ಪಾಲಿಕೆಯ ಅನುದಾನದಲ್ಲಿ ಶೇ.5ರಷ್ಟು ಹಣವನ್ನು ವಿಕಲಚೇತನರ ಶ್ರೇಯೋಭಿವೃದ್ಧಿಗೆ ಬಳಕೆ

Public TV
2 Min Read
hbl vikalachetana

ಹುಬ್ಬಳ್ಳಿ: ಸರ್ಕಾರದ ನಿರ್ದೇಶನದಂತೆ ಪಾಲಿಕೆಯ ಅನುದಾನದಲ್ಲಿ ಶೇ.5ರಷ್ಟನ್ನು ವಿಕಲಚೇತನ ಶ್ರೇಯೋಭಿವೃದ್ಧಿಗಾಗಿ ಬಳಕೆ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಮತ್ತು ವಿಶೇಷ ಅಧಿಕಾರಿ ಎಸ್.ಬಿ ಬೇವೂರ ತಿಳಿಸಿದ್ದಾರೆ.

ನಗರದ ಇಂದಿರಾ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಿಲ್ಲೆಯ ಸ್ವಯಂ ಸೇವಾ ಶಿಕ್ಷಣ ಸಂಸ್ಥೆಗಳು ಮತ್ತು ವಿಕಲಚೇತನರ ಸಂಘ ಸಂಸ್ಥೆಗಳು, ಎ.ಐ.ಜೆ.ವೈ.ಎಫ್.ಎಸ್, ಮಹಾವೀರ ಲಿಂಬ್ ಸೆಂಟರ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಬಿ ಬೇವೂರ ಮಾತನಾಡಿ ಈ ಬಗ್ಗೆ ತಿಳಿಸಿದರು.

hbl vikalachetana 1

ಲಭ್ಯವಾಗುವ ಶೇ.5ರಷ್ಟು ಅನುದಾನದಲ್ಲಿ ಶೇ.50ರಷ್ಟನ್ನು ವೈಯಕ್ತಿಕವಾಗಿ ವಿಕಲಚೇತನ ಸ್ವಯಂ ಉದ್ಯೋಗ, ತರಬೇತಿ, ಸಲಕರಣೆಗಳ ವಿತರಣೆಗಾಗಿ ಬಳಸಲಾಗುತ್ತದೆ. ಉಳಿದ ಶೇ.50ರಷ್ಟು ಅನುದಾನವನ್ನು ವಿಕಲಚೇತನ ಸಮುದಾಯದ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆ. ಮಹಾನಗರದಲ್ಲಿ ವಿಕಲಚೇತನರ ಸಮಯದಾಯದ ಹಿತದೃಷ್ಟಿಯಿಂದ ವಿಶೇಷ ಶೌಚಾಲಯ ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಹಾಗೆಯೇ ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳು, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.

hbl vikalachetana 2

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಶಸ್ತ್ರಚಿಕಿತ್ಸಕ ಡಾ. ಕರ್ಪೂರ ಮಠ, ವಿಕಲಚೇತನರನ್ನು ಅಂಗವಿಕಲರು ಎಂದು ಕರೆಯುವುದನ್ನು ಬಿಡಬೇಕು. ಅವರು ದಿವ್ಯಾಂಗ ಚೇತನರು. ಇವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿಲಚೇತನರಿಗೆ ಅನುಕಂಪ ತೋರುವುದು ಬೇಕಿಲ್ಲ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವಾಗಬೇಕೆಂದು ಹೇಳಿದರು.

hbl vikalachetana 3

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮ ಸಮಿತಿ ಅಧ್ಯಕ್ಷ ಐ.ಎ ಲಕ್ಕುಂಡಿ, ಸರ್ಕಾರದಿಂದ ವಿಕಲಚೇತನರ ಶಾಲೆಗಳಿಗೆ ನೀಡುತ್ತಿರುವ ಅನುದಾನದ ಪ್ರಮಾಣ ಕಡಿಮೆ ಇದೆ. ವಿಕಲಚೇತನರಿಗೆ ಬೋಧಿಸುವ ಶಿಕ್ಷಕರು ವಿಶೇಷ ತರಬೇತಿಯನ್ನು ಪಡೆದಿರುತ್ತಾರೆ. ಆದರೂ ಸರ್ಕಾರಿ ಶಾಲೆಗಳಲ್ಲಿ ನೀಡುವ ಇತರೆ ಶಿಕ್ಷಕರ ವೇತನಕ್ಕಿಂತಲೂ ಅವರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ರಾಜ್ಯದಲ್ಲಿ ವಿಕಚೇತನರಿಗೆ ಬೋಧಿಸುವುದನ್ನು ಕಲಿಸಲು ತರಬೇತಿ ಶಾಲೆಗಳು ಇಲ್ಲ. ಸರ್ಕಾರದ ವತಿಯಿಂದ ಇದನ್ನು ತೆರೆಯಬೇಕು ಎಂದು ಮನವಿ ಮಾಡಿದರು.

hbl vikalachetana 4

ಕಾರ್ಯಕ್ರಮದಲ್ಲಿ ಮಹಾವೀರ ಲಿಂಬ್ ಸೆಂಟರ್ ವತಿಯಿಂದ ವಿಕಲಚೇತನರಿಗೆ ಕೃತಕ ಕಾಲುಗಳನ್ನು ನೀಡಲಾಯಿತು. ವಿಕಲಚೇತನರ ಕ್ರೀಡಾಕೂಟಗಳಲ್ಲಿ ವಿಜೇತರಾದ 350 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಂ. ಅಮರನಾಥ್ ಅವರನ್ನು ಸನ್ಮಾನಿಸಲಾಯಿತು.

ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷ ವೀರೇಂದ್ರ ಜೈನ್, ಸಂಸ್ಕೃತಿ ಸಂಸ್ಥೆಯ ಮಹಾವೀರ ಕುಂದೂರ, ಪ್ರಿಯದರ್ಶಿನಿ ಜನ ಸೇವಾ ಸಂಸ್ಥೆಯ ಡಿ.ಡಿ ಮೇಚನಣ್ಣನವರು, ಧಾರವಾಡದ ಮಮತಾ ಶಿಕ್ಷಣ ಸಂಸ್ಥೆಯ ತಾರಾ ಫರ್ನಾಂಡಿಸ್, ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಕವಿತಾ ಕಳಸ ಸೇರಿದಂತೆ ಶಿಕ್ಷಕರು, ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *