ಹುಬ್ಬಳ್ಳಿ: ನೆರೆ ಸಂತ್ರಸ್ತರಿಗೆ ಸರ್ಕಾರ ನೀಡಿದ ಪರಿಹಾರದ ಹಣವನ್ನು ಅಧಿಕಾರಿಗಳು ದೋಚಿದ ಘಟನೆ ಕಲಘಟಗಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕಳೆದ 3 ತಿಂಗಳು ಹಿಂದೆ ಸುರಿದ ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರದ ಹಣವನ್ನ ನೀಡಿದೆ. ಆದರೆ ಮಂಜೂರಾದ ಹಣದಲ್ಲಿ ಗ್ರಾಮ ಲೆಕ್ಕಾಧಿಕಾರಿ 50 ಸಾವಿರ ರೂಪಾಯಿ ಸಂತ್ರಸ್ತರಿಂದ ಮರಳಿ ಪಡೆದು ಮೋಸ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.
Advertisement
Advertisement
ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ಬಸನಗೌಡ ಪಾಟೀಲ್ ಹಾಗೂ ಚನ್ನಬಸವ ದೇವಿಕೊಪ್ಪ ಅವರು ಮಳೆಯಿಂದ ಮನೆ ಕಳೆದುಕೊಂಡಿದ್ದರು. ಈ ಇಬ್ಬರು ಸಂತ್ರಸ್ತರಿಗೆ ಸರ್ಕಾರ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಹಣವನ್ನ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಹಣ ಬ್ಯಾಂಕ್‍ನಲ್ಲಿ ಜಮೆಯಾದ ನಂತರ ಗ್ರಾಮ ಲೆಕ್ಕಾಧಿಕಾರಿ ಆನಂದ್ ನಾಯ್ಕ್ ಸಂತ್ರಸ್ತರಿಂದ 50 ಸಾವಿರ ರೂಪಾಯಿ ಮರಳಿ ಪಡೆದು ಅನ್ಯಾಯ ಮಾಡಿದ್ದಾರೆ.
Advertisement
Advertisement
ಬಿಡುಗಡೆಯಾದ ಒಂದು ಲಕ್ಷ ರೂಪಾಯಿ ಪರಿಹಾರದ ಹಣದಲ್ಲಿ 50 ಸಾವಿರ ರೂಪಾಯಿ ಹಣವನ್ನ ಮರಳಿ ಕೊಡದಿದ್ದರೆ ನಿಮ್ಮ ಜಮೀನು, ಮನೆ ಮೇಲೆ ಸರ್ಕಾರಿ ಆಸ್ತಿ ಎಂದು ನಮೂದು ಮಾಡಲಾಗುತ್ತೆ ಎಂದು ಗ್ರಾಮ ಲೆಕ್ಕಾಧಿಕಾರಿ ಸಂತ್ರಸ್ತರಿಗೆ ಹೆದರಿಸಿ ಹಣವನ್ನ ಮರಳಿ ಪಡೆದಿದ್ದಾರೆ. ಅಲ್ಲದೆ ಡಾಟಾ ಎಂಟ್ರಿಯಲ್ಲಿ ಸಿ ಕೆಟಗರಿ ಎಂದು ನಮೂದಾಗಬೇಕಿತ್ತು. ಆದರೆ ಬಿ ಕೆಟಗರಿ ಎಂದು ನಮೂದಾಗಿದೆ ಎಂದು ಹೇಳಿ ಹಣ ಮರಳಿ ಪಡೆಯುವ ಮೂಲಕ ಸಂತ್ರಸ್ತರ ಹಣವನ್ನು ಅಧಿಕಾರಿ ಲೂಟಿ ಮಾಡಿದ್ದಾರೆ.
ಅತಿವೃಷ್ಠಿಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸರ್ಕಾರ ಹಣವನ್ನ ನೀಡಿದರೆ ಗ್ರಾಮ ಲೆಕ್ಕಾಧಿಕಾರಿಗಳು ಸಂತ್ರಸ್ತರಿಂದ ಹಣವನ್ನ ಮರಳಿ ಪಡೆದ ಪರಿಣಾಮ ಸಂತ್ರಸ್ತರು ಇದೀಗ ಸೂಕ್ತ ನ್ಯಾಯ ಕೊಡಿಸಬೇಕೆಂದು ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.