Monday, 20th August 2018

Recent News

ಮಂಗಳನ ಅಂಗಳದಲ್ಲಿ ಹಾರಲಿದೆ ಹೆಲಿಕಾಪ್ಟರ್!

ವಾಷಿಂಗ್ಟನ್:2020ರ ಜುಲೈನಲ್ಲಿ ಮಂಗಳಗ್ರಹಕ್ಕೆ ರೋವರ್ ಗಗನನೌಕೆಯ ಜೊತೆಗೆ ಹೆಲಿಕಾಪ್ಟರ್ ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ.

ತನ್ನ ಮುಂದಿನ ಮಾರ್ಸ್ 2020 ರೋವರ್ ಮಿಷನ್ ಯೋಜನೆಯ ಭಾಗವಾಗಿ ಸಣ್ಣ ಸ್ವತಂತ್ರವಾದ ಹೆಲಿಕಾಪ್ಟರ್ ಅನ್ನು ಮಂಗಳ ಗ್ರಹದಲ್ಲಿ ಇಳಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮಂಗಳ ಗ್ರಹಕ್ಕೆ ತಲುಪಿದ ನಂತರ ಮೊದಲ 30 ದಿನ ಗ್ರಹದ ಮೆಲ್ಮೈ ಮೇಲೆ ಸುಗಮ ಹಾರಾಟಕ್ಕೆ ಸಂಬಂಧಿಸಿದಂತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅನ್ಯ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸುವ ಯೋಜನೆ ಕುತೂಹಲವನ್ನು ಸೃಷ್ಟಿ ಮಾಡಿದೆ. ಭವಿಷ್ಯದ ವಿಜ್ಞಾನಕ್ಕೆ ಹಾಗೂ ಮಂಗಳ ಗ್ರಹದ ಕುರಿತಾದ ಅನ್ವೇಷಣೆಗೆ ಈ ಯೋಜನೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಮಂಗಳ ಗ್ರಹಕ್ಕೆ ಕಳುಹಿಸುವ ಹೆಲಿಕಾಪ್ಟರ್ ನ ತಯಾರಿ 2013 ರಲ್ಲಿ ಕ್ಯಾಲಿಫೋರ್ನಿಯದ ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿ(ಜೆಪಿಎಲ್)ಯಲ್ಲಿ ಶುರುವಾಗಿದೆ. 4 ಎಲ್‍ಬಿ ಎಸ್ (1.8 ಕೆಜಿ) ತೂಕವಿದ್ದು, ಇದರ ಮುಖ್ಯಭಾಗ ಚೆಂಡಿನ ಆಕಾರದಲ್ಲಿ ಇರಲಿದೆ. ಸೋಲಾರ್ ಸೆಲ್ ಗಳ ಚಾರ್ಜಿಂಗ್ ವ್ಯವಸ್ಥೆ ಇರಲಿದ್ದು ತಣ್ಣಗಿನ ರಾತ್ರಿಯ ಸಂದರ್ಭಕ್ಕೆ ಯಾಂತ್ರಿಕ ತಾಪಮಾನ ವ್ಯವಸ್ಥೆಯನ್ನು ಮಾಡಲಾಗಿದೆ.

ಮಂಗಳ ಗ್ರಹದ ತೆಳುವಾದ ವಾತಾವರಣದಲ್ಲಿ ಹಾರಲು ಹೆಲಿಕಾಪ್ಟರ್ ನ ಬ್ಲೇಡ್ ಗಳು ಭೂಮಿಯ ಮೇಲೆ ತಿರುಗುವ 10 ಪಟ್ಟು ವೇಗವಾಗಿ ತಿರುಗಲಿವೆ. ಭೂಮಿಯ ಮೇಲೆ ಗರಿಷ್ಠ 40 ಸಾವಿರ (12 ಸಾವಿರ ಮೀ) ಅಡಿಗಳ ಮೇಲೆ ಹಾರಾಟ ಮಾಡಬಲ್ಲದಾಗಿದೆ. ಭೂಮಿಯ ವಾತಾವರಣದ 1% ರಷ್ಟು ವಾತಾವರಣ ಮಂಗಳನ ಮೇಲಿದೆ ಎಂದು ತಿಳಿಸಿದರು.

ತೆಳುವಾದ ವಾತಾವರಣದಲ್ಲಿ ಹಾರಾಡುವ ಹೆಲಿಕಾಪ್ಟರ್ ಶಕ್ತಿಶಾಲಿಯಾಗಿ, ಬಲಶಾಲಿಯಾಗಿ ಇರಬೇಕಾಗಿದ್ದು ತೂಕ ಕಡಿಮೆ ಇರಬೇಕಾಗುತ್ತದೆ ಹಾಗಾಗಿ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ನಾಸಾ ಅಧಿಕಾರಿ ಮಿಮಿ ಅಂಗ್ ಹೇಳಿದ್ದಾರೆ.

ರೋವರ್ ಗೆ ಅಂಟಿಕೊಂಡು ಹೆಲಿಕಾಪ್ಟರ್ ಹಾರಲಿದೆ. ಮಂಗಳ ಗ್ರಹಕ್ಕೆ ತಲುಪಿದ ನಂತರ ಹೆಲಿಕಾಪ್ಟರ್ ಅನ್ನು ಒಂದು ಜಾಗದಲ್ಲಿ ಇರಿಸಿ ಅಲ್ಲಿಂದ ಸ್ವಲ್ಪ ದೂರದಲ್ಲಿ ರೋವರ್ ನಿಲ್ಲಲಿದೆ. ವಿಜ್ಞಾನಿಗಳು ಇಲ್ಲಿಂದ ರೋವರ್ ಅನ್ನು ನಿರ್ದೇಶಿಸುವ ಮೂಲಕ ಹೆಲಿಕಾಪ್ಟರ್ ಅನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಹೆಲಿಕಾಪ್ಟರ್ ಯೋಜನೆ ಸಾಹಸದ ಕೆಲಸ ಆದರೆ ಅದರಿಂದ ಅಷ್ಟೇ ಸಹಾಯವಾಗಲಿದೆ. ಒಂದು ವೇಳೆ ಹೆಲಿಕಾಪ್ಟರ್ ಕಾರ್ಯ ನಿರ್ವಹಿಸದಿದ್ದರೂ 2020 ರೋವರ್ ಮಿಷನ್ ಗೆ ಅಡ್ಡಿಯಿಲ್ಲ ಎಂದು ಧೃಡಪಡಿಸಿದ್ದಾರೆ. ಹೆಲಿಕಾಪ್ಟರ್ ಸರಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಗ್ರಹದ ಎಲ್ಲಾ ಭಾಗಗಳ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

 

 

Leave a Reply

Your email address will not be published. Required fields are marked *