ಹುಬ್ಬಳ್ಳಿ: ತ್ಯಾಜ್ಯ ನಿರ್ವಹಣೆ ಘಟಕ ಬರುವುದನ್ನು ತಡೆಯುವುದಕ್ಕಾಗಿ ಪಾಲಿಕೆಯ ಜಾಗದಲ್ಲೇ ರಾತ್ರೋ ರಾತ್ರಿ ದೇಗುಲವೊಂದು ತಲೆ ಎತ್ತಿದೆ. ಇದನ್ನು ಕಂಡು ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಕಕ್ಕಾಬಿಕ್ಕಿಯಾಗಿದ್ದಾರೆ. ಕೊನೆಗೆ ಜನರ ವಿರೋಧದ ನಡುವೆಯೇ ಪೊಲೀಸರ ನೆರವಿನೊಂದಿಗೆ ದೇವಸ್ಥಾನದ ಪಕ್ಕದಲ್ಲೇ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸುವ ಕೆಲಸ ಶುರುವಾಗಿದೆ.
ಹುಬ್ಬಳ್ಳಿಯ ನಂದಿನಿ ಲೇಔಟ್‍ನಲ್ಲಿ ಪಾಲಿಕೆಗೆ ಸೇರಿರುವ ಅರ್ಧ ಎಕರೆಗೂ ಹೆಚ್ಚಿನ ಪ್ರದೇಶವಿದೆ. ಆ ಜಾಗ ಇಷ್ಟು ದಿನ ಖಾಲಿ ಬಿದ್ದಿತ್ತು. ಈ ಜಾಗದ ಒಂದು ಕಡೆ 500 ಚದರಡಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಪಾಲಿಕೆ ಯೋಜನೆ ಸಿದ್ಧಪಡಿಸಿ ಇದಕ್ಕಾಗಿ ಒಂದು ವರ್ಷದ ಹಿಂದೆಯೇ ಟೆಂಡರ್ ಕೂಡ ಕರೆದಿತ್ತು. ಅದನ್ನು ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿ ಕೆಲಸವೂ ಪ್ರಾರಂಭವಾಗಿತ್ತು.
Advertisement
Advertisement
ಇಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಲು ಅಂದರೆ ವಲಯ- 5, 7 ಹಾಗೂ 10ರ ಕೆಲ ವಾರ್ಡ್‍ಗಳಲ್ಲಿ ಸಂಗ್ರಹಿಸಿರುವ ಕಸವನ್ನು ಇಲ್ಲಿಗೆ ತಂದು ಕಾಂಪ್ಯಾಕ್ಟ್ ಮಾಡುವ ಯೋಚನೆ ಪಾಲಿಕೆಯದ್ದು. ಮೊದಲಿಗೆ 1 ವರ್ಷದ ಹಿಂದೆ ಟೆಂಡರ್ ಕರೆದು ಏಜೆನ್ಸಿಯೊಂದಕ್ಕೆ ಗುತ್ತಿಗೆ ಕೂಡ ನಿಗದಿಯಾಗಿತ್ತು. ಏಜೆನ್ಸಿಯೂ ಕೆಲಸವನ್ನು ಪ್ರಾರಂಭಿಸಿತ್ತು. ಅಡಿಪಾಯ ನಿರ್ಮಾಣದ ಕೆಲಸ ಕೂಡ ಮುಗಿದಿತ್ತು. ಇನ್ನೂ 1 ತಿಂಗಳು ದಾಟಿದ್ದರೆ ಕಟ್ಟಡದ ಸಿವಿಲ್ ಕೆಲಸವೆಲ್ಲ ಮುಕ್ತಾಯವಾಗುತ್ತಿತ್ತು. ಆದರೆ ಅಷ್ಟರೊಳಗೆ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನೆಲ್ಲ ಅಲ್ಲಿಂದ ಸ್ಥಳೀಯರು ಕಳುಹಿಸಿದ್ದು ನಡೆಯಿತು.
Advertisement
Advertisement
ಬಳಿಕ ಎರಡ್ಮೂರು ತಿಂಗಳವರೆಗೂ ಅಲ್ಲಿಗೆ ಪಾಲಿಕೆಯವರು ತೆರಳೇ ಇಲ್ಲ. ಆದರೆ ಅಷ್ಟರೊಳಗೆ ಪಾಲಿಕೆ ಕಟ್ಟಡ ನಿರ್ಮಾಣಕ್ಕೆ ತಂದಿಟ್ಟಿದ್ದ ಸಾಮಾಗ್ರಿಗಳನ್ನೇ ತೆಗೆದುಕೊಂಡು ಸ್ಥಳೀಯರು ಅಲ್ಲಿ ತ್ರೈಯಂಬಕೇಶ್ವರ ದೇವಾಸ್ಥಾನವನ್ನು ನಿರ್ಮಿಸಿದ್ದಾರೆ. ದೇವಸ್ಥಾನ ನಿರ್ಮಿಸಿದರೆ ಅಲ್ಲಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಪಾಲಿಕೆಯವರು ನಿರ್ವಹಿಸುವುದಿಲ್ಲ ಎಂಬ ಕಾರಣಕ್ಕಾಗಿ ನಿರ್ಮಿಸಿ ಪೂಜೆ ಪುನಸ್ಕಾರ ಶುರು ಮಾಡಿದ್ದಾರೆ. ಪಾಲಿಕೆ ಎರಡ್ಮೂರು ತಿಂಗಳಿಂದ ಅಲ್ಲಿನ ನಾಗರಿಕರನ್ನು ಒಪ್ಪಿಸಲು ಶ್ರಮಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.
ಕೊನೆಗೆ ಪೊಲೀಸರ ನೆರವು ಪಡೆದು ದೇವಸ್ಥಾನವನ್ನು ಅದರ ಪಾಡಿಗೆ ಬಿಟ್ಟು ಅದರ ಪಕ್ಕದಲ್ಲೇ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಕಾಮಗಾರಿ ಶುರು ಮಾಡಿದ್ದಾರೆ. ಶುಕ್ರವಾರದಿಂದ ಪ್ರಾರಂಭವಾಗಿರುವ ಕೆಲಸಕ್ಕೂ ಕೆಲ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಅದಕ್ಕೆ ಪೊಲೀಸರ ನೆರವಿನೊಂದಿಗೆ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲಿದ್ದಾರೆ. ಇನ್ನು 10-20 ದಿನಗಳಲ್ಲಿ ಸಿವಿಲ್ ವರ್ಕ್ ಪೂರ್ಣಗೊಳಿಸಲು ಪಾಲಿಕೆ ತೀರ್ಮಾನಿಸಿದೆ. ಪೊಲೀಸರ ಆಗಮನದಿಂದಾಗಿ ಇದೀಗ ವಿರೋಧ ವ್ಯಕ್ತವಾಗಿಲ್ಲ. ಸ್ಥಳೀಯರು ತಮ್ಮ ಪಾಡಿಗೆ ತಾವು ತೆರಳಿದ್ದಾರೆ.
ಆದರೆ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಟ ಪ್ರತಿಭಟನೆ ಮಾಡಿದ್ರು ಜಗ್ಗದ ಪಾಲಿಕೆ ವಿರುದ್ಧ ಇದೀಗ ದೇವಸ್ಥಾನವನ್ನು ನಿರ್ಮಿಸಿದ್ದು ಮಾತ್ರ ಬಹು ಚರ್ಚೆಯ ವಿಷಯವಾಗಿರುವುದಂತೂ ಸತ್ಯ.