5 ವರ್ಷದ ಅವಧಿ ಮುಗಿದ ಬಳಿಕ ಭಾರತದ ರಾಜ್ಯಗಳಲ್ಲಿ ಹೊಸ ಸರ್ಕಾರಗಳು ಆಡಳಿತಕ್ಕೆ ಬರುವುದು ಹೊಸದೆನಲ್ಲ. ಆಡಳಿತ ವಿರೋಧಿ ಅಲೆಯಿಂದಾಗಿ ಅಧಿಕಾರದಲ್ಲಿದ್ದ ಪಕ್ಷಗಳು ಪ್ರತಿಪಕ್ಷದ ಸ್ಥಾನ ಪಡೆಯುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆಡಳಿತದಲ್ಲಿರುವ ಪಕ್ಷ ಚೆನ್ನಾಗಿ ಕೆಲಸ ಮಾಡಿದರೆ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಹಾಗೆಂದು ಮೂರನೇ ಬಾರಿ ಅಧಿಕಾರ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನರೇಂದ್ರ ಮೋದಿ ಮೂರು ಬಾರಿ ತವರಿನಲ್ಲಿ ಕಮಲವನ್ನು ಅರಳಿಸಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
2002ರಲ್ಲಿ ಗೋಧ್ರಾ ಹತ್ಯಾಕಾಂಡದಿಂದಾಗಿ ಹಿಂದೂಗಳ ಮತ ಬಿಜೆಪಿಗೆ ಸಿಕ್ಕಿ ನರೇಂದ್ರ ಮೋದಿ ಅಧಿಕಾರಕ್ಕೆ ಏರಿದ್ದರೆ, 2007 ಮತ್ತು 2012ರಲ್ಲಿ ಮತ್ತೊಮ್ಮೆ ಮೋದಿ ಗೆದ್ದಿದ್ದು ತನ್ನ ಅಭಿವೃದ್ಧಿ ಮಂತ್ರದಿಂದ. ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಕೋಮುವಾದಿ ಎಂದು ಎಷ್ಟೇ ಜರೆದರೂ ಜನರು ಅಭಿವೃದ್ಧಿಯನ್ನು ಮೆಚ್ಚಿ ಮೋದಿಯನ್ನು ಎರಡು ಬಾರಿ ಅಪ್ಪಿಕೊಂಡರು.
Advertisement
ಹಾಗಾದರೆ ಮೋದಿ ಗುಜರಾತ್ ನಲ್ಲಿ ಏನು ಮಾಡಿದ್ದಾರೆ ಎನ್ನುವ ಪ್ರಶ್ನೆ ಮೂಡುವುದು ಸಹಜ. 2001ರಲ್ಲಿ ನರೇಂದ್ರ ಮೋದಿ ಸಿಎಂ ಆದ ಬಳಿಕ ಗುಜರಾತ್ ಅಭಿವೃದ್ಧಿ ವಿಚಾರದಲ್ಲಿ ಅಂಬೆಗಾಲು ಇಡಲು ಆರಂಭಿಸಿತು. ಉದ್ಯಮಿಗಳನ್ನು ಆಕರ್ಷಿಸಲು 2003ರಲ್ಲಿ ಮೋದಿ ವೈಬ್ರೆಂಟ್ ಗುಜರಾತ್ ಆರಂಭಿಸಿದರು. ವೈಬ್ರೆಂಟ್ ಗುಜರಾತ್ ಆರಂಭವಾದ ಬಳಿಕ ಭಾರತದ ಕೈಗಾರಿಕಾ ಅಭಿವೃದ್ಧಿ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಸ್ಥಾನ ಸಿಕ್ಕಿತು.
Advertisement
ಅಂಕಿ ಸಂಖ್ಯೆಗಳು ಹೇಳುವಂತೆ ಗುಜರಾತ್‍ನಲ್ಲಿ ನರೇಂದ್ರ ಮೋದಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ 1,23,573 ಕೋಟಿ ರೂ. ರಾಜ್ಯದ ಆಂತರಿಕ ಉತ್ಪನ್ನ(ಜಿಎಸ್‍ಡಿಪಿ) ಇತ್ತು. 2014-15 ರ ಅವಧಿಗೆ ಇದು 8,95,927 ಕೋಟಿ ರೂ. ಏರಿಕೆಯಾಗಿತ್ತು. 2017ರ ಏಪ್ರಿಲ್ 30ರ ವೇಳೆಗೆ 507 ಮೂಲಭೂತ ಸೌಕರ್ಯಗಳ ಯೋಜನೆಗಳು ಗುಜರಾತ್ ನಲ್ಲಿ ಪ್ರಗತಿಯಲ್ಲಿದ್ದು, ರಾಜಧಾನಿ ಅಹಮದಾಬಾದ್ ಒಂದರಲ್ಲೇ 2,90,226 ಕೋಟಿ ರೂ. ಕಾಮಗಾರಿಗಳು ಪ್ರಗತಿಯಲ್ಲಿವೆ. ಇದು ರಾಷ್ಟ್ರೀಯ ಯೋಜನಾ ವೆಚ್ಚದಲ್ಲಿ 5.7% ರಷ್ಟು ಪ್ರತಿನಿಧಿಸುತ್ತಿದ್ದು ದೇಶದ 15 ಉತ್ಪದನಾ ವಲಯಗಳಲ್ಲಿ ಗುಜರಾತ್ ನಂ.1 ಸ್ಥಾನದಲ್ಲಿದೆ.
Advertisement
Advertisement
ಅಧಿಕಾರದ ಗದ್ದುಗೆ ಏರಿದ ಬಳಿಕ ನರೇಂದ್ರ ಮೋದಿ ಗುಜರಾತ್ ನಲ್ಲಿ ಉದ್ಯಮ ಸ್ನೇಹಿ ಆಡಳಿತವನ್ನು ಸ್ಥಾಪನೆ ಮಾಡಲು ಆರಂಭಿಸಿದ ಪರಿಣಾಮ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹೂಡಿಕೆದಾರರು ಗುಜರಾತ್ ಕಡೆ ಆಕರ್ಷಿತರಾದರು. 2003ರಲ್ಲಿ ನಡೆದ ಮೊದಲ ಆವೃತ್ತಿಯ ವೈಬ್ರೆಂಟ್ ಗುಜರಾತ್‍ನಲ್ಲಿ 125 ವಿದೇಶಿ ಪ್ರತಿನಿಧಿಗಳು 200 ಅನಿವಾಸಿ ಭಾರತೀಯರು ಹಾಗೂ 45 ದೇಶದ 200 ಅಧಿಕಾರಿಗಳು ಭಾಗಿಯಾಗಿದ್ದರೆ, 2017ರ ಜನವರಿಯಲ್ಲಿ ನಡೆದ ಎಂಟನೇ ಆವೃತ್ತಿಯಲ್ಲಿ 115 ದೇಶಗಳ ಪ್ರತಿನಿಧಿಗಳು ಹಾಗೂ 25 ಸಾವಿರ ಅತಿಥಿಗಳು ಭಾಗಿಯಾಗಿದ್ದರು.
ಒಂದು ವೇಳೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋತು ಹೋದರೆ ಗುಜರಾತಿನಲ್ಲಿ ಹೂಡಿಕೆ ಮಾಡಿರುವ ಉದ್ಯಮ ಸಮುದಾಯಕ್ಕೆ ಬಲವಾದ ಪೆಟ್ಟು ಬೀಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಒಂದು ದಶಕದಿಂದಲೂ ಒಂದೇ ಪಕ್ಷ ಆಡಳಿತದಲ್ಲಿದ್ದ ಕಾರಣ ಉದ್ಯಮಿಸ್ನೇಹಿ ರಾಜ್ಯವಾಗಿ ಗುಜರಾತ್ ಪರಿವರ್ತನೆಯಾಗಿದೆ. ಆದರೆ ಈ ಬಾರಿ ಸೋತು ಬೇರೆ ಪಕ್ಷ ಅಧಿಕಾರ ಏರಿದರೆ ಉದ್ಯಮಿಗಳು ಸರ್ಕಾರದ ಮೇಲೆ ಇಟ್ಟಿದ್ದ ನಂಬಿಕೆ ಕುಸಿಯಬಹುದು.
ಈ ಹಿಂದೆ ನರೇಂದ್ರ ಮೋದಿ ರತನ್ ಟಾಟಾ ಅವರಿಗೆ ಕರೆ ಮಾಡಿ ಗುಜರಾತ್ ನಲ್ಲಿ ವಾಹನ ಉತ್ಪಾದನಾ ಸಂಸ್ಥೆ ಟಾಟಾ ಮೋಟರ್ಸ್ ಪ್ರಾರಂಭಿಸುವಂತೆ ಮನವಿ ಮಾಡಿದರು. ಜೊತೆಗೆ ಟಾಟಾ ಮೋಟರ್ಸ್ ನ ಗುಜರಾತ್ ಗೆ ಕರೆ ತಂದಿದ್ದರು. ಅಂಬಾನಿ ಸಹೋದರರು ಗುಜರಾತ್ ನಲ್ಲಿ ಭಾರಿ ಮೊತ್ತದ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಇಂಜಿನಿಯರಿಂಗ್ ಲಿಮಿಟೆಡ್, ಟಾಟಾ ಗ್ರೂಪ್ಐಸೇರಿದಂತೆ ಹಲವು ಕಂಪನಿಗಳು ಹೂಡಿಕೆ ಮಾಡಿದ್ದು, ಹಲವು ಸಂಸ್ಥೆಗಳಿಗೆ ಇವು ಹಣಕಾಸಿನ ನೆರವು ನೀಡುತ್ತಿವೆ.
ಔಷಧಿ, ಸೋಲಾರ್ ಹಾಗೂ ಇತರೆ ನವೀಕರಿಸ ಬಹುದಾದ ವಸ್ತುಗಳು, ಹಣಕಾಸು ಸೇವೆಗಳು, ಹೈಸ್ಪೀಡ್ ರೈಲು, ಜೈವಿಕ ತಂತ್ರಜ್ಞಾನ ಸೇರಿದಂತೆ ಎಲ್ಲ ಉದ್ಯಮಗಳು ಬಿಜೆಪಿ ಸರ್ಕಾರದಂತೆ ಸ್ಥಿರ ರಾಜಕೀಯ ಪರಿಸ್ಥಿತಿ ಯನ್ನು ಬಯಸುತ್ತಿದ್ದಾರೆ. ಅದರಲ್ಲೂ ಹೊಸ ಉದ್ಯೋಗ ಅವಕಾಶಗಳನ್ನು ನಿರೀಕ್ಷಿಸುತ್ತಿರುವ ಯುವ ಜನತೆ ಮೋದಿಗೆ ಜೈ ಹೇಳಬಹುದಾದರೂ ಜಿಎಸ್‍ಟಿ ಮತ್ತು ನೋಟ್ ಬ್ಯಾನ್ ನಂತರ ವ್ಯಾಪಾರಿ ಕುಟುಂಬಗಳು ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎನ್ನುವುದು ಸದ್ಯದ ಕುತೂಹಲ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ವ್ಯಾಪಾರಿಗಳ ಜೊತೆ ಮಾತನಾಡಿದ್ದು, ಅಧಿಕಾರಕ್ಕೆ ಬಂದರೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಗುಜರಾತ್ ನಲ್ಲಿ ಕಾಂಗ್ರೆಸ್ ಪೂರ್ಣವಾಗಿ ಬಹುಮತ ಬಂದರೆ ತೊಂದರೆ ಇಲ್ಲ. ಒಂದು ವೇಳೆ ಬಹುಮತ ಸಾಧಿಸಲು ವಿಫಲವಾಗಿ ಇತರೆ ಪ್ರಾದೇಶಿಕ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳ ನೆರವನ್ನು ಕಾಂಗ್ರೆಸ್ ಅವಲಂಬಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರ ನಿಲುವು ಮತ್ತು ಅಜೆಂಡಾ ಬದಲಾಗುವುದರಿಂದ ರಾಜಕೀಯ ಏರುಪೇರುಗಳಿಗೆ ಕಾರಣವಾಗಬಹುದು. ಹೀಗಾಗಿ ಸ್ಥಿರ ಸರ್ಕಾರದ ಕೊರತೆಯಿಂದ ಹೂಡಿಕೆ ಮಾಡಲು ಬಂಡವಾಳಶಾಹಿಗಳು ಹಿಂದೇಟು ಹಾಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕೇಂದ್ರದಲ್ಲಿರುವ ಪಕ್ಷವೇ ರಾಜ್ಯದಲ್ಲಿದ್ದರೆ ಹಣಕಾಸಿನ ನೆರವು ಹೆಚ್ಚು ಸಿಗುತ್ತದೆ. ಅಷ್ಟೇ ಅಲ್ಲದೇ ಉದ್ಯಮ ಸ್ಥಾಪನೆ ಸಂಬಂಧ ರಾಜ್ಯ ಸರ್ಕಾರಗಳು ಲಾಬಿ ಮಾಡಲು ಅವಕಾಶವಿರುತ್ತದೆ. ಒಂದು ವೇಳೆ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಹೆಚ್ಚು ಬಂಡವಾಳ ಹೂಡಿಕೆಯನ್ನು ತನ್ನ ಆಡಳಿತ ಇರುವ ರಾಜ್ಯಗಳಿಗೆ ಬದಲಾಯಿಸಬಹುದು.
ಅಭಿವೃದ್ಧಿ ಮಂತ್ರ ಪಠಿಸುತ್ತಾ ಪ್ರಧಾನಿ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾದರು. ಆದರೆ ಈಗ ಅವರು ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಮೋದಿಯೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಆದರೆ ಈ ಬಾರಿ ಹಿಂದಿನ ಪರಿಸ್ಥಿತಿ ಇಲ್ಲ. ಹೀಗಾಗಿ ಅರ್ಥಶಾಸ್ತ್ರ ಮತ್ತು ರಾಜಕೀಯವನ್ನು ಅರ್ಥ ಮಾಡಿಕೊಂಡಿರುವ ಗುಜರಾತ್ ಜನ ಈ ಬಾರಿ ಹೇಗೆ ತಮ್ಮ ಮತವನ್ನು ಚಲಾಯಿಸಲಿದ್ದಾರೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.