ದೀಪಾವಳಿ ಹಬ್ಬಕ್ಕೆ ಮಾಡಿ ಗರಿಗರಿಯಾದ ಶಂಕರಪೊಳೆ

Public TV
2 Min Read
shankarpole recipe 4

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಈ ಸಡಗರ, ಸಂಭ್ರಮದ ನಡುವೆ ಸಿಹಿ ತಿಂಡಿ ಸವಿಯೋದೆ ಖುಷಿ. ಅದರಲ್ಲೂ ಗರಿಗರಿಯಾದ ಸಿಹಿ ತಿಂಡಿ ಇದ್ದರಂತೂ ಇನ್ನೂ ಚೆಂದ. ಅದಕ್ಕೆ ದೀಪಾವಳಿ ಶುಭಸಮಯದಲ್ಲಿ ತಿನ್ನಲು ಬಿಸ್ಕೆಟ್ ನಂತೆಯೇ ಇರುವ, ಮಾಡಲೂ ಬಹಳ ಸುಲಭವಾಗಿರುವ ಗರಿಗರಿಯಾದ ಶಂಕರಪೊಳೆ ಮಾಡುವ ವಿಧಾನ ಇಲ್ಲಿದೆ.

shankarpole recipe 3

ಬೇಕಾಗುವ ಪದಾರ್ಥಗಳು:
* ತುಪ್ಪ- 1 ಲೋಟ
* ಸಕ್ಕರೆ- 1 ಲೋಟ
* ಹಾಲು- 2 ಲೋಟ
* ಮೈದಾ ಹಿಟ್ಟು- 5 ಲೋಟ
* ಉಪ್ಪು- 2 ಚಿಟಕಿ
* ಎಣ್ಣೆ- ಕರಿಯಲು

shankarpole recipe 1

ಮಾಡುವ ವಿಧಾನ:
ಮೊದಲು ಸ್ಟವ್ ಆನ್ ಮಾಡಿ ಪ್ಯಾನ್ ಇಟ್ಟು ಅದಕ್ಕೆ ತುಪ್ಪ, ಸಕ್ಕರೆ ಹಾಕಿ. ಸಕ್ಕರೆ ಕರಗಿದ ಬಳಿಕ ಅದಕ್ಕೆ ಹಾಲು ಬೆರಿಸಿ ಕುದಿಯಲು ಬಿಡಿ

ಹಾಲು ಕುದಿದ ನಂತರ ಅದಕ್ಕೆ ಮೈದಾ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸೌಟಿನಿಂದ ಚೆನ್ನಾಗಿ ಕಲಸಿ. ಸ್ವಲ್ಪ ಹೊತ್ತಿನ ನಂತರ ಮಿಶ್ರಣ ತಣಿದ ಮೇಲೆ ಕೈಯಿಂದ ಅದನ್ನು ಮತ್ತೊಮ್ಮೆ ಚೆನ್ನಾಗಿ ಕಲಸಿರಿ. ಇದನ್ನೂ ಓದಿ:ಹಬ್ಬಕ್ಕೆ ಬಿಸಿಬಿಸಿ ಸಿಹಿ ಕಜ್ಜಾಯ ಮಾಡೋ ವಿಧಾನ

shankarpole recipe 2

ಆ ನಂತರ ಕಲಸಿದ ಹಿಟ್ಟಿನಿಂದ ಸಣ್ಣ ಕಿತ್ತಳೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಂಡು. ಆ ಉಂಡೆಗಳನ್ನು ಎರಡೂ ಬದಿಯಲ್ಲಿ ಮೈದಾ ಹಿಟ್ಟಿನಿಂದ ಸವರಿ, ಸಣ್ಣ ಚಪಾತಿಯ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಬಳಿಕ ಚಾಕು ಅಥವಾ ಚಮಚದಿಂದ ಅದನ್ನು ತ್ರಿಕೋನಾಕಾರದಲ್ಲಿ ಕತ್ತರಿಸಿರಿ.

ತ್ರಿಕೋನಾಕಾರದಲ್ಲಿ ಕತ್ತರಿಸಿದ ನಂತರ ಇನ್ನೊಮ್ಮೆ ಎರಡು ಬದಿಯಲ್ಲೂ ಮೈದಾ ಹಿಟ್ಟನ್ನು ಸವರಿ, ಚಪಾತಿಯಷ್ಟು ದಪ್ಪ ಗಾತ್ರಕ್ಕೆ ಲಟ್ಟಿಸಿಕೊಳ್ಳಿ. ಆ ನಂತರ ಶಂಕರಪೊಳೆಯ ಚಮಚವನ್ನು ಉಪಯೋಗಿಸಿ ಅದನ್ನು ಸಣ್ಣ ಸಣ್ಣ ಚೌಕಾಕಾರಕ್ಕೆ ಕತ್ತರಿಸಿಕೊಳ್ಳಿ. ಇದನ್ನೂ ಓದಿ:ದೀಪಾವಳಿಯಂದು ಎಣ್ಣೆ ಸ್ನಾನ ಮಾಡೋದು ಯಾಕೆ? ನರಕಕ್ಕೆ ಹೋಗಲ್ಲ ಯಾಕೆ?

ಇತ್ತ ಒಂದು ಪ್ಯಾನ್‍ನಲ್ಲಿ ಅಡುಗೆ ಎಣ್ಣೆ ಹಾಕಿ ಸ್ಟವ್ ಮೇಲೆ ಕಾಯಲು ಇಡಿ. ಅದು ಕಾದ ನಂತರ ಕತ್ತರಿಸಿದ ಶಂಕರಪೊಳೆ ಹಿಟ್ಟಿನ ಭಾಗಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಕರಿಯಿರಿ.

shankarpole recipe 5

ಒಂದೆರಡು ನಿಮಿಷದ ನಂತರ ಶಂಕರಪೊಳೆಗೆ ಹೊಂಬಣ್ಣ ಬಂದಾಗ ಅವುಗಳನ್ನು ಪ್ಯಾನ್‍ನಿಂದ ತೆಗೆದು ಪ್ಲೇಟ್‍ಗೆ ಹಾಕಿ. ಹೀಗೆ ಕತ್ತರಿಸಿಟ್ಟಿದ್ದ ಎಲ್ಲಾ ಶಂಕರಪೊಳೆ ಹಿಟ್ಟನ್ನು ಕರಿಯಿರಿ. ಬಳಿಕ 5ರಿಂದ 10 ನಿಮಿಷ ತಣಿಯಲು ಬಿಟ್ಟರೆ ಶಂಕರಪೊಳೆ ಗರಿಗರಿಯಾಗುತ್ತದೆ. ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

ಇದನ್ನು 10-15 ದಿನಗಳವರೆಗೂ ಇಟ್ಟು ತಿನ್ನಬಹುದು. ಹೀಗೆ ರುಚಿಯಾದ, ಸುಲಭವಾದ ಗರಿಗರಿಯಾದ ಸಿಹಿ ಶಂಕರಪೊಳೆ ಮಾಡಿ ಸವಿದು ಹಬ್ಬವನ್ನು ಸಂಭ್ರಮಿಸಿ.

Share This Article
Leave a Comment

Leave a Reply

Your email address will not be published. Required fields are marked *