಶೇಖರ್ ಮೆಣಸಿನಕಾಯಿ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ರವರ ಗಮನಕ್ಕೆ ತಂದು ಘಟನೆಯ ಸಂಪೂರ್ಣ ವಿವರಣೆ ನೀಡಿದರು.
ಆಗ ಅವರು ಈ ವಿಷಯವನ್ನು ಪೊಲೀಸರಿಗೆ ಹೇಳಿದರು. ಬೆಳಗಾವಿಯಲ್ಲಿ ಸಿಲುಕಿರುವ ಅಂಗವಿಕಲೆಯ ತಾಯಿಯನ್ನು ಕರೆತರುವುದು ಅನಿವಾರ್ಯವಾಗಿದ್ದರಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಇತರ ಆಡಳಿತ ಯಂತ್ರದ ಮುಖ್ಯಸ್ಥರನ್ನು ಸಂಪರ್ಕಿಸಿ ಬೆಳಗಾವಿಯಿಂದ ಈ ಅಂಗವಿಕಲೆಯ ತಾಯಿಯನ್ನು ಕರೆತರಲು ವಾಹನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಿ ಮಾನವೀಯತೆ ಮರೆದಿದ್ದಾರೆ.