ಹುಬ್ಬಳ್ಳಿ: ಸಿಲಿಂಡರ್ ಸ್ಫೋಟಗೊಂಡು ಆಸ್ಪತ್ರೆ ಸೇರಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಲ್ಲಿ ಮತ್ತೊಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಎಂಟಕ್ಕೇರಿದೆ.
ಪ್ರಕಾಶ ಬಾರಕೇರ (42) ಮೃತಪಟ್ಟಿದ್ದಾರೆ. ಅವಘಡದಲ್ಲಿ ಒಂಬತ್ತು ಮಂದಿ ಮಾಲಾಧಾರಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಎಲ್ಲರ ಸ್ಥಿತಿಯೂ ಚಿಂತಾಜನಕವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸರಣಿಯಂತೆ ಎಂಟು ಮಂದಿ ಕೊನೆಯುಸಿರೆಳೆದಿದ್ದಾರೆ. 25% ಗಾಯಗೊಂಡಿದ್ದ 12 ವರ್ಷ ವಿನಾಯಕ ಬಾರಕೇರ ಎಂಬ ಮಾಲಾಧಾರಿ ಬಾಲಕ ಮಾತ್ರ ಬದುಕಿಳಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
Advertisement
ಕಳೆದ ಭಾನುವಾರ ಬೆಳಗ್ಗೆ ಹುಬ್ಬಳ್ಳಿ ಅಚ್ಚವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ, ಮಾಲಾಧಾರಿಗಳು ಮಲಗಿದ್ದ ವೇಳೆ ಈ ಅವಘಡ ಸಂಭವಿಸಿತ್ತು. ಸಕಾಲದಲ್ಲಿ ಎಲ್ಲಾ ಮಾಲಾಧಾರಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪರಿಣಾಮ, ಬೆಂಗಳೂರಿನ ನುರಿತ ವೈದ್ಯರು ಮತ್ತು ಕಿಮ್ಸ್ ನಿರ್ದೇಶಕ ಎಸ್.ಎಫ್. ಕಮ್ಮಾರ ನೇತೃತ್ವದ ತಂಡ ಗಾಯಾಳುಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
Advertisement
ಡಿ.23ರಿಂದ 31 ರ ನಡುವೆ, ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ, ರಾಜು ಮುಗೇರಿ, ಲಿಂಗರಾಜ್ ಬಿರನೂರು, ಮಂಜುನಾಥ ವಾಗ್ಮೋಡೆ, ಶಂಕರ್ ಚಹ್ವಾಣ್, ತೇಜಸ್ವಿ ಸಾತ್ರೆ, ಪ್ರಕಾಶ್ ಬಾರಕೇರ ಸಾವನ್ನಪ್ಪಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಎಲ್ಲಾ ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಿದ್ದು, ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ಪರಿಹಾರ ನೀಡಲಾಗಿದೆ.