– ವೈಯಕ್ತಿಕ ಬದುಕು ಲೆಕ್ಕಿಸದೇ ಆರೋಪಿಗೆ ಗುಂಡಿಟ್ಟ ಅನ್ನಪೂರ್ಣ ಯಾರು?
ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆದ 5 ವರ್ಷದ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ತಮ್ಮ ಗುಂಡೇಟಿಗೆ ಬಲಿ ಪಡೆದ ಪಿಎಸ್‌ಐ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ತಮ್ಮ ವೈಯಕ್ತಿಕ ಬದುಕು ಲೆಕ್ಕಿಸದೇ ರಿಸ್ಕ್ ತೆಗೆದುಕೊಂಡ ಪಿಎಸ್‌ಐ (PSI) ಅನ್ನಪೂರ್ಣ ಅವರ ಹಿನ್ನೆಲೆ ರೋಚಕವಾಗಿದೆ.
ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಹುಬ್ಬಳ್ಳಿ (Hubballi) 5 ವರ್ಷದ ಬಾಲಕಿ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ಸಂಹರಿಸಿ, ದಿಟ್ಟ ಸಮಯದಲ್ಲಿ ದಿಟ್ಟ ಹೆಜ್ಜೆಯಿಟ್ಟ ಅಶೋಕ ನಗರ ಪೊಲೀಸ್ ಠಾಣೆ ಲೇಡಿ ಪಿಎಸ್‌ಐ ಅನ್ನಪೂರ್ಣ ರಾಜ್ಯಕ್ಕೆ ಮಾದರಿ ಹೆಣ್ಣು. ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲ್ಲೂಕು ಗುಜನಟ್ಟಿ ಗ್ರಾಮದ ನಿವಾಸಿಯಾಗಿರುವ ಅನ್ನಪೂರ್ಣ ಅವರು ಕಡುಬಡತನದ ರೈತಾಪಿ ಕುಟುಂಬದಿಂದ ಬಂದವರು. ಧಾರವಾಡ (Dharwad) ಕೃಷಿ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಪದವಿ ಮುಗಿಸಿ, ಕಳೆದ ವರ್ಷ ಯುಪಿಎಸ್‌ಸಿ (UPSC) ಪರೀಕ್ಷೆ ಬರೆದು ಪ್ರೀಲಿಮ್ಸ್ ಕ್ಲಿಯರ್ ಮಾಡಿದ್ದರು. ಪಿಎಸ್‌ಐ ಆಗಿ ಆಯ್ಕೆಯಾಗಿ 2018ರಲ್ಲಿ ಸೇವೆಗೆ ಸೇರ್ಪಡೆಯಾಗಿದ್ದರು.ಇದನ್ನೂ ಓದಿ: ಹೊರ ರಾಜ್ಯದ ಕಟ್ಟಡ ಕಾರ್ಮಿಕರಿಂದ ಕ್ರೈಮ್ – ಕಾರ್ಮಿಕ ಇಲಾಖೆ ಜೊತೆ ಸಭೆ ನಡೆಸಿ ಕ್ರಮ: ಪರಮೇಶ್ವರ್
ಮೂಲತಃ ಚೆನ್ನಮ್ಮನ ನೆಲದವರಾಗಿರುವ ಅನ್ನಪೂರ್ಣ ಅವರಿಗೆ ಶೌರ್ಯ ಎನ್ನುವುದು ರಕ್ತದಲ್ಲಿಯೇ ಬಂದಿದೆ. ಮುಂದಿನ ತಿಂಗಳು ಅವರ ಮದುವೆ ನಿಗದಿಯಾಗಿದ್ದು, ವೈಯಕ್ತಿಕ ಜೀವನವನ್ನೂ ಲೆಕ್ಕಿಸದೇ ಆರೋಪಿಯನ್ನು ಬಲಿತೆಗೆದುಕೊಂಡಿದ್ದಾರೆ.
ಬಾಲಕಿ ಕೊಲೆಯಾದ ಬಳಿಕ ಪಿಎಸ್‌ಐ ಅನ್ನಪೂರ್ಣ ಆಕೆಯ ಮುಖವನ್ನು ನೋಡಿ ಆಸ್ಪತ್ರೆಯಲ್ಲಿಯೇ ಕಣ್ಣೀರು ಹಾಕಿದ್ದರು. ಆಗಲೇ ಆರೋಪಿ ಸಿಕ್ಕಿದ್ದರೆ ತಕ್ಕ ಕ್ರಮ ಕೈಗೊಳ್ಳುವುದಾಗಿ ಶಪತ ಮಾಡಿದ್ದರು. ಕಾಕತಾಳೀಯೆಂಬಂತೆ ಪಿಎಸ್‌ಐ ಅನ್ನಪೂರ್ಣ ತಂಡಕ್ಕೆ ಆರೋಪಿ ಸೆರೆ ಸಿಕಿದ್ದಾನೆ. ಬಂಧಿಸಲು ಹೋದಾಗ ಆರೋಪಿ ತಮ್ಮ ಮೇಲೆ ದಾಳಿಗೆ ಯತ್ನಿಸಿದ್ದು, ಆತ್ಮ ರಕ್ಷಣೆಗಾಗಿ 2 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದರು. ಆದರೆ ಆತ ಲೆಕ್ಕಿಸದೇ ತಪ್ಪಿಸಿಕೊಳ್ಳಲು ಹೋದಾಗ ಕಾಲಿನತ್ತ ಗುಂಡು ಹಾರಿಸಿದರು. ಆದರೆ ಗುಂಡು ಬೆನ್ನಿಗೆ ತಾಗಿ ಗಾಯಗೊಂಡ ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದ. ಪಿಎಸ್‌ಐ ಅನ್ನಪೂರ್ಣ ಅವರ ಈ ಕ್ರಮಕ್ಕೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಘಟನೆ ಏನು?
ಸೈಕೋಪಾತ್ ಒಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕನಗರ (Ashok Nagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬಿಹಾರ ಮೂಲದ ಸೈಕೋಪಾತ್ ಬಾಲಕಿಯನ್ನ ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದನು. ಬಾಲಕಿ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್‌ನತ್ತ ಬಂದಿದ್ದರು. ಜನ ಬರುತ್ತಿರುವುದನ್ನು ಕಂಡ ಸೈಕೋಪಾತ್ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಎಸ್ಕೇಪ್ ಆಗಿದ್ದನು.ಇದನ್ನೂ ಓದಿ: ಮನೆಗೆ ನುಗ್ಗಿ, ಕಾರು ಸ್ಫೋಟಿಸಿ ಕೊಲೆ ಮಾಡುವುದಾಗಿ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ