ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳುವ ಹೊತ್ತಿನಲ್ಲೇ ಜೋ ಬೈಡೆನ್ (Joe Biden) ರಷ್ಯಾದ ಮೇಲೆ ಗಧಾಪ್ರಹಾರ ಮಾಡಿದ್ದಾರೆ. ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವನ್ನು ಆರ್ಥಿಕವಾಗಿ ಮತ್ತಷ್ಟು ಕುಗ್ಗಿಸಲು ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ. ಜಗತ್ತಿನಲ್ಲೇ ಅತಿ ದೊಡ್ಡ ತೈಲ ರಫ್ತುದಾರ ರಾಷ್ಟçಗಳಲ್ಲಿ ರಷ್ಯಾವು ಒಂದು. ಈ ರಾಷ್ಟ್ರವನ್ನು ತೈಲ ವ್ಯಾಪಾರದಲ್ಲೇ ಕಟ್ಟಿಹಾಕಲು ಬೈಡೆನ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕ ಹಾಕಿರುವ ನಿರ್ಬಂಧ ಸಹಜವಾಗಿ ರಷ್ಯಾದ ಗೆಳೆಯರಂತೆಯೇ ಇರುವ ಚೀನಾ ಮತ್ತು ಭಾರತದ ಮೇಲೂ ಪರಿಣಾಮ ಬೀರಿದೆ. ವಿಶ್ವದ ದೊಡ್ಡಣ್ಣನ ವರ್ತನೆಗೆ ಈ ಎರಡೂ ರಾಷ್ಟçಗಳು ಅಸಮಾಧಾನಗೊಂಡಿವೆ. ಪ್ರಮುಖ ಸಂಪನ್ಮೂಲವಾಗಿರುವ ತೈಲ ಆಮದಿಗೆ ಭಾರತ, ಚೀನಾ ಮುಂದೇನು ಮಾಡುತ್ತವೆ ಎಂಬುದು ಸದ್ಯದ ಕುತೂಹಲ.
ರಷ್ಯಾದ (Russia) ಮೇಲೆ ಅಮೆರಿಕ ವಿಧಿಸಿರುವ ಹೊಸ ನಿರ್ಬಂಧಗಳೇನು? ಜೋ ಬೈಡೆನ್ ನಿರ್ಬಂಧ ಹೇರಿದ್ಯಾಕೆ? ಇದರಿಂದ ಚೀನಾ, ಭಾರತದ ಮೇಲಾಗುವ ಪರಿಣಾಮಗಳೇನು?.. ಎಂಬಿತ್ಯಾದಿ ಪ್ರಶ್ನೆಗಳಿಗೆ ಮಾಹಿತಿ ಇಲ್ಲಿದೆ.
Advertisement
Advertisement
ರಷ್ಯಾದ ತೈಲ ಉತ್ಪಾದಕರು, ಟ್ಯಾಂಕರ್‌ಗಳಿಗೆ ನಿರ್ಬಂಧ
ವಿಶ್ವದ ಎರಡನೇ ಅತಿದೊಡ್ಡ ತೈಲ ರಫ್ತುದಾರ ದೇಶ ರಷ್ಯಾ. ಈ ದೇಶದ 2 ತೈಲ ಉತ್ಪಾದಕರಾದ ಗಾಜ್‌ಪ್ರೊಮ್ ನೆಫ್ಟ್, ಸುರ್ಗುಟ್ನೆಫ್ಟೆಗಾಸ್ ಮತ್ತು ರಷ್ಯಾದ ತೈಲವನ್ನು ಸಾಗಿಸುವ 183 ಹಡಗುಗಳ ಮೇಲೆ ಯುಎಸ್ ಹೊಸ ನಿರ್ಬಂಧಗಳನ್ನು ಹೇರಿದೆ. ಕಳೆದ ವಾರ ನಿರ್ಬಂಧಗಳ ಕುರಿತು ಬೈಡೆನ್ ಘೋಷಣೆ ಮಾಡಿದ್ದಾರೆ. ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾಗೆ ಪ್ರಮುಖ ಆದಾಯ ಮೂಲವಾಗಿರುವ ಕ್ಷೇತ್ರವನ್ನೇ ಗುರಿಯಾಗಿಸಿ ಅಮೆರಿಕ ಈ ನಿರ್ಧಾರ ಪ್ರಕಟಿಸಿದೆ. ‘ರಷ್ಯಾದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ವಲಯಗಳ ಮೇಲೆ ನಿರ್ಬಂಧ ಹೇರಲು ಇದು ಸಹಕಾರಿಯಾಗಲಿದೆ’ ಬೈಡೆನ್ ತಿಳಿಸಿದ್ದಾರೆ. ಈ ವಲಯಗಳು ರಷ್ಯಾದ ಆರ್ಥಿಕತೆಯ ಚಾಲಕರು ಎಂದು ಭಾವಿಸಲಾಗಿದೆ. ಅದಕ್ಕೆ ಕಡಿವಾಣ ಹಾಕುವುದೇ ಯುಎಸ್ ಉದ್ದೇಶವಾಗಿದೆ.
Advertisement
ಭಾರತ-ಚೀನಾಗೆ ರಷ್ಯಾ ತೈಲ
ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು 2022 ರಲ್ಲಿ ಗ್ರೂಪ್ ಆಫ್ ಸೆವೆನ್ ದೇಶಗಳು ಹೇರಿದ ಬೆಲೆಯ ಮಿತಿಯಿಂದಾಗಿ ಯೂರೋಪ್‌ನಿಂದ ಏಷ್ಯಾಗೆ ರಷ್ಯಾದ ತೈಲ ವ್ಯಾಪಾರವನ್ನು ಬದಲಾಯಿಸಲಾಗಿತ್ತು. ಆಗಿನಿಂದ ಹೆಚ್ಚಿನ ಟ್ಯಾಂಕರ್‌ಗಳನ್ನು ಭಾರತ (India) ಮತ್ತು ಚೀನಾಗೆ (China) ತೈಲ ರವಾನಿಸಲು ಬಳಸಲಾಯಿತು. ಕೆಲವು ಟ್ಯಾಂಕರ್‌ಗಳು ಇರಾನ್‌ನಿಂದ ತೈಲವನ್ನು ರವಾನಿಸಿದ್ದವು.
Advertisement
ಭಾರತದ ಮೇಲೆ ಎಫೆಕ್ಟ್ ಏನು?
ಬೈಡೆನ್ ಆಡಳಿತವು ವಿಧಿಸಿದ ಹೊಸ ನಿರ್ಬಂಧಗಳು, ರಷ್ಯಾದೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಘಟಕಗಳನ್ನೂ ಟಾರ್ಗೆಟ್ ಮಾಡಿವೆ. ರಷ್ಯಾದ ಎರಡು ದೊಡ್ಡ ಗ್ರಾಹಕರಾದ ಭಾರತ ಮತ್ತು ಚೀನಾದೊಂದಿಗಿನ ತೈಲ ವ್ಯಾಪಾರಕ್ಕೆ ಅಡ್ಡಿಪಡಿಸಲಿದೆ. ಗಾಜ್‌ಪ್ರೊಮ್ ನೆಫ್ಟ್, ಸುರ್ಗುಟ್ನೆಫ್ಟೆಗಾಸ್ ದಿನಕ್ಕೆ 1 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ತೈಲವನ್ನು ಉತ್ಪಾದಿಸುತ್ತವೆ. ಇದು ವರ್ಷಕ್ಕೆ 23 ಶತಕೋಟಿ ಡಾಲರ್ ಮೌಲ್ಯದ್ದಾಗಿದೆ. ಈ ಎರಡು ಕಂಪನಿಗಳ ಮೇಲಿನ ನಿರ್ಬಂಧಗಳು ಭಾರತ ಮತ್ತು ಚೀನಾದಲ್ಲಿನ ತೈಲ ಸಂಸ್ಕರಣಾಗಾರರ ಕಳವಳಕ್ಕೆ ಕಾರಣವಾಗಿವೆ.
ಹೊಸ ನಿರ್ಬಂಧಗಳು ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ ರಷ್ಯಾದ ಸರಬರಾಜನ್ನು ಸಂಪೂರ್ಣವಾಗಿ ಅಡ್ಡಿಪಡಿಸಲು ಸಾಧ್ಯವಿಲ್ಲ. ಆದರೆ, ಪರಿಣಾಮ ಬೀರುವುದಂತೂ ಖಚಿತ. ರಷ್ಯಾದ ಬದಲಿಗೆ ಪಶ್ಚಿಮ ಏಷ್ಯಾ ಮತ್ತು ಆಫ್ರಿಕನ್ ದೇಶಗಳಿಂದ ಹೆಚ್ಚಿನ ತೈಲವನ್ನು ಪಡೆಯಲು ಭಾರತೀಯ ಕಂಪನಿಗಳ ಮೇಲೆ ಒತ್ತಡ ಸೃಷ್ಟಿಯಾಗಲಿದೆ. ಅಮೆರಿಕದ ನಿರ್ಬಂಧಗಳು ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು. ಇದರಿಂದ ಎರಡೂ ದೇಶಗಳ ಸರಕು ಸಾಗಣೆ ವೆಚ್ಚ ಹೆಚ್ಚಳ ಆಗಬಹುದು.
ಭಾರತದ ಪ್ಲ್ಯಾನ್ ಏನು?
ಅಮೆರಿಕದ ನಿರ್ಬಂಧಗಳು ಭಾರತದ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ. ಮುಂದಿನ ಎರಡು ತಿಂಗಳಿಗೆ ಅಗತ್ಯವಿರುವ ಕಚ್ಚಾ ತೈಲವನ್ನು ಈಗಾಗಲೇ ಹಡಗುಗಳಲ್ಲಿ ಸಾಗಾಣಿಕೆಗೆ ಲೋಡ್ ಮಾಡಲಾಗಿದೆ. ಇದು ಭಾರತಕ್ಕೆ ಪೂರೈಕೆಯಾಗುವುದರಿಂದ, ತೈಲದ ಅಲಭ್ಯತೆಯಲ್ಲಿ ತಕ್ಷಣವೇ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಹೇಳಿದೆ. ಜನವರಿ 10 ರ ಮೊದಲು ಕಾಯ್ದಿರಿಸಿದ ರಷ್ಯಾದ ತೈಲ ಸರಕುಗಳನ್ನು ನಿರ್ಬಂಧಗಳ ನಿಯಮಕ್ಕೆ ಅನುಗುಣವಾಗಿ ಬಂದರುಗಳಲ್ಲಿ ಬಿಡುಗಡೆ ಮಾಡಲು ಭಾರತಕ್ಕೆ ಅವಕಾಶ ನೀಡಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ನಂತರ ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕವಾಗಿದೆ. ಹೀಗಾಗಿ, ಭಾರತವನ್ನು ತಲುಪಲು ರಷ್ಯಾ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಎಂದು ಭಾರತ ಸರ್ಕಾರದ ಅಧಿಕಾರಿಗಳು ಭಾವಿಸಿದ್ದಾರೆ. ಭಾರತದ ಕಂಪನಿಗಳು ಪಾಲನ್ನು ಹೊಂದಿರುವ ರಷ್ಯಾದ ವೋಸ್ಟಾಕ್ ತೈಲ ಯೋಜನೆಯ ಮೇಲೆ ಹೊಸ ಯುಎಸ್ ನಿರ್ಬಂಧಗಳ ಪರಿಣಾಮಗಳ ಬಗ್ಗೆ ಭಾರತ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
ಭಾರತದ ತೈಲ ಬೆಲೆಗಳ ಮೇಲೆ ಬೀಳುತ್ತಾ ಎಫೆಕ್ಟ್?
ಎರಡು ತಿಂಗಳಲ್ಲಿ ವಿಂಡ್-ಡೌನ್ ಅವಧಿ (ಒಪ್ಪಂದದ ಅವಧಿ ಮುಗಿದ ನಂತರದ ದಿನಗಳು) ಮುಗಿದ ನಂತರವೇ ನಿರ್ಬಂಧಗಳ ಪರಿಣಾಮ ಕಂಡುಬರುವ ಸಾಧ್ಯತೆಯಿದೆ. ಆದರೆ, ಆಗಲೂ ಭಾರತಕ್ಕೆ ತೈಲ ಪೂರೈಕೆ ಸಮಸ್ಯೆಯಾಗುವುದಿಲ್ಲ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ದಿನಕ್ಕೆ 3 ಮಿಲಿಯನ್ ಬ್ಯಾರೆಲ್‌ಗಳ ಬಿಡಿ ಸಾಮರ್ಥ್ಯವನ್ನು ಹೊಂದಿದೆ. ಆದರೆ ಯುಎಸ್, ಕೆನಡಾ, ಬ್ರೆಜಿಲ್ ಮತ್ತು ಗಯಾನಾ ಮುಂತಾದ ಒಪೆಕ್ ಅಲ್ಲದ ಪೂರೈಕೆದಾರರು ಸುಲಭವಾಗಿ ಬ್ಯಾರೆಲ್‌ಗಳನ್ನು ಸೇರಿಸಬಹುದು.
ತೈಲ ದರಗಳ ಹೆಚ್ಚಳವು ಹೆಚ್ಚು ಕಾಲ ಉಳಿಯಬಾರದು. ಮಧ್ಯಪ್ರಾಚ್ಯ ಪೂರೈಕೆದಾರರೊಂದಿಗೆ ಪೂರೈಕೆ ಒಪ್ಪಂದಗಳನ್ನು (2025/26 ವಾರ್ಷಿಕ ಒಪ್ಪಂದ) ಅಂತಿಮಗೊಳಿಸಲು ಮಾತುಕತೆಗೆ ಭಾರತೀಯ ರಿಫೈನರ್‌ಗಳು ಮುಂದಾಗಿದ್ದಾರೆ. ಮಾರುಕಟ್ಟೆಯನ್ನು ಅವಲಂಬಿಸಿ, ಅವರಿಂದ ಹೆಚ್ಚುವರಿ ಬ್ಯಾರೆಲ್‌ಗಳನ್ನು ಪಡೆದುಕೊಳ್ಳಬಹುದು.
4 ತಿಂಗಳ ಗರಿಷ್ಠ ಮಟ್ಟಕ್ಕೆ ತೈಲ ಬೆಲೆ
ಸೋಮವಾರ ತೈಲ ಬೆಲೆಗಳು 2% ನೊಂದಿಗೆ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ರಷ್ಯಾದ ತೈಲದ ಮೇಲೆ ವ್ಯಾಪಕವಾದ ಯುಎಸ್ ನಿರ್ಬಂಧಗಳು ಭಾರತ ಮತ್ತು ಚೀನಾದಲ್ಲಿ ಖರೀದಿದಾರರಲ್ಲಿ, ಇತರ ಪೂರೈಕೆದಾರರನ್ನು ಹುಡುಕಲು ಒತ್ತಡ ಸೃಷ್ಟಿಸಿವೆ. ಬ್ರೆಂಟ್ ಫ್ಯೂಚರ್ಸ್ 1.25 ಡಾಲರ್ ಅಥವಾ 1.6% ನಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 81.01 ಡಾಲರ್‌ಗೆ ಸ್ಥಿರವಾಯಿತು. ಆದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (ಡಬ್ಲ್ಯೂಟಿಐ) ಕಚ್ಚಾ ತೈಲ 2.25 ಡಾಲರ್ ಅಥವಾ 2.9% ನಷ್ಟು ಏರಿಕೆಯಾಗಿ 78.82 ಕ್ಕೆ ಸ್ಥಿರವಾಯಿತು ಎಂದು ವರದಿಯಾಗಿದೆ.
ರಷ್ಯಾ ಮೇಲಿನ ನಿರ್ಬಂಧದ ಪರಿಣಾಮಗಳೇನು?
ಶುಕ್ರವಾರ ಯುಎಸ್ ಘೋಷಿಸಿದ ನಿರ್ಬಂಧಗಳು ರಷ್ಯಾದ ಇಂಧನ ವ್ಯಾಪಾರದ ಮೇಲೆ ಇನ್ನೂ ಹೆಚ್ಚು ಆಕ್ರಮಣಕಾರಿಯಾಗಿದೆ. ನೂತನ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ತಕ್ಷಣ ಉಕ್ರೇನ್ ಸಂಘರ್ಷವನ್ನು ತ್ವರಿತವಾಗಿ ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಹೀಗಾಗಿ, ಬೈಡೆನ್ ಹೇರಿರುವ ನಿರ್ಬಂಧಗಳನ್ನು ಟ್ರಂಪ್ ಉಳಿಸಿಕೊಳ್ಳುತ್ತಾರಾ ಅಥವಾ ಕೈಬಿಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಬೈಡೆನ್ ಅವರ ನಿರ್ಬಂಧದ ಕ್ರಮವು ಜಾಗತಿಕ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸುತ್ತದೆ. ಮಾಸ್ಕೋ ಪ್ರಭಾವವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲವನ್ನೂ ಅಮೆರಿಕ ಮಾಡುತ್ತಿದೆ ಎಂದು ಕ್ರೆಮ್ಲಿನ್ ತಿಳಿಸಿದೆ. ನಿರ್ಬಂಧಗಳಿಗೆ ಅನುಸಾರ, ಯುಎಸ್ ಪೆಟ್ರೋಲಿಯಂ ಸೇವಾ ಕಂಪನಿಗಳು ಫೆಬ್ರವರಿ 27 ರೊಳಗೆ ರಷ್ಯಾದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಗುತ್ತದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಉಕ್ರೇನ್ ಅನ್ನು ಕ್ರೆಮ್ಲಿನ್ ಆಕ್ರಮಿಸಿದ ನಂತರವೂ ಕನಿಷ್ಠ ಎರಡು ಯುಎಸ್-ಮೂಲದ ಜಾಗತಿಕ ಪೂರೈಕೆದಾರರು ರಷ್ಯಾದೊಂದಿಗೆ ತೈಲ ವ್ಯಾಪಾರ ಮುಂದುವರಿಸಿದ್ದಾರೆ.
ಆದರೂ, ಯುಎಸ್‌ನ ವ್ಯಾಪಕವಾದ ನಿರ್ಬಂಧಗಳು ಕಚ್ಚಾ ತೈಲವನ್ನು ಪೂರೈಸುವ ಮಾಡುವ ರಷ್ಯಾದ ಸಾಮರ್ಥ್ಯದ ಮೇಲೆ ಯಾವುದೇ ತಕ್ಷಣದ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ಏಕೆಂದರೆ ಹಿಂದೆ ವಿದೇಶಿ ಹೂಡಿಕೆದಾರರ ಒಡೆತನದ ಕಂಪನಿಗಳು ಸೇರಿದಂತೆ ದೇಶೀಯ ಪೂರೈಕೆದಾರರು ದೇಶದಲ್ಲಿ ಹೆಚ್ಚಿನ ತೈಲ ವ್ಯವಹಾರ ನಡೆಸಿದ್ದಾರೆ. ರಷ್ಯಾದ ತೈಲ ಮಾರುಕಟ್ಟೆಯ ಸುಮಾರು 15% ಮಾತ್ರ ವಿದೇಶಿ ತಂತ್ರಜ್ಞಾನಗಳನ್ನು ಅವಲಂಬಿಸಿದೆ. ಯುಎಸ್ ನಿರ್ಬಂಧಗಳಿಂದ ಆರ್ಕ್ಟಿಕ್ ಮೀಸಲುಗಳಲ್ಲಿ ರಷ್ಯಾದ ಆಕ್ರಮಣ ಮತ್ತು ಕಡಲಾಚೆಯ ಕ್ಷೇತ್ರಗಳ ಅಭಿವೃದ್ಧಿ ನಿಧಾನವಾಗಬಹುದು.