ಬೆಂಗಳೂರು: ಸಾಮಾಜಿಕ ಜಾಲತಾಣ, ಮೆಸೆಂಜಿಂಗ್ ಅಪ್ಲಿಕೇಶನ್‍ಗಳಿಂದಾಗಿ ಇಂದು ಬಹಳ ವೇಗವಾಗಿ ಸುದ್ದಿ ಸಿಗುತ್ತಿದೆ. ಎಷ್ಟು ವೇಗ ಅಂದರೆ ಆ ಸುದ್ದಿ ವಾಹಿನಿ/ ಪತ್ರಿಕೆಗಳಲ್ಲಿ ಬರುವ ಮೊದಲೇ ಜನರಿಗೆ ತಿಳಿದಿರುತ್ತದೆ.
ಜನರಿಗೆ ವೇಗವಾಗಿ ಸುದ್ದಿಗಳು ತಲುಪುತ್ತಿರುವುದರಿಂದ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ. ಈ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸುದ್ದಿಯ ರೂಪದಲ್ಲಿ ಇರುವ ಕಾರಣ ಇದು ನಿಜವಾದ ಸುದ್ದಿ ಎಂದು ಹಲವು ಜನರು ನಂಬಿ ಶೇರ್ ಮಾಡುತ್ತಾರೆ.
Advertisement
ನಾವು ಶೇರ್ ಮಾಡಿರುವ ಸುದ್ದಿ ಸುಳ್ಳು ಎಂದು ಬಳಕೆದಾರರಿಗೆ ಗೊತ್ತಾಗುವಷ್ಟರಲ್ಲಿ ಹಲವು ಮಂದಿಗೆ ಆ ಸುದ್ದಿ ತಲುಪಿ ಆಗಿರುತ್ತದೆ. ಬರೆಯುವ ಮುನ್ನ ಯೋಚಿಸಿ ಎನ್ನುವಂತೆ ಈಗ ಶೇರ್ ಮಾಡುವ ಮುನ್ನ ಹಲವು ಬಾರಿ ಯೋಚಿಸಬೇಕಾಗುತ್ತದೆ. ಸುಳ್ಳು ಸುದ್ದಿಯನ್ನು ಶೇರ್ ಮಾಡಿದರೆ ವ್ಯಕ್ತಿಗಳು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ನಂಬಿಕೆಯನ್ನು ಉಳಿಸಬೇಕಾದರೆ ನೀವು ಹಲವು ಬಾರಿ ಆ ಪೋಸ್ಟ್ ಅನ್ನು ಚೆಕ್ ಮಾಡಬೇಕಾಗುತ್ತದೆ. ಆ ಪೋಸ್ಟ್ ನಲ್ಲಿರುವ ವಿಚಾರ ಸತ್ಯವೇ? ಸುಳ್ಳೋ ಎನ್ನುವುದಕ್ಕೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇಲ್ಲಿ ಕೆಲ ಮಾಹಿತಿಗಳನ್ನು ನೀಡಲಾಗಿದ್ದು, ಈ ಮೂಲಕ ನೀವು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಬಹುದು.
Advertisement
Advertisement
1. ಹೆಡ್‍ಲೈನ್ ಗಮನಿಸಿ:
ಸಾಮಾನ್ಯವಾಗಿ ಆಶ್ಚರ್ಯ ಸೂಚಕ ಚಿಹ್ನೆ ಮತ್ತು ಕ್ಯಾಚಿ ಹೆಡ್‍ಲೈನ್‍ಗಳು ಸುಳ್ಳು ಸುದ್ದಿಯಲ್ಲಿರುತ್ತದೆ. ಹೆಡ್‍ಲೈನ್‍ನಲ್ಲಿ ಶಾಕಿಂಗ್ ವಿಚಾರಗಳಿದ್ದರೆ ಆ ಸುದ್ದಿ ವಿಶ್ವಾಸಾರ್ಹತೆಯನ್ನು ನಂಬಲು ಬರುವುದಿಲ್ಲ.
Advertisement
2. ಮೂಲಗಳನ್ನು ಪರಿಶೀಲಿಸಿ:
ಮೂಲ ಸುದ್ದಿಯನ್ನು ಸ್ವಲ್ಪ ಬದಲಾಯಿಸಿ ಸುಳ್ಳು ಸುದ್ದಿ ಪ್ರಕಟವಾಗಿರುತ್ತದೆ. ಸಂದೇಹ ಬಂದಾಗ ಮೂಲ ಸುದ್ದಿ ಪ್ರಕಟವಾದ ತಾಣಕ್ಕೆ ಹೋಗಿ ಪರಿಶೀಲಿಸಿಕೊಳ್ಳಿ.
3. ತನಿಖೆ ಮಾಡಿ:
ಸುದ್ದಿ ಬಂದ ಕೂಡಲೇ ನಂಬಲು ಹೋಗಬೇಡಿ. ಸುದ್ದಿ ಪ್ರಕಟವಾದ ಮಾಧ್ಯಮವನ್ನು ಯಾವುದು ಎನ್ನುವುದನ್ನು ಗಮನಿಸಿ. ನಿಮಗೆ ತಿಳಿಯದೇ ಇರುವ ಯಾವುದೋ ತಾಣದಿಂದ ಪ್ರಕಟವಾಗಿದ್ದರೆ ಆ ವೆಬ್‍ಸೈಟ್ ‘About’ ವಿಭಾಗಕ್ಕೆ ಹೋಗಿ ತಾಣದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ.
4. ಸುದ್ದಿ ವಿನ್ಯಾಸ ಗಮನಿಸಿ:
ಮಾಧ್ಯಮಗಳಲ್ಲಿ ಪ್ರಕಟವಾಗುವ ಯಾವುದೇ ಸುದ್ದಿಗೆ ಫಾರ್ಮೆಟ್ ಅಂತ ಇರುತ್ತದೆ. ಆದರೆ ಈ ಸುಳ್ಳು ಸುದ್ದಿಗಳಿಗೆ ಯಾವುದೇ ಫಾರ್ಮೆಟ್ ಶೀಟ್ ಇರುವುದಿಲ್ಲ. ಮಾಹಿತಿಗಳು ಅಸ್ಪಷ್ಟವಾಗಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಅಕ್ಷರಗಳು ತಪ್ಪಾಗಿ ಟೈಪ್ ಆಗಿರುತ್ತದೆ.
5. ಫೋಟೋ ಗಮನಿಸಿ:
ಸುಳ್ಳು ಸುದ್ದಿಗಳಲ್ಲಿ ಸಾಧಾರಣವಾಗಿ ಫೋಟೋ ಮತ್ತು ವಿಡಿಯೋಗಳನ್ನು ಎಡಿಟ್ ಮಾಡಲಾಗಿರುತ್ತದೆ. ಕೆಲವೊಮ್ಮೆ ಫೋಟೋಗಳು ನೈಜವಾಗಿರುತ್ತದೆ. ಆದರೆ ಸುದ್ದಿ ತಪ್ಪಾಗಿರುತ್ತದೆ. ಹೀಗಾಗಿ ಸುದ್ದಿ ಒದಿದ ಕೂಡಲೇ ತೀರ್ಮಾನಕ್ಕೆ ಬರಬೇಡಿ. ಈ ಫೋಟೋವನ್ನು ಸರ್ಚ್ ಮಾಡಿ ಆ ಫೋಟೋದ ಮೂಲವನ್ನು ಪರಿಶೀಲಿಸಿ.
6. ದಿನಾಂಕ ಪರಿಶೀಲಿಸಿ:
ವಿಶ್ವಾಸಾರ್ಹ ವೆಬ್‍ಸೈಟ್‍ಗಳಲ್ಲಿ ಆ ಸುದ್ದಿ ಪ್ರಕಟವಾದ ದಿನಾಂಕ ಇರುತ್ತದೆ. ಆದರೆ ಸುಳ್ಳು ಸುದ್ದಿಗಳ ತಾಣಗಳಲ್ಲಿ ದಿನಾಂಕ ಸಾಮಾನ್ಯವಾಗಿ ಇರುವುದಿಲ್ಲ. ಒಂದು ವೇಳೆ ಇದ್ದರೂ ಯಾವಾಗಲೋ ನಡೆದಿರುವ ಸುದ್ದಿಯನ್ನು ಪ್ರಕಟಿಸಿರುತ್ತದೆ.
7. ಸಾಕ್ಷ್ಯಗಳನ್ನು ಚೆಕ್ ಮಾಡಿ:
ಲೇಖನ ಬರೆದವರು ಯಾರು? ಬರೆದ ವ್ಯಕ್ತಿಗೆ ಆ ವಿಚಾರದಲ್ಲಿ ಜ್ಞಾನ ಇದೆಯೋ ಎನ್ನುವುದನ್ನು ತಿಳಿದುಕೊಳ್ಳಿ. ಬರಹದಲ್ಲಿ ಸಾಕ್ಷ್ಯ/ ಉಲ್ಲೇಖಗಳು ಸರಿ ಇಲ್ಲದೇ ಇದ್ದರೆ ಇದು ಸುಳ್ಳು ಸುದ್ದಿ ಎನ್ನುವ ತೀರ್ಮಾನಕ್ಕೆ ಬರಬಹುದು.
8. ಬೇರೆ ವರದಿ ಓದಿ:
ಬೇರೆ ಯಾವುದೇ ಸುದ್ದಿ ತಾಣಗಳಲ್ಲಿ ಪ್ರಕಟವಾಗದ ಸುದ್ದಿ ಒಂದು ತಾಣದಲ್ಲಿ ಮಾತ್ರ ಪ್ರಕಟವಾದರೆ ಆ ಸುದ್ದಿ ಸುಳ್ಳು ಸುದ್ದಿಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಒಂದೇ ಸುದ್ದಿ ಹಲವು ತಾಣಗಳಲ್ಲಿ ಪ್ರಕಟಗೊಂಡಿದ್ದರೆ ಮಾತ್ರ ಅದು ನಿಜವಾದ ಸುದ್ದಿಯಾಗಿರುತ್ತದೆ.
9. ಹಾಸ್ಯದ ಸುದ್ದಿಯೇ?
ಕೆಲವೊಮ್ಮೆ ಹಾಸ್ಯ ಮತ್ತು ವಿಡಂಬನೆಗಾಗಿ ಸುದ್ದಿಯ ರೂಪದಲ್ಲಿ ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗುತ್ತದೆ. ಹೀಗಾಗಿ ಆ ಸುದ್ದಿ ವಿಡಂಬನೆಗಾಗಿ ಬರೆಯಲಾಗಿದ್ಯಾ ಎನ್ನುವುದನ್ನು ಓದುವಾಗಲೇ ಅರ್ಥೈಸಿಕೊಳ್ಳಬಹುದು.
10. ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ:
ಓದುವಾಗಲೇ ಆಲೋಚಿಸಿ, ಆ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಆಲೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ. ಮಾಹಿತಿಗಳು ಸ್ಪಷ್ಟವಾಗಿದ್ದರೆ ಮಾತ್ರ ಶೇರ್ ಮಾಡಿ.