ಹುಬ್ಬಳ್ಳಿ: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿಯಾಗಿತ್ತು. ಒಂದೇ ಕುಟುಂಬದ ಐದು ಜನರಲ್ಲಿ ಕೊರೊನಾ ದೃಢಪಟ್ಟಿದ್ದು, ಅದರಲ್ಲಿ ಮೂವರು ಮಕ್ಕಳು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡು ತಾಯಿ ಹಾಗೂ ಮಕ್ಕಳನ್ನು ಒಂದುಗೂಡಿಸಿದೆ.
ಕೊರೊನಾ ದೃಢಪಟ್ಟು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಳೇ ಹುಬ್ಬಳ್ಳಿಯ ಮುಲ್ಲಾ ಓಣಿಯ ಮೂವರು ಮಕ್ಕಳ ಜೊತೆ ತಂಗಲು ಸೋಂಕು ಇಲ್ಲದ ಅವರ ತಾಯಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದು, ತಾಯಿ ಹಾಗೂ ಮಕ್ಕಳನ್ನು ಒಟ್ಟಿಗೆ ಸೇರಿಸಿದೆ.
ಕೊರೊನಾ ಸೋಂಕಿತನ ಅಣ್ಣ ಹಾಗೂ ಅಣ್ಣನ ಮೂವರು ಮಕ್ಕಳಲ್ಲಿ ಸೋಂಕು ಇರುವುದು ಎರಡು ದಿನಗಳ ಹಿಂದೆ ಖಚಿತವಾಗಿತ್ತು. ಐದು ವರ್ಷದ ಗಂಡು ಮಗು, ಮೂರೂವರೆ ವರ್ಷದ ಗಂಡು ಮಗು ಮತ್ತು ಏಳು ವರ್ಷದ ಹೆಣ್ಣುಮಗುವಿಗೆ ಕಿಮ್ಸ್ ನಲ್ಲಿ ಐಸೊಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಕ್ಕಳ ಜೊತೆ ಇರಲು ಸೋಂಕಿತನ 32 ವರ್ಷದ ಪತ್ನಿಗೆ ಅನುಮತಿ ಕೊಡಲಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಸೋಂಕು ದೃಢಪಡದವರು ಹೋಮ್ ಕ್ವಾರಂಟೈನ್ ಆಗಿರಬೇಕು.
ಸೋಂಕು ಇರುವುದು ಖಚಿತವಾಗಿರುವ ರೋಗಿ ಹಾಗೂ ಅವರ ಅಣ್ಣನಿಗೆ ಮೂವರು ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಅದರಲ್ಲೂ ಮೂರೂವರೆ ಮತ್ತು ಐದು ವರ್ಷದ ಮಕ್ಕಳನ್ನು ಸಮಾಧಾನಪಡಿಸಲು ವೈದ್ಯರು ಹಾಗೂ ಸಿಬ್ಬಂದಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದರಿಂದ ಅವರ ತಾಯಿ, ಮಕ್ಕಳೊಂದಿಗೆ ಇರಲು ಅನುಮತಿ ಕೊಡುವಂತೆ ವೈದ್ಯರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು.
ಜಿಲ್ಲಾಧಿಕಾರಿ ಜೊತೆ ಚರ್ಚಿಸಿದ ಬಳಿಕ ಕಿಮ್ಸ್ ವೈದ್ಯರು ಮಕ್ಕಳೊಂದಿಗೆ ಇರಲು ತಾಯಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆ ತಾಯಿಗೆ ವೈಯಕ್ತಿಕ ಸುರಕ್ಷಿತಾ ಸಾಧನ, ಕೈ ಗ್ಲೌಸ್ ಮತ್ತು ಮಾಸ್ಕ್ ನೀಡಲಾಗಿದೆ. ಸೋಂಕಿನ ಲಕ್ಷಣಗಳ ಬಗ್ಗೆ ಜಾಗೃತೆ ವಹಿಸಲು ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ.
ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಪ್ರವೇಶ ಮಾಡಲು ವೈದ್ಯರು ಹಾಗೂ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಇದರಲ್ಲಿ ಅತ್ಯಂತ ಕಟ್ಟುನಿಟ್ಟಾದ ನಿಯಮಗಳಿವೆ. ಐಸೊಲೇಷನ್ ವಾರ್ಡ್‍ಗಳಲ್ಲಿ ಯಾರನ್ನೂ ಬಿಡುವುದಿಲ್ಲ. ಮಕ್ಕಳ ಜೊತೆ ಅನಿವಾರ್ಯವಾಗಿ ಇರಲೇಬೇಕಾದ ಕಾರಣ ತಾಯಿಗೆ ಅವಕಾಶ ಕೊಡಲಾಗಿದೆ. ತಾಯಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಕಿಮ್ಸ್ ನ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.