Connect with us

Karnataka

ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ

Published

on

ಬೇಸಿಗೆ ಕಾಲ ಆರಂಭವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಜನರು ತಂಪು ಪಾನೀಯ, ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಬಿಸಿಲು ಮತ್ತು ಬೆವರು ಇವೆರಡು ತ್ವಚೆಯನ್ನು ಹಾಳು ಮಾಡುತ್ತವೆ. ಇದರ ಜೊತೆಗೆ ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ.

ಬಿಸಿಲಿನ ಧಗೆಗೆ ಮೈ ಉರಿದು ಚರ್ಮದಲ್ಲಿ ಬಿಸಿಲಿನಿಂದ ಕಪ್ಪು ಕಲೆಗಳು ಹಾಗೂ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬಿಸಿಲಿನಲ್ಲಿ ತ್ವಚೆಯನ್ನು ಆರೈಕೆಗೆ ಮಾಡುವುದು ಮುಖ್ಯವಾಗುತ್ತದೆ.

ಬಿಸಿಲಿನಿಂದ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳಲು ಕೆಲವೊಂದು ಉಪಯುಕ್ತ ಟಿಪ್ಸ್:

1. ಬಟ್ಟೆ: ಮೊದಲಿಗೆ ಬಿಸಿಲಿಗೆ ಮನೆಯಿಂದ ಹೊರ ಹೋಗುವಾಗ ಬಿಗಿ ಉಡುಪು ಧರಿಸಬಾರದು. ಚರ್ಮ ಮುಚ್ಚುವ ಅಥವಾ ಹತ್ತಿಯ ಬಟ್ಟೆಗಳನ್ನು ಧರಿಸಿದರೆ ಉತ್ತಮ. ಸೆಕೆಗೆ ಮೈತುಂಬ ಬಟ್ಟೆ ಧರಿಸಲು ಬಹುತೇಕರು ಇಷ್ಟ ಪಡುವುದಿಲ್ಲ. ಆದರೆ ಚರ್ಮದ ರಕ್ಷಣೆಗಾಗಿ ಎಷ್ಟು ಸಾಧ್ಯವೋ ಅಷ್ಟು ಚರ್ಮವು ಮುಚ್ಚಿಕೊಳ್ಳುವಂತಹ ಉಡುಪನ್ನು ಧರಿಸಬೇಕಾಗುತ್ತಿದೆ. ಸೂರ್ಯನಿಂದ ನಿಮ್ಮ ಮುಖವನ್ನು ರಕ್ಷಿಸಲು ಹ್ಯಾಟ್ ಮತ್ತು ಸನ್‍ಗ್ಲಾಸ್ ಬಳಸಬಹುದು.

2. ದ್ರವ ಪದಾರ್ಥ: ಬೇಸಿಗೆ ಕಾಲದಲ್ಲಿ ದೇಹ, ತ್ವಚೆ ಎಲ್ಲವೂ ಬಿಸಿಲಿಗೆ ಡ್ರೈ ಆಗುತ್ತಿರುತ್ತದೆ. ಹೀಗಾಗಿ ಹೆಚ್ಚಾಗಿ ದ್ರವ ಪದಾರ್ಥ ಸೇವಿಸಬೇಕು. ಇದು ಬೇಸಿಗೆಯಲ್ಲಿ ಚರ್ಮದ ರಕ್ಷಣೆಗೆ ಮುಖ್ಯವಾಗುತ್ತದೆ. ಸಹಜವಾಗಿಯೇ ಬೇಸಿಗೆಯಲ್ಲಿ ಹೆಚ್ಚು ಬೆವರುತ್ತೇವೆ. ಆದ್ದರಿಂದ ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಹೀಗಾಗಿ ಕನಿಷ್ಠ ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಸೂಕ್ತ.

3. ತಂಪು ಪಾನೀಯ: ಬೇಸಿಗೆಯಲ್ಲಿ ತಂಪಾಗುತ್ತದೆ ಎಂದು ತಂಪು ಪಾನೀಯ ಸೇವಿಸುವುದು ಉತ್ತಮವಲ್ಲ. ಬದಲಿಗೆ ನೀರು, ಎಳನೀರು, ವಿವಿಧ ಹಣ್ಣಿನ ಜ್ಯೂಸ್‍ಗಳು ಆರೋಗ್ಯಕ್ಕೆ ಉತ್ತಮ. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಬೇಕು.

4. ಸನ್ ಸ್ಕ್ರೀನ್: ಸುಡುವ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು ಯುವತಿಯರು ಮತ್ತು ಮಹಿಳೆಯರು ಸನ್ ಸ್ಕ್ರೀನ್ ಮೊರೆ ಹೋಗುತ್ತಾರೆ. ತಮ್ಮ ಚರ್ಮಕ್ಕೆ ಹೊಂದುವ ಸನ್ ಸ್ಕ್ರೀನ್ ಬಳಸಿದರೆ ಒಳ್ಳೆಯದು. ಎಣ್ಣೆ ತ್ವಚೆ ಇರುವವರಿಗೆ ಜೆಲ್ ಸನ್ ಸ್ಕ್ರೀನ್ ಉತ್ತಮ, ಒಣಚರ್ಮ ಇರುವವರಿಗೆ ಸನ್ ಸ್ಕ್ರೀನ್ ಉತ್ತಮ. ಹೀಗಾಗಿ ಬೇಸಿಗೆಯಲ್ಲಿ ದಿನದಲ್ಲಿ ಎರಡು ಬಾರಿ ಸನ್ ಸ್ಕ್ರೀನ್ ಬಳಸಬೇಕು.

5. ಕೂದಲ ರಕ್ಷಣೆ: ಹೆಚ್ಚಿನ ಸೂರ್ಯನ ಶಾಖದಿಂದ ತಲೆಗೂದಲು ಒಣಗಬಹುದು ಮತ್ತು ಮಸುಕಾಗಬಹುದು. ಹೀಗಾಗಿ ಮನೆಯ ಹೊರಗೆ ಹೋಗುವಾಗ ಹ್ಯಾಟ್ ಬಳಸುವುದು ಉತ್ತಮ.

6. ಕಲ್ಲಂಗಡಿ ಹಣ್ಣು: ಕಲ್ಲಂಗಡಿ ಹಣ್ಣು ಬೇಸಿಗೆ ಆಪ್ತಮಿತ್ರ ಎಂದು ಹೇಳಬಹುದು. ಯಾಕೆಂದರೆ ಹೆಚ್ಚು ನೀರಿನಾಂಶ ಹೊಂದಿರುವ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ತೇವಾಂಶ ನೀಡಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಒಂದು ತುಂಡು ಕಲ್ಲಂಗಡಿ ಹಣ್ಣನ್ನು ಮುಖಕ್ಕೆ ಉಜ್ಜಿಕೊಳ್ಳಿ. 20 ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸದೆ ರೋಗಗಳ ವಿರುದ್ಧವೂ ಹೋರಾಡುವ ಗುಣವನ್ನು ಹೊಂದಿರುವ ಸಮೃದ್ಧ ಹಣ್ಣಾಗಿದೆ.

7. ಅಲೋವೆರಾ (ಲೋಳೆರಸ): ಲೋಳೆರಸ ಬಿಸಿಲಿನಿಂದ ಸುಟ್ಟ ಗಾಯಕ್ಕೆ ಶಮನ ನೀಡುವುದಲ್ಲದೆ, ಚರ್ಮದಲ್ಲಿ ತೇವಾಂಶವನ್ನು ಧನಾತ್ಮಕವಾಗಿ ಕಾಪಾಡುತ್ತದೆ. ತಾಜಾ ಅಲೋವೆರಾ ತೆಗೆದು ಅದನ್ನು ಸಂಪೂರ್ಣವಾಗಿ ಮುಖಕ್ಕೆ ಮಸಾಜ್ ಮಾಡಿ. ಅಲೋವೆರಾ ಲೋಳೆಯನ್ನು ಐಸ್ ಟ್ರೇಗೆ ಹಾಕಿಟ್ಟು ಬಳಿಕ ಅದನ್ನು ಮುಖಕ್ಕೆ ಉಜ್ಜಿ ಕೊಳ್ಳಿ.

8. ಸೌತೆಕಾಯಿ: ಸೌತೆಕಾಯಿ ಬೇಸಿಗೆಯಲ್ಲಿ ಚರ್ಮಕ್ಕೆ ಹಿತ ನೀಡುವುದಲ್ಲದೆ, ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ. ದಿನನಿತ್ಯವು ಸೌತೆಕಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಬಿಸಿಲಿನಿಂದಾಗುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಹಚ್ಚಿದರೆ ತಂಪಾಗುತ್ತದೆ. ಜೊತೆಗೆ ಹೊಳಪು ಬರುತ್ತದೆ.

9. ನಿಂಬೆಹಣ್ಣು: ನಿಂಬೆ ರಸಕ್ಕೆ ಮೊಸರು ಅಥವಾ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷ ಕಳೆದು ಮುಖ ತೊಳೆದು ನೋಡಿ, ಫ್ರೆಶ್ ಅನ್ನಿಸುತ್ತದೆ. ಮುಖ ತೊಳೆದ ನಂತರ ಮೆತ್ತನೆಯ ಬಟ್ಟೆಯಿಂದ ಮುಖ ಒರೆಸಿ, ರೋಸ್‍ ವಾಟರ್ ಕೂಡ ಹಚ್ಚಬಹುದು. ಮೊಸರಿನ ಜೊತೆ ಕಡ್ಲೆಹಿಟ್ಟು ಅಥವಾ ಅರಿಶಿಣ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಇಮ್ಮಡಿಯಾಗುತ್ತದೆ.

10. ಧೂಳು: ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ ಮತ್ತು ಶರೀರದ ಮೇಲೆ ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯಿರಿ. ಬಿಸಿಲಿಗೆ ಕಪ್ಪು ಚುಕ್ಕೆ, ತುರಿಕೆ, ನವೆ ಉಂಟಾದರೆ ಮೊಸರು, ಟೊಮ್ಯಾಟೊ, ಲಿಂಬೆಹಣ್ಣಿನ ಜ್ಯೂಸ್ ಹಚ್ಚಬಹುದು.

11. ತುಳಸಿ ಎಲೆ: ಬಿಸಿನೀರಿಗೆ ತುಳಸಿ ಎಲೆಗಳನ್ನು ಸೇರಿಸಿ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿಡಿ. ಸುಮಾರು ಐದು ನಿಮಿಷಗಳ ಬಳಿಕ ಈ ಹಬೆಯನ್ನು ಮುಖದ ಚರ್ಮಕ್ಕೆ ಒಡ್ಡುವುದರಿಂದ ಚರ್ಮವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಮೊಡವೆಗಳಿಗೆ ಕಾರಣವಾಗುವ ಧೂಳಿನ ಅಂಶವನ್ನು ಹೋಗಲಾಡಿಸಬಹುದು.

12. ಪುದೀನಾ ಹಾಗೂ ಮೊಸರು: ಪುದೀನಾ ಎಲೆಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಳ್ಳಿ. ನಂತರ ಅದನ್ನು ಫೇಸ್ ಪ್ಯಾಕ್ ರೀತಿ ಮಾಡಿಕೊಂಡು, ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಜೊತೆಗೆ ಮುಖ ಮತ್ತಷ್ಟು ಕಾಂತಿಯುಕ್ತವಾಗುತ್ತದೆ.

Click to comment

Leave a Reply

Your email address will not be published. Required fields are marked *