ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ʻವ್ಯಾಲೆಂಟೆನ್ಸ್ ಡೇʼ ಇನ್ನೇನು ತುದಿಗಾಲಿನಲ್ಲಿದೆ. ಪ್ರೇಮಿಗಳ ದಿನಕ್ಕೆ ಸಾಂಕೇತಿಕವಾಗಿ ಈಗಾಗಲೇ ರೋಸ್ ಡೇ, ಪ್ರಪೋಸ್ ಡೇ, ಚಾಕೊಲೇಟ್ ಡೇ ನಡೆದು ಇದೀಗ ಪ್ರೇಮಿಗಳ ದಿನ ಬಂದೇ ಬಿಟ್ಟಿದೆ.
ಪ್ರಪಂಚದಾದ್ಯಂತ ಪ್ರೇಮಿಗಳು ಈ ದಿನದಂದು ಹೂವು, ಉಡುಗೊರೆ, ಗ್ರೀಟಿಂಗ್ ಕಾರ್ಡ್‌ಗಳನ್ನು ನೀಡುವ ಮೂಲಕ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಭಾವನೆಯೊಂದಿಗೆ, ಒಬ್ಬರಿಗೊಬ್ಬರಲ್ಲಿರುವ ಕಾಳಜಿ, ಮಮಕಾರ, ನಂಬಿಕೆಯನ್ನು ಭಾವಿಸುತ್ತಾರೆ. ಇದು ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲಿಯೂ ನಡೆಯುವ ಪ್ರೀತಿ ಹಂಚಿಕೊಳ್ಳುವ ಹಬ್ಬವಾಗಿದೆ.
ಪ್ರತಿಯೊಂದು ದೇಶದಲ್ಲಿಯೂ ವಿಭಿನ್ನವಾಗಿ ಆಚರಿಸಲಾಗುವ ಈ ಪ್ರೇಮಿಗಳ ಹೇಗಿರುತ್ತದೆ? ವಿಭಿನ್ನ ಸಂಪ್ರದಾಯ, ಸಡಗರದಿಂದ ಕೂಡಿದ್ದು, ಆಶ್ಚರ್ಯಕರವೂ ಆಗಿರುತ್ತದೆ.
ಫಿನ್‌ಲ್ಯಾಂಡ್
ಫಿನ್‌ಲ್ಯಾಂಡ್‌ನಲ್ಲಿ ಪ್ರೇಮಿಗಳ ದಿನ ಎಂದರೆ ಸ್ನೇಹಿತರ ದಿನ. ಸ್ನೇಹಿತರನ್ನು ಮೆಚ್ಚಿಸುವುದೇ ಈ ದಿನದ ಮೂಲ ಉದ್ದೇಶ. ಸ್ನೇಹಿತರು, ಪ್ರೀತಿ–ಪಾತ್ರರಿಗೆ ನಮ್ಮ ಪ್ರೀತಿ ಹೇಗಿರುತ್ತದೆ ಎಂದು ಸಣ್ಣ ಉಡುಗೊರೆಗಳು, ಇನ್ನಿತರ ಆಕರ್ಷಣೀಯ ವಸ್ತುಗಳನ್ನು ನೀಡುವ ಮೂಲಕ ಪರಸ್ಪರ ತೋರ್ಪಡಿಸುತ್ತಾರೆ.
ಜಪಾನ್
ಪ್ರೇಮಿಗಳ ದಿನದಂದು ಜಪಾನ್‌ನಲ್ಲಿ ಮಹಿಳೆಯರು ತಮ್ಮ ಸಂಗಾತಿಗೆ ಚಾಕೊಲೇಟ್ ಮತ್ತು ಆಭರಣಗಳನ್ನು ನೀಡಿ ಸತ್ಕಾರ ಮಾಡುತ್ತಾರೆ. ಆದರೆ ಜಪಾನ್‌ನಲ್ಲಿ ಪ್ರೇಮಿಗಳ ದಿನ ಫೆಬ್ರುವರಿ 14ಕ್ಕೆ ಮುಗಿಯುವುದಿಲ್ಲ. ಮುಂದುವರಿದು ಮಾರ್ಚ್ 14 ರಂದು ಶ್ವೇತ ದಿನವನ್ನು ಆಚರಿಸಲಾಗುತ್ತದೆ. ಆಗ ಪ್ರೇಮಿಗಳ ದಿನದಂದು ಉಡುಗೊರೆ ಪಡೆದ ಪುರುಷರು ಅದಕ್ಕೆ ಪ್ರತಿಯಾಗಿ ಈ ದಿನದಂದು ವಿಶೇಷ ಉಡುಗೊರೆಯನ್ನು ನೀಡುತ್ತಾರೆ.
ಡೆನ್ಮಾರ್ಕ್, ನಾರ್ವೆ
ಡೆನ್ಮಾರ್ಕ್ ಮತ್ತು ನಾರ್ವೆಯಲ್ಲಿ, ಪ್ರೇಮಿಗಳ ದಿನವು ಕೇವಲ ಸಂಗಾತಿಗಳಿಗೆ ಮಾತ್ರವಲ್ಲ ಈ ದಿನದಂದು ಕುಟುಂಬದವರು, ಸ್ನೇಹಿತರು ಕೂಡ ಲವ್ ಕಾರ್ಡ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದರಲ್ಲಿ ತಮಾಷೆಯ ಕವನಗಳಿಂದ ಹೃದಯ ತಟ್ಟುವ ಸಂಭಾಷಣೆಗಳವರೆಗೆ ಬರೆಯಲಾಗುತ್ತದೆ. ಕೆಲವರು ಕಾಗದದ ಕಟ್-ಔಟ್‌ಗಳು ಮತ್ತು ಕವಿತೆಗಳನ್ನು ಒಳಗೊಂಡ ಅನಾಮಧೇಯ ಪತ್ರಗಳನ್ನೂ ಕಳುಹಿಸುತ್ತಾರೆ. ಅಲ್ಲಿನ ಭಾಷೆಯಲ್ಲಿ ಇದಕ್ಕೆ ಗೇಕೆಬ್ರೆವ್ ಅಥವಾ ಸ್ನೋಡ್ರಾಪ್ ಲೆಟರ್ ಎಂದು ಕರೆಯಲಾಗುತ್ತದೆ. ಈ ಪತ್ರವನ್ನು ಸ್ವೀಕರಿಸುವವರು ಯಾರು ಕಳುಹಿಸಿದ್ದು ಎಂದು ಸರಿಯಾಗಿ ಊಹಿಸಿದರೆ ಅವರು ಈಸ್ಟರ್ ಎಗ್ ಅನ್ನು ಗೆಲ್ಲುತ್ತಾರೆ.(ಒಂದು ರೀತಿಯ ಆಟ)
ಫಿಲಿಫೈನ್ಸ್
ಫಿಲಿಫೈನ್ಸ್‌ನಲ್ಲಿ ಪ್ರೇಮಿಗಳ ದಿನಾಚರಣೆ ಬಹಳ ವಿಶೇಷ. ಸಾಮೂಹಿಕ ವಿವಾಹಗಳ ಮೂಲಕ ಇಲ್ಲಿ ಅದ್ಧೂರಿಯಾಗಿ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಇಲ್ಲಿನ ಸರ್ಕಾರವು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ‘ನನ್ನ ಒಪ್ಪಿಗೆ ಇದೆ‘ ಎಂದು ಹೇಳುವ ಮೂಲಕ ನೂರಾರು ದಂಪತಿ ಒಟ್ಟಿಗೆ ಪ್ರೇಮ ಅಥವಾ ಮದುವೆ ಮೂಲಕ ತಮ್ಮ ಪ್ರೀತಿಯನ್ನು ಮುಂದುವರಿಸುತ್ತಾರೆ.
ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 15 ರಂದು ರೋಮನ್ ಹಬ್ಬ ʻಲುಪರ್ಕಾಲಿಯಾʼ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ತಮ್ಮ ಪ್ರೇಮವನ್ನು ರಹಸ್ಯವಾಗಿ ಇಟ್ಟುಕೊಳ್ಳುವ ಬದಲು ಈ ದಿನದಂದು ಮಹಿಳೆಯರು ಧೈರ್ಯವಾಗಿ ತಾವು ಇಷ್ಟಪಟ್ಟ ಹುಡುಗನ ಹೆಸರನ್ನು ತೋಳುಗಳ ಮೇಲೆ ಅಂಟಿಸಿಕೊಳ್ಳುತ್ತಾರೆ. ಈ ರೀತಿ ಮಾಡುವುದು ಇಷ್ಟವಿಲ್ಲ ಎಂದವರು ಹೂಗಳು ಹಾಗೂ ಸಣ್ಣ ಉಡುಗೊರೆಗಳ ಮೂಲಕವೂ ಮನದ ಭಾವನೆಗಳನ್ನು ಹಂಚಿಕೊಳ್ಳಬಹುದು.
ತೈವಾನ್
ಪ್ರೀತಿ ವ್ಯಕ್ತಪಡಿಸುವ ವಿಚಾರದಲ್ಲಿ ತೈವಾನ್‌ನಲ್ಲಿ ಹೂಗಳು ಪ್ರಮುಖ ಪಾತ್ರ ವಹಿಸುತ್ತವೆ. ಪುರುಷರು ಪ್ರೇಮಿಗಳ ದಿನದಂದು ಮತ್ತು ಜುಲೈ 7 ರಂದು ದೊಡ್ಡ ಹೂಗುಚ್ಛಗಳನ್ನು ನೀಡುತ್ತಾರೆ. ಯಾರಾದರೂ 108 ಗುಲಾಬಿಗಳ ಹೂಗುಚ್ಛವನ್ನು ಪಡೆದರೆ ನಿಮಗೆ ಯಾರೋ ಪ್ರಪೋಸ್ ಮಾಡಲು ಸಿದ್ಧವಿದ್ದಾರೆ ಎಂಬ ಅರ್ಥ.
ದಕ್ಷಿಣ ಕೊರಿಯಾ
ದಕ್ಷಿಣ ಕೊರಿಯಾದಲ್ಲಿ ಪ್ರೇಮಿಗಳ ದಿನವು ಒಂದು ತಿಂಗಳ ಕಾಲ ನಡೆಯುವ ಆಚರಣೆಯಾಗಿದೆ. ಫೆಬ್ರವರಿ 14 ರಂದು, ಸಂಗಾತಿಗಳು ಚಾಕೊಲೇಟ್‌ಗಳು ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ನಂತರ, ಮಾರ್ಚ್ 14 ರಂದು, ಜಪಾನ್‌ನ ಸಂಪ್ರದಾಯದಂತೆ ಅವರು ಶ್ವೇತ ದಿನವನ್ನು ಆಚರಿಸುತ್ತಾರೆ. ಅಂತಿಮವಾಗಿ ಏಪ್ರಿಲ್ 14 ರಂದು ಒಂಟಿ ಇರುವವರು ಕಪ್ಪು ದಿನ ಅಥವಾ ಬ್ಲ್ಯಾಕ್ ಡೇಯನ್ನು ಆಚರಿಸುತ್ತಾರೆ.
ಬ್ರೆಜಿಲ್
ಬ್ರೆಜಿಲ್‌ನಲ್ಲಿ, ಜೂನ್ 12 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ದಿಯಾ ದೋಸ್ ನಮೋರಡೋಸ್ ಎಂದು ಈ ದಿನವನ್ನು ಕರೆಯಲಾಗುತ್ತದೆ. ಅಮೆರಿಕದಲ್ಲಿರುವಂತೆ ಬ್ರೆಜಿಲಿಯನ್ನರು ಲಂಚ್, ಡಿನ್ನರ್‌ಗೆ ಹೊರಗೆ ಹೋಗುವುದು, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಅಥವಾ ತಮ್ಮ ಸಂಗಾತಿಯೊಂದಿಗೆ ವಿಶೇಷ ಡೇಟ್ ನೈಟ್ ಅನ್ನು ಆನಂದಿಸುವ ಮೂಲಕ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ.
ಈ ರೀತಿ ಪ್ರತಿ ದೇಶದಲ್ಲಿಯೂ ವಿಭಿನ್ನವಾಗಿ ತಮ್ಮ ಪ್ರೀತಿಯ್ನನ್ನು ಹಂಚಿಕೊಳ್ಳುವ ಮೂಲಕ ಪ್ರೇಮಿಗಳ ದಿನ ಆಚರಿಸುತ್ತಾರೆ.