– 10 ಲಕ್ಷ ರೂ. ವಸೂಲಿ ಬಳಿಕ ಮತ್ತೆ ಬೇಡಿಕೆ
ಹುಬ್ಬಳ್ಳಿ: ನಗರದ ಐತಿಹಾಸಿಕ ಸಿದ್ಧಾರೂಢ ಮಠದ ಟ್ರಸ್ಟಿಗಳನ್ನು ಬ್ಲ್ಯಾಕ್‍ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ ನಿವಾಸಿಗಳಾದ ಸಂತೋಷ್ ಪೂಜಾರಿ, ಸಂಜು, ಗಣೇಶ್ ಹಾಗೂ ಸುನೀಲ್ ಬಂಧಿತ ಆರೋಪಿಗಳು. ಸಿದ್ಧಾರೂಢ ಮಠದ ಟ್ರಸ್ಟಿ ಡಾ. ಬಸನಗೌಡ ಸಂಕನಗೌಡರ್ ಹಾಗೂ ಅಮರಗೋಳದ ವಿಜಯಲಕ್ಷ್ಮಿ ಹನಿಟ್ರ್ಯಾಪ್‍ಗೆ ಒಳಗಾದವರು. ಘಟನೆಯು ಕಳೆದ ತಿಂಗಳು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಡಾ. ಬಸನಗೌಡ ಸಂಕನಗೌಡರ್ ಅಮರಗೋಳದ ನಿವಾಸಿ ವಿಜಯಲಕ್ಷ್ಮಿ ಅವರ ಮನೆಗೆ ಸೆಪ್ಟೆಂಬರ್ 25ರಂದು ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದರು. ಈ ದೃಶ್ಯವನ್ನು ಆರೋಪಿಗಳು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ಮಾಡಿ, 10 ಲಕ್ಷ ರೂ. ಕೊಡಿ ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಹಣ ಕೊಡಿದಿದ್ದರೆ ನಿಮ್ಮ ಏಕಾಂತದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ. ಇಲ್ಲವೇ ಮಾಧ್ಯಮಗಳಿಗೆ ವಿಡಿಯೋ ನೀಡುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಸಮಾಜದಲ್ಲಿ ತಮ್ಮ ಗೌರವ ಹಾಳಾಗುತ್ತದೆ ಎಂದು ಹೆದರಿದ ಟ್ರಸ್ಟಿಗಳು ಹಣ ನೀಡಲು ಒಪ್ಪಿಕೊಂಡಿದ್ದರು. ಅದರಂತೆ 9.50 ಲಕ್ಷ ರೂ.ವನ್ನು ಕೊಟ್ಟು ವಿಡಿಯೋ ನಾಶ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಆರೋಪಿಗಳು ಹೆಚ್ಚಿನ ಹಣದ ಆಸೆಗೆ ಬಿದ್ದು, ಮತ್ತೆ 10 ಸಾವಿರ ರೂ. ಪಡೆದಿದ್ದರು. ಇದರಿಂದ ಕಿರಿಕಿರಿಗೆ ಒಳಗಾದ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಪೊಲೀಸರು ತನಿಖೆ ಆರಂಭಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.