ಹುಬ್ಬಳ್ಳಿ: ನೇಹಾ ಹತ್ಯೆ ಮಾದರಿಯಲ್ಲಿ ನಡೆದಿದ್ದ ಅಂಜಲಿ ಕೊಲೆ ಪ್ರಕರಣದ (Anjali Murder Case) ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ವಿಶ್ವನ ಬಗ್ಗೆ ಬಗೆದಷ್ಟು ಆತನ ಕೃತ್ಯಗಳು ಬಯಲಾಗುತ್ತಿವೆ. ಈತನ ವೃತ್ತಿಯೇ ಕಳ್ಳತನ, ಪವೃತ್ತಿಯಲ್ಲಿ ಅಮಾಯಕ ಹೆಣ್ಣುಮಕ್ಕಳನ್ನು ಮೋಸ ಮಾಡುತ್ತಿದ್ದ. ಇಷ್ಟೇ ಅಲ್ಲದೇ ಮದ್ಯ ವ್ಯಸನಕ್ಕೆ ಬಲಿಯಾಗಿದ್ದ ಈತ ಹಲವು ಬಾರಿ ಕಳ್ಳತನ ಮಾಡಿ ಸಿಕ್ಕಿಕೊಂಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಗಂಡನನ್ನು ಕಳೆದು ಕೊಂಡಿರುವ ಆರೋಪಿಯ ತಾಯಿ ಸವಿತಾ, ಆತನ ಅಪರಾಧಗಳನ್ನು ನೋಡಲಾಗದೇ ದೂರದಲ್ಲಿದ್ದು ಹೊಟ್ಟೆಪಾಡಿಗೆ ಹೋಟೆಲ್‍ನಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಇದೀಗ ಮಗನ ದುಷ್ಕೃತ್ಯಕ್ಕೆ ವಿಶ್ವನ ಮನೆಗೆ ಬೀಗ ಹಾಕಲಾಗಿದೆ. ಮತ್ತೊಂದು ಕಡೆ ಅವರನ್ನು ಮನೆ ಖಾಲಿ ಮಾಡುವಂತೆ ಮನೆಯ ಮಾಲೀಕರು ಒತ್ತಡ ಹಾಕುತ್ತಿದ್ದಾರೆ.
ಆರೋಪಿ ವಿಶ್ವ ಯಾವಾಗಲಾದರೂ ಒಮ್ಮೆ ತಾಯಿಯನ್ನು ನೋಡಲು ಮನೆಗೆ ಬರುತ್ತಿದ್ದ. ಆಗೆಲ್ಲ ಆತನ ಬಗ್ಗೆ ವಿವಿಧ ಆರೋಪಗಳನ್ನು ಮಾಡುತ್ತಿದ್ದ ಜನ, ಆತನ ತಾಯಿಯ ಮುಖ ನೋಡಿ ಸುಮ್ಮನಾಗುತ್ತಿದ್ದರು. ಇದೀಗ ಆರೋಪಿಯ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದ್ದು, ನೇಹಾ ಪ್ರಕರಣದಲ್ಲಿ ಆರೋಪಿಯನ್ನು ಎನ್‍ಕೌಂಟರ್ ಮಾಡಿದ್ರೆ, ಅಂಜಲಿ ಹತ್ಯೆ ನಡೆಯುತ್ತಿರಲಿಲ್ಲ. ಈಗ ವಿಶ್ವನನ್ನು ಎನ್‍ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಸಹೋದರಿಯರ ಮುಂದೆಯೇ ಯುವತಿಯ ಭೀಕರ ಹತ್ಯೆ – ಸಹಪಾಠಿಯಿಂದಲೇ ಕೃತ್ಯ