ನವದೆಹಲಿ: 32 ಕಂಪನಿಗಳು ಭಾರತದಲ್ಲಿ (India) ಲ್ಯಾಪ್‌ಟಾಪ್ (Laptop) ತಯಾರಿಸಲು ಅರ್ಜಿ ಸಲ್ಲಿಸಿವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಹೇಳಿದ್ದಾರೆ.
ಐಟಿ ಹಾರ್ಡ್‌ವೇರ್‌ಗಾಗಿ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ 2.0 ಗಾಗಿ ಸರ್ಕಾರವು 32 ಅರ್ಜಿಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 25 ದೇಶೀಯ ಕಂಪನಿಗಳಾಗಿವೆ ಎಂದು ಮಾಹಿತಿ ನೀಡಿದರು. ನವೆಂಬರ್‌ನಿಂದ ಚೀನಿ ಲ್ಯಾಪ್‌ಟಾಪ್ (Chini Laptop) ಆಮದುಗಳ ಮೇಲಿನ ನಿರ್ಬಂಧಗಳನ್ನು ಸರ್ಕಾರ ಘೋಷಿಸಿದ ದಿನಗಳ ನಂತರ ಈ ಪ್ರಕಟಣೆ ಬಂದಿದೆ.
ಹೆಚ್‌ಪಿ, ಡೆಲ್, ಲೆನೊವೊ, ಥಾಂಪ್ಸನ್, ಏಸರ್ ಮತ್ತು ಏಸಸ್‌ನಂತಹ ಕಂಪನಿಗಳು ಈ ಯೋಜನೆಯಡಿ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲಿವೆ. ಹೆಚ್‌ಪಿ, ವಿವಿಡಿಎನ್, ಲೆನೊವೊ ಸರ್ವರ್‌ಗಳನ್ನು ತಯಾರಿಸಲಿವೆ.
ನಾನು ಎಲ್ಲಾ ಕಂಪನಿಯೊಂದಿಗೆ ಮಾತನಾಡಿದ್ದೇನೆ. ಆಪಲ್ (Apple) ಕಂಪನಿ ಪಿಎಲ್‌ಐ ವ್ಯಾಪ್ತಿಗೆ ಸೇರಲು ಅರ್ಜಿ ಸಲ್ಲಿಸಿಲ್ಲ. ಈಗಾಗಲೇ ಸಾಧನಗಳನ್ನು ಆಪಲ್ ತಯಾರಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮೇಡ್ ಇನ್ ಚೈನಾಗೆ ಭಾರತ ಶಾಕ್!
ಈ ನಿರ್ಧಾರದಿಂದ 3.35 ಲಕ್ಷ ಕೋಟಿ ರೂ. ಉತ್ಪಾದನೆ ನಿರೀಕ್ಷೆ ಇದ್ದು, ಸುಮಾರು 75 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ. ನೋಯ್ಡಾದಲ್ಲಿ ಮುಂದೆ ಡಿಕ್ಸನ್ ಕಾರ್ಖಾನೆಯ 25 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ ಎಂದು ಅವರು ಹೇಳಿದರು.
ಡೆಲ್‌ನಂತಹ ಕಂಪನಿಗಳು ಸಹ ಪಿಎಲ್‌ಐ ಯೋಜನೆಗೆ ಬರುತ್ತಿರುವುದರಿಂದ ಲ್ಯಾಪ್‌ಟಾಪ್‌ಗಳ ತಯಾರಿಕೆಯು ಏಪ್ರಿಲ್ 2024 ರ ವೇಳೆಗೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ನಿರ್ಬಂಧ ಹೇರಿದ್ದು ಯಾಕೆ?
ಎಲೆಕ್ಟ್ರಾನಿಕ್ಸ್, ಮಷಿನರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಬಿಡಿಭಾಗಗಳು, ಸೋಲಾರ್ ಸೆಲ್ ಮಾಡ್ಯೂಲ್ ಭಾರತ ಚೀನಾದಿಂಧ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಪೈಕಿ ಈ ವಸ್ತುಗಳ ಪಾಲು 65%. ಅದರಲ್ಲೂ ಭಾರತದ ಕಂಪ್ಯೂಟರ್ ಆಮದಿನಲ್ಲಿ ಚೀನಾ ಪಾಲು70%ರಿಂದ 80% ರಷ್ಟಿದೆ.
ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಕಂಪ್ಯೂಟರ್ಸ್, ಸಣ್ಣ ಕಂಪ್ಯೂಟರ್‌ಗಳು, ಸರ್ವರ್‌ಗಳು, ಡಾಟಾ ಸಂಸ್ಕರಣಾ ಮಷಿನ್‌ಗಳು ಆಮದಿಗೆ ನಿರ್ಬಂಧ ಹೇರಿದೆ. ಆದರೆ ಇದು ಸಂಪೂರ್ಣ ನಿಷೇಧವಲ್ಲ. ನಿರ್ಬಂಧ ಮಾತ್ರ ಹೇರಲಾಗಿದೆ. ಈ ಮೇಲೆ ತಿಳಿಸಿದ ಯಾವುದೇ ವಸ್ತುಗಳನ್ನು ವ್ಯಾಪಾರಿಗಳು ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು ಎಂದರೆ ಕೇಂದ್ರ ಸರ್ಕಾರದ ಅನುಮತಿ ಅಥವಾ ಲೈಸೆನ್ಸ್ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.
ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ಮೌಲ್ಯಮಾಪನ ಸೇರಿ 20 ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಒಂದು ಬಾರಿಯ ಸರ್ಕಾರ ವಿನಾಯ್ತಿ ನೀಡಲಾಗಿದೆ. ಕೇಂದ್ರ ಸರ್ಕಾರ ಹೇರಿದ ನಿರ್ಬಂಧ ಅಕ್ಟೋಬರ್ 31ವರೆಗೆ ಜಾರಿಯಾಗುವುದಿಲ್ಲ.
Web Stories