ಹುಬ್ಬಳ್ಳಿ: ಪ್ರೀತಿಸಿದ ಹುಡುಗಿ ಬಣ್ಣ ಹಚ್ಚುವುದು ಬೇಡ ಎಂದಿದ್ದಕ್ಕೆ ಮನನೊಂದ ಪ್ರೇಮಿಯೊಬ್ಬ ಕುತ್ತಿಗೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯ ಮಧುರಾ ಕಾಲೋನಿಯಲ್ಲಿ ನಡೆದಿದೆ.
ಆನಂದನಗರದ ವಿಕ್ಕಿ ಚವ್ಹಾಣ ಕುತ್ತಿಗೆಗೆ ಚಾಕು ಇರಿದುಕೊಂಡ ಯುವಕ. ಈತ ಮಧುರಾ ಕಾಲೋನಿಯ ಯುವತಿಯೊಬ್ಬಳನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ.
ಶುಕ್ರವಾರ ರಂಗಪಂಚಮಿ ಅಂಗವಾಗಿ ಪ್ರಿಯತಮೆಗೆ ಬಣ್ಣ ಹಚ್ಚಲು ಸ್ನೇಹಿತರ ಜೊತೆ ಮಧುರಾ ಕಾಲೋನಿಗೆ ತೆರಳಿದ್ದ. ಆದರೆ ಈ ವೇಳೆ ಯುವತಿ ಬಣ್ಣ ಹಚ್ಚುವುದು ಬೇಡ ಎಂದು ಕೋಪಕೊಂಡು ಹೋಗಿದ್ದಳು.
ಪ್ರಿಯತಮೆಯ ಮಾತಿನಿಂದ ಮನನೊಂದ ವಿಕ್ಕಿ ಕುತ್ತಿಗೆ ಮುಂಭಾಗಕ್ಕೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ನೇಹಿತರು ಯುವಕನನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ಕುರಿತು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.