ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಲೆ ಮಾಡಿ, ವಾರಗಟ್ಟಲೆ ಏನು ಅರಿಯದಂತೆ ನವರಂಗಿ ನಾಟಕವಾಡಿದ್ದ ಪತಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನೇಕಲ್ ತಾಲೂಕಿನ ನಾಗನಾಯಕನಹಳ್ಳಿಯ ನಿವಾಸಿಯಾದ ಪಾಪಣ್ಣನನ್ನು ಪತ್ನಿ ಕೊಲೆಗೈದ ಆರೋಪದ ಅಡಿ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ತನ್ನ ಪತ್ನಿಗೆ ಬೇರೋಬ್ಬರ ಜೊತೆ ಅನೈತಿಕ ಸಂಬಂಧವಿದೆ ಎಂದು ಪಾಪಣ್ಣನಿಗೆ ಹಲವು ದಿನಗಳಿಂದ ಅನುಮಾನವಿತ್ತು. ಆದರಿಂದ ನಿತ್ಯವು ಮನೆಯಲ್ಲಿ ಪತಿ ಪತ್ನಿ ನಡುವೆ ಜಗಳ ನಡೆಯುತ್ತಲೇ ಇತ್ತು. ಹೀಗೆ ಒಮ್ಮೆ ಜಗಳವಾಡುವಾಗ ಕೋಪಗೊಂಡು ಪಾಪಣ್ಣ ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಪ್ರಶಾಂತ್ ಲೇಔಟ್‍ನ ಪೊದೆಯೊಂದರಲ್ಲಿ ಹಾಕಿದ್ದಾನೆ. ಬಳಿಕ ಎಲ್ಲರ ಬಳಿ ವೆಂಕಟಮ್ಮ ಮಗಳ ಮನೆಗೆ ಹೋಗಿದ್ದಾಳೆ ಎಂದು ಪಾಪಣ್ಣ ಕಥೆ ಕಟ್ಟಿದ್ದ.
ಡಿ.27ರಂದು ಬೆಳಿಗ್ಗೆ 8.30 ಕ್ಕೆ ಮರಸೂರು ಬಳಿಯ ಪ್ರಶಾಂತ್ ಲೇಔಟ್‍ನ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಪೊಲೀಸರು ಈ ಕುರಿತು ತನಿಖೆ ನಡೆಸಿದ ಬಳಿಕ ಆ ಶವ ವೆಂಕಟಮ್ಮ ಅವರದ್ದು ಎಂದು ಪತ್ತೆಯಾಗಿದೆ.
ಬಳಿಕ ಪಾಪಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ವೆಂಟಮ್ಮನಿಗೆ ಅನೈತಿಕ ಸಂಬಂಧ ಇರುವ ಹಿನ್ನೆಲೆ ಪದೇ ಪದೇ ನಮ್ಮಿಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ಕೊಲೆ ಮಾಡಿದೆ ಅಂತ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಆರೋಪಿ ವಿರುದ್ಧ ಸೂರ್ಯಸಿಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv