ನೀವು ಹಲವಾರು ವೆರೈಟಿಯ ಚಿಕನ್ ಬಿರಿಯಾನಿಗಳನ್ನು ಸವಿದಿರುತ್ತೀರಿ. ಅದರಲ್ಲೂ ಹೈದರಾಬಾದ್ ಚಿಕನ್ ಬಿರಿಯಾನಿ ಎಂದರೆ ಬಾಯಲ್ಲಿ ನೀರೂರುತ್ತದೆ. ಅದನ್ನು ಸವಿಯಲು ಹೋಟೇಲ್‍ಗೇ ಹೋಗಬೇಕು ಅಂತೇನೂ ಇಲ್ಲ. ನಿಮ್ಮ ಮನೆಯಲ್ಲೇ ಈ ಬಿರಿಯಾನಿಯನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
1. ಚಿಕನ್ – 1/2 ಕೆ.ಜಿ
2. ಬಾಸುಮತಿ ಅಕ್ಕಿ – ಕಾಲು ಕೆ.ಜಿ
3. ಅಕ್ಕಿ – ಕಾಲು ಕೆ.ಜಿ
4. ಈರುಳ್ಳಿ – 3
5. ಟೊಮಾಟೋ – 3
6. ಪುದೀನಾ – ಅರ್ಧ ಕಟ್ಟು
7. ಕೊತ್ತಂಬರಿಸೊಪ್ಪು – ಅರ್ಧ ಕಟ್ಟು
8. ಹಸಿಮೆಣಸಿನಕಾಯಿ – 6
9. ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಕಪ್
10. ಕಸ್ತೂರಿ ಮೇತಿ – 2 ಚಮಚ
11. ಹಾಲು – 1 ಕಪ್
12. ಚಕ್ಕೆ ಲವಂಗ – 5-6
13. ಪಲಾವ್ ಎಲೆ – 3
14. ಜೀರಿಗೆ – 3 ಚಮಚ
15. ಏಲಕ್ಕಿ – 3
16. ಉಪ್ಪು – ರುಚಿಗೆ ತಕ್ಕಷ್ಟು
17. ಅರಿಶಿಣ – ಅರ್ಧ ಚಮಚ
18. ತುಪ್ಪ – 5 ಚಮಚ
19. ಗೋಡಂಬಿ – 50 ಗ್ರಾಂ
Advertisement
ಮಾಡುವ ವಿಧಾನ:
1. ಬಾಸುಮತಿ ಅಕ್ಕಿ ಮತ್ತು ಮಾಮೂಲಿ ಅಕ್ಕಿ ಎರಡನ್ನೂ ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಒಂದು ಕುಕ್ಕರ್‍ನಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ, ಅದಕ್ಕೆ ಪಲಾವ್ ಎಲೆ, ಜೀರಿಗೆ, ಏಲಕ್ಕಿ, ಚಕ್ಕೆ ಲವಂಗ ಮತ್ತು ಕಸ್ತೂರಿ ಮೇತಿ ಹಾಕಿ ಕಡಿಮೆ ಉರಿಯಲ್ಲಿ ಘಮ ಬರುವ ತನಕ ಬಾಡಿಸಿ. ನಂತರ ಇದಕ್ಕೆ ತೊಳೆದ ಅಕ್ಕಿಯನ್ನು ಹಾಕಿ ಬೇಯಲು ಬೇಕಾಗುವಷ್ಟು ನೀರು, ಸ್ವಲ್ಪ ಉಪ್ಪು ಮತ್ತು ಒಂದು ಕಪ್ ಹಾಲನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಒಂದು ವಿಷಲ್ ಕೂಗಿಸಿ. (ಅಕ್ಕಿ ಮುಕ್ಕಾಲು ಭಾಗ ಬೆಂದಿದ್ದರೆ ಸಾಕು)
Advertisement
2. ಮತ್ತೊಂದು ಪ್ಯಾನ್(ಕಡಾಯಿ)ನಲ್ಲಿ ಎಣ್ಣೆ ಬಿಸಿ ಮಾಡಿ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಕರಿದು ತೆಗೆಯಿರಿ, ಅದೇ ಎಣ್ಣೆಯಲ್ಲಿ ಗೊಡಂಬಿ ಚೂರುಗಳನ್ನು ಕರಿದು ತೆಗೆದಿಡಿ. ಈಗ ಪ್ಯಾನ್‍ಗೆ ಸ್ವಲ್ಪ ಈರುಳ್ಳಿ, ಹಸಿಮೆಣಸಿನಕಾಯಿ, ಅರಿಶಿಣ ಮತ್ತು ಚಿಕನ್ ಹಾಕಿ ಚೆನ್ನಾಗಿ ಬಾಡಿಸಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ, ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಚಿಕನ್ ಅರ್ಧ ಬೆಂದ ನಂತರ ರುಬ್ಬಿದ ಟೊಮಾಟೋ, ಪುದೀನಾ, ಕೊತ್ತಂಬರಿಸೊಪ್ಪಿನ ಪೇಸ್ಟ್ ಸೇರಿಸಿ ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ತಿರುವಿ, ಗ್ರೇವಿ ಗಟ್ಟಿಯಾಗುವ ತನಕ 10-15 ನಿಮಿಷ ಬೇಯಿಸಿ.
Advertisement
3. ಒಂದು ದೊಡ್ಡ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಮೊದಲಿಗೆ ಬೇಯಿಸಿದ್ದ ಅನ್ನ ಹಾಕಿ, ಅದರ ಮೇಲೆ ಚಿಕನ್ ಗ್ರೇವಿಯನ್ನು ಹರಡಿ, ನಂತರ ಕರಿದ ಈರುಳ್ಳಿ ಮತ್ತು ಗೊಡಂಬಿಯನ್ನು ಉದುರಿಸಿ. ಈ ರೀತಿ 3-4 ಲೇಯರ್‍ಗಳು ಒಂದರ ಮೇಲೊಂದು ಹರಡಿ, ಗಾಳಿಯಾಡದಂತೆ ಫಾಯಿಲ್ ಪೇಪರ್(ಅಲುಮಿನಿಯಮ್ ಫಾಯಿಲ್ ಪೇಪರ್) ಅಥವಾ ಒಂದು ತಟ್ಟೆಯಿಂದ ಮುಚ್ಚಿ ಸ್ಟವ್ ಆಫ್ ಮಾಡಿ ಹಬೆಯಲ್ಲೇ ಬೇಯಲು ಬಿಡಿ. 10 ನಿಮಿಷಗಳ ನಂತರ ಮುಚ್ಚಳವನ್ನು ತೆಗೆದು ಸೌತೇಕಾಯಿಯ ರಾಯ್ತಾದೊಂದಿಗೆ ಸವಿಯಲು ಕೊಡಿ.
Advertisement
ಗಮನಿಸಿ: ಅರಿಶಿಣದ ಬದಲಿಗೆ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಹಾಕಿದರೆ ಇನ್ನೂ ರುಚಿ ಹೆಚ್ಚು.