ಹುಬ್ಬಳ್ಳಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಜೆಡಿಎಸ್ ಬಾವುಟ ಹಿಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನವೀಯತೆ ದೃಷ್ಟಿಯಿಂದ ನಮ್ಮ ಕಾರ್ಯಕರ್ತರು ಡಿಕೆಶಿಗೆ ಬೆಂಬಲ ನೀಡಿರಬಹುದು. ಅದಕ್ಕೆ ಅವರು ಬಾವುಟ ಹಿಡಿದಿರಬಹುದು. ಆದರೆ ಅದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ. ಈ ವಿಚಾರವಾಗಿ ಡಿಕೆಶಿಯವರನ್ನೇ ಕೇಳಬೇಕು ಎಂದರು.
ಸಿದ್ದರಾಮಯ್ಯನವರು ಸರ್ಕಾರ ಬೀಳಿಸುವ ಕೆಲಸ ಮಾಡೋದಾದ್ರೆ ಮಾಡಲಿ, ಸಿದ್ದರಾಮಯ್ಯ ಜಾತ್ಯಾತೀತ ವ್ಯಕ್ತಿ. ಅವರು ಪಕ್ಕಾ ಸೆಕ್ಯೂಲರ್ ಬಿಡಿ. ನಾವೂ ಕೋಮುವಾದಿಗಳು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದಬೇಕು ಅಂದುಕೊಂಡವನು. ಆದರೆ ನಾನು ಇನ್ನೂ ಅಲ್ವ-ಸ್ವಲ್ಪ ಮಾನವೀಯತೆ ಉಳಿಸಿಕೊಂಡಿರುವೆ. ಜನರ ಕಷ್ಟಗಳಿಗೆ ಯಾರು ಸ್ಪಂದಿಸುವ ಭರವಸೆ ನೀಡುತ್ತಾರೆಯೋ ಅವರಿಗೆ ನನ್ನ ಬೆಂಬಲ ಇದ್ದೇ ಇರುತ್ತದೆ. ಅದು ಬಿಜೆಪಿಗೋ ಅಥವಾ ಕಾಂಗ್ರೆಸ್ಸಿಗೋ ಗೊತ್ತಿಲ್ಲ. ಸರ್ಕಾರ ಬಿದ್ದಾಗ ಮುಂದೆ ಯೋಚನೆ ಮಾಡೋಣ ಎಂದು ಸಿದ್ದರಾಮಯ್ಯಗೆ ಎಚ್‍ಡಿಕೆ ತಿರುಗೇಟು ನೀಡಿದರು. ಇದನ್ನೂ ಓದಿ: ದೋಸ್ತಿ ಮುಗಿದ ಮೇಲೆ ಇವರಿಗ್ಯಾಕೆ ಅವ್ರ ಉಸಾಬರಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ. ಜನರ ಸಮಸ್ಯೆಗಳಿಗೆ ಎಲ್ಲ ಪಕ್ಷಗಳು ಒಂದಾಗಿ ಕೆಲಸ ಮಾಡಲಿ. ರಾಜಕಾರಣ ಬೇರೆ ಮಾಡೋಣ. ನಾನು ನೆರೆ ಪ್ರವಾಹ ವೀಕ್ಷಣೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲು ಬೆಂಗಳೂರಿಗೆ ಹೋದ ನಂತರ ಕಾಲಾವಕಾಶ ಕೋರುತ್ತೇನೆ ಎಂದು ನುಡಿದರು. ಇದನ್ನೂ ಓದಿ: ಸಿದ್ದರಾಮಯ್ಯರ ಮೇಲೆ ನಂಬಿಕೆ ಇದೆ, ಅವ್ರು ಆ ರೀತಿ ಹೇಳಿರಲ್ಲ: ಡಿಕೆಶಿ ತಿರುಗೇಟು
ನಾನು ಬರೀ ಎಚ್ಚರಿಕೆ ಕೊಟ್ಟರೆ ಎಲ್ಲವೂ ಸರಿಯಾಗುತ್ತಾ, ಸಿದ್ದರಾಮಯ್ಯನವರು ಸರ್ಕಾರ ಬೀಳುವ ಕನಸು ಕಾಣುತ್ತಿದ್ದಾರೆ. ಮಾರ್ಚ್, ಏಪ್ರಿಲ್ ನಲ್ಲಿ ಚುನಾವಣೆಗೆ ಹೋದರೆ ಜನರ ಬಗ್ಗೆ ಯೋಚಿಸುವವರು ಯಾರು, ನಾನು ಹತಾಶನಾಗಿಲ್ಲ, ಅಲ್ಲದೆ ಸಾಫ್ಟ್ ಕಾರ್ನರ್ ಕೂಡ ಆಗಿಲ್ಲ. ನಾನು ಬಿಜೆಪಿ ಜೊತೆ ಹೋಗುವೆ ಎಂದು ಎಲ್ಲೂ ಹೇಳಲ್ಲ. ಸರ್ಕಾರವನ್ನು ಅಭದ್ರಗೊಳಿಸಲು ಮುಂದಾಗಿಲ್ಲ. ಸ್ಥಿರ ಸರ್ಕಾರದ ಬಗ್ಗೆ ಯೋಚಿಸುತ್ತೇನೆ. ಜನರ ಪರವಾಗಿ ಚಿಂತನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.