ಸಿಹಿ ತಿನಿಸು ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಕೆಲವರಿಗೆ ಸಿಹಿ ತಿಂಡಿಗಳು ಇಷ್ಟವಿದ್ದರೂ ಸಕ್ಕರೆ ಹಾಕಿರುತ್ತಾರೆ ಎಂದು ತಿನ್ನುವುದಿಲ್ಲ. ಆದರೆ ಇಂದು ನಾವು ಹೇಳಿಕೊಡುತ್ತಿರುವ ಸಿಹಿ ತಿಂಡಿಯಲ್ಲಿ ಸಕ್ಕರೆಯನ್ನು ಬಳಸುವುದಿಲ್ಲ. ಬದಲಿಗೆ ಬೆಲ್ಲವನ್ನು ಬಳಸಿ ಈ ರೆಸಿಪಿ ಮಾಡಬಹುದು. ಒತ್ತು ಶಾವಿಗೆ ಮತ್ತು ಕಾಯಿ ಹಾಲು ಸಾಂಪ್ರದಾಯಿಕ ಪಾಕವಿಧಾನ. ಈ ರೆಸಿಪಿ ತುಂಬಾ ರುಚಿಯಾಗಿದ್ದು, ಸುಲಭವಾಗಿ ಮಾಡಬಹುದು.
Advertisement
ಒತ್ತು ಶಾವಿಗೆಗೆ ಬೇಕಾಗುವ ಪದಾರ್ಥಗಳು:
* ದೋಸೆ ಅಕ್ಕಿ – ಒಂದೂಕಾಲು ಕಪ್ (4 ಗಂಟೆ ನೆನೆಸಿಡಿ)
* ತೆಂಗಿನ ತುರಿ – ಅರ್ಧ ಕಪ್
* ಉಪ್ಪು – ರುಚಿಗೆ ತಕ್ಕಷ್ಟು
* ತುಪ್ಪ – 2 ದೊಡ್ಡ ಚಮಚ
Advertisement
Advertisement
ಕಾಯಿ ಹಾಲು ಮಾಡಲು ಬೇಕಾಗುವ ಪದಾರ್ಥಗಳು:
* ನೆನೆಸಿರುವ ಅಕ್ಕಿ – 1 ಚಮಚ
* ತೆಂಗಿನ ತುರಿ – 2 ದೊಡ್ಡ ಚಮಚ
* ನೆನೆಸಿದ ಗಸ ಗಸೆ – 1 ದೊಡ್ಡ ಚಮಚ
* ಬೆಲ್ಲ – ಅರ್ಧ ಕಪ್
* ತೆಳುವಾದ ತೆಂಗಿನಕಾಯಿ ಹಾಲು – ಒಂದೂವರೆ ಕಪ್
* ಉಪ್ಪು – ಅರ್ಧ ಟೀಸ್ಪೂನ್
* ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
* ಹಾಲು – 1 ಕಪ್
Advertisement
ಒತ್ತು ಶಾವಿಗೆ ಮಾಡುವ ವಿಧಾನ:
* ಮಿಕ್ಸಿ ಜಾರಿಗೆ ನೆನೆಸಿದ ದೋಸೆ ಅಕ್ಕಿಯನ್ನು ಹಾಕಿ ರುಬ್ಬಿಕೊಳ್ಳಿ. ಇದರ ಜೊತೆಗೆ ಅರ್ಧ ಕಪ್ ತೆಂಗಿನ ತುರಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ.
* ಈಗ ಇದನ್ನು ಒಂದು ಬಾಣಲೆಗೆ ಹಾಕಿ, 2 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಕಲಸುತ್ತಾ ಇರಿ.
* ಈಗ ಇದಕ್ಕೆ 1 ದೊಡ್ಡ ಚಮಚ ತುಪ್ಪ ಹಾಕಿ ಕಲಸಿ. ಸಣ್ಣ ಉರಿಯಲ್ಲಿ ಬೇಯಿಸುತ್ತಾ ಮತ್ತೆ ಇದಕ್ಕೆ 1 ದೊಡ್ಡ ಚಮಚ ತುಪ್ಪ ಹಾಕಿ ಕಲಸಿ. ನಂತರ ಇನ್ನೊಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಲಸಿ.
* ಅಂಗೈಗೆ ಸ್ವಲ್ಪ ತುಪ್ಪ ಸವರಿಕೊಂಡು ಇದನ್ನು ಉದ್ದ ಉಡ್ಡೆಯಾಗಿ ಮಾಡಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು ಕಡುಬು ಬೇಯಿಸುವ ರೀತಿ 10 ರಿಂದ 12 ನಿಮಿಷ ಬೇಯಿಸಿ.
* ಈಗ ಶಾವಿಗೆ ಅಚ್ಚಿಗೆ ಎಣ್ಣೆ ಸವರಿ, ಅದಕ್ಕೆ ಬೇಯಿಸಿರುವ ಕಡುಬು ಇಟ್ಟು ಮುಚ್ಚಳ ಮುಚ್ಚಿ, ಒಂದು ತಟ್ಟೆಯಲ್ಲಿ ಒತ್ತಿ. ಅಕ್ಕಿ ಶಾವಿಗೆ ಸಿದ್ಧವಾಗುತ್ತೆ.
ಕಾಯಿ ಹಾಲು ಮಾಡುವ ವಿಧಾನ:
* ಒಂದು ಮಿಕ್ಸಿ ಜಾರಿಗೆ ನೆನೆಸಿರುವ ಅಕ್ಕಿ, ಚಮಚ ತೆಂಗಿನ ತುರಿ, ನೆನೆಸಿದ ಗಸ ಗಸೆ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ.
* ನಂತರ ಒಂದು ಪಾತ್ರೆಗೆ ಅರ್ಧ ಕಪ್ ಬೆಲ್ಲ, ಕಾಲು ಕಪ್ ನೀರು ಹಾಕಿ. ಬೆಲ್ಲ ಕರಗುವ ತನಕ ಬಿಸಿಮಾಡಿ. ಇದಕ್ಕೆ ರುಬ್ಬಿದ ಮಿಶ್ರಣ ಮತ್ತು ಒಂದೂವರೆ ಕಪ್ ತೆಳುವಾದ ತೆಂಗಿನಕಾಯಿ ಹಾಲು ಹಾಕಿ ಚೆನ್ನಾಗಿ ಕಲಸಿ.
* ಚಿಟಿಕೆ ಉಪ್ಪು, ಏಲಕ್ಕಿ ಪುಡಿ ಹಾಕಿ ಮಧ್ಯಮ ಉರಿಯಲ್ಲಿ 3 ರಿಂದ 4 ನಿಮಿಷ ಕುದಿಸಿ. ನಂತರ ಇದಕ್ಕೆ 1 ಕಪ್ ತೆಂಗಿನಕಾಯಿ ಹಾಲು ಹಾಕಿ ಕಲಸಿ ಸಣ್ಣ ಉರಿಯಲ್ಲಿ 3 ನಿಮಿಷ ಕುದಿಸಿದರೆ ಕಾಯಿ ಹಾಲು ಸಿದ್ಧ.
– ಒತ್ತು ಶಾವಿಗೆ ಜೊತೆ ಕಾಯಿ ಹಾಲನ್ನು ನಿಮ್ಮ ಮನೆಯಲ್ಲಿ ಎಲ್ಲರಿಗೂ ಬಡಿಸಿ, ನೀವು ರುಚಿ ನೋಡಿ.