– ತನಿಖೆಗೆ ಎಸಿಪಿ ನೇತೃತ್ವದಲ್ಲಿ ತಂಡ ರಚನೆ
ಹುಬ್ಬಳ್ಳಿ: ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ಇಡೀ ದೇಶದಲ್ಲೇ ಚೀಮಾರಿ ಹಾಕಿಸಿಕೊಂಡ ಬಳಿಕ ಕೊನೆಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎಚ್ಚೆತ್ತುಕೊಂಡಿದ್ದಾರೆ. ಒಂದು ಕಡೆ ಬಿಜೆಪಿ ಒತ್ತಾಯ ಮತ್ತೊಂದು ಕಡೆ ಕಾಂಗ್ರೆಸ್ (Congress) ಪ್ರತಿರೋಧದ ನಡುವೆಯೂ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ ವಶಕ್ಕೆ ಪಡೆದಿರುವ ಪೊಲೀಸರು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಹುಬ್ಬಳ್ಳಿ ಬಿಜೆಪಿ ಮಹಿಳಾ ಕಾರ್ಯಕರ್ತೆ ಸುಜಾತಾ ಹಂಡಿ (Sujata Handi) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಳೆದು ತೂಗಿ ಕಮಿಷನರ್ ಎನ್ ಶಶಿಕುಮಾರ್ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಕೊನೆಗೂ ಕೇಶ್ವಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮೇಲೆ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಇನ್ಸ್ಪೆಕ್ಟರ್ ಎಸ್.ಕೆ ಹಟ್ಟಿ ಅವರನ್ನ ಕೇಶ್ವಾಪುರ ಠಾಣೆಯಿಂದ ಕಮಿಷನರ್ ಕಚೇರಿಗೆ ವರ್ಗಾವಣೆ ಮಾಡಿ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಸದ್ಯ ಘಂಟಿಕೇರಿ ಠಾಣೆಯ ಇನ್ಸ್ಪೆಕ್ಟರ್ ಜಾದವ್‌ಗೆ ಕೇಶ್ವಾಪುರ ಠಾಣೆ ಹೆಚ್ಚುವರಿ ಪ್ರಭಾರಿಯಾಗಿ ಜವಾಬ್ದಾರಿ ನೀಡಲಾಗಿದೆ.
ವಿವಸ್ತ್ರಗೊಳಿಸಿ ಬಿಜೆಪಿ ಕಾರ್ಯಕರ್ತೆ ಬಂಧನಕ್ಕೆ ದೇಶವ್ಯಾಪ್ತಿ ಅಸಮಾಧಾನ ವ್ಯಕ್ತವಾಗಿತ್ತು. ಬಿಜೆಪಿ ಠಾಣೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸಿತ್ತು. ಇಷ್ಟಾದರೂ ತಮ್ಮ ಸಿಬ್ಬಂದಿಯನ್ನ ಸಮರ್ಥನೆ ಮಾಡಿಕೊಂಡಿದ್ದ ಕಮಿಷನರ್ ಎನ್ ಶಶಿಕುಮಾರ್, ಈಗ ಪ್ರಕರಣದ ತೀವ್ರತೆ ಅರಿತುಕೊಂಡಂತೆ ಕಾಣುತ್ತಿದೆ. ಪ್ರಕರಣ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಿರುವ ಕಮಿಷನರ್, ಪ್ರಕರಣ ತನಿಖೆ ಮಾಡಿ, ಸತ್ಯಾಸತ್ಯತೆ ವಿಚಾರಣೆ ಮಾಡಿ, ವರದಿ ನೀಡುವಂತೆ ಎಸಿಪಿ ನೇತೃತ್ವ ತಂಡಕ್ಕೆ ಜವಾಬ್ದಾರಿ ನೀಡಿದ್ದಾರೆ. ಸಿಇಎನ್ ವಿಭಾಗದ ಎಸಿಪಿ ಶಿವರಾಜ್ ಕಟಕಬಾವಿ ನೇತೃತ್ವದಲ್ಲಿ ವಿಶೇಷ ತಂಡ ತನಿಖೆ ಆರಂಭಿಸಿದೆ.
ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣ ಪೊಲೀಸರ ವಶಕ್ಕೆ
ವಶಕ್ಕೆ ಪಡೆಯುವ ವೇಳೆ ಅನಾರೋಗ್ಯಕ್ಕೆ ತುತ್ತಾಗಿರುವ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹೀಗಾಗಿ ವಶಕ್ಕೆ ಪಡೆಯುವ ಪ್ರಕ್ರಿಯೆ ತಡವಾಗುವ ಸಾಧ್ಯತೆಯಿದೆ. ಮತ್ತೊಂದು ಕಡೆ ಈ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಇಂದು ಬಿಜೆಪಿಯ ಘಟಾನುಘಳಿಗಳು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ, ವಿಪಕ್ಷ ನಾಯಕ ಆರ್.ಅಶೋಕ್, ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ, ಸೇರಿದಂತೆ ಸ್ಥಳೀಯ ಮಾಜಿ, ಹಾಲಿ ಶಾಸಕರು, ಎಂಎಲ್‌ಸಿಗಳು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.



