ರಾಗಿ ಇಡ್ಲಿ ಎಂಬುದು ಆರೋಗ್ಯಕರ ಇಡ್ಲಿಯ ಒಂದು ವಿಧಾನ. ಸಾಮಾನ್ಯವಾಗಿ ರಾಗಿ ಗಂಜಿ, ರಾಗಿ ದೋಸೆ, ರಾಗಿ ಮುದ್ದೆ ಹಾಗೂ ರಾಗಿ ರೊಟ್ಟಿಯನ್ನು ಮಾಡುತ್ತಾರೆ ಇವುಗಳ ಪೈಕಿ ರಾಗಿ ಇಡ್ಲಿ ಮಾಡುವವರು ತುಂಬಾ ಕಡಿಮೆ. ಇದನ್ನು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮಾಡಬಹುದು. ಅದಲ್ಲದೇ ಇದರಲ್ಲಿ ಸ್ಟಫ್ಡ್ ರೀತಿಯಲ್ಲಿಯೂ ಮಾಡಬಹುದು. ರಾಗಿ ಹಿಟ್ಟು, ಉದ್ದಿನ ಬೇಳೆ ಮತ್ತು ಇತರ ಪದಾರ್ಥಗಳಿಂದ ಇದನ್ನು ತಯಾರಿಸಲಾಗುತ್ತದೆ. ಇದು ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಾಂಶದಿಂದ ಸಮೃದ್ಧವಾಗಿದೆ.
ಬೇಕಾಗುವ ಸಾಮಗ್ರಿಗಳು
ರಾಗಿ ಕಾಳು
ಇಡ್ಲಿ ಅಕ್ಕಿ
ಉದ್ದಿನ ಬೇಳೆ
ಮೆಂತ್ಯ ಕಾಳು
ದಪ್ಪ ಅವಲಕ್ಕಿ
ಉಪ್ಪು
ಎಣ್ಣೆ
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಉದ್ದಿನ ಬೇಳೆ ಮತ್ತು ಮೆಂತ್ಯ ಕಾಳುಗಳನ್ನು ಹಾಕಿ 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಇನ್ನೊಂದು ಪಾತ್ರೆಯಲ್ಲಿ ರಾಗಿ ಕಾಳು ಮತ್ತು ಇಡ್ಲಿ ಅಕ್ಕಿಯನ್ನು ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಮೊದಲು ನೆನೆಸಿದ ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ಮಿಕ್ಸಿಯಲ್ಲಿ ಹಾಕಿ, ಸ್ವಲ್ಪ ನೀರು ಸೇರಿಸಿ ನುಣುಪಾದ, ನೊರೆಬರುವ ಹಿಟ್ಟಿನ ರೀತಿಯಲ್ಲಿ ರುಬ್ಬಿಕೊಳ್ಳಿ. ಇದಾದ ಬಳಿಕ ಅಕ್ಕಿ ಹಾಗೂ ರಾಗಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಉದ್ದಿನ ಬೇಳೆ ಮತ್ತು ರಾಗಿ-ಅಕ್ಕಿ ಮಿಶ್ರಣವನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟನ್ನು 8-10 ಗಂಟೆಗಳ ಕಾಲ ಮುಚ್ಚಿಡಿ.
ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಬಿಸಿ ಮಾಡಿ. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪವನ್ನು ಸವರಿ, ಹಿಟ್ಟನ್ನು ಹಾಕಿ. ಸುಮಾರು 10-12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ರಾಗಿ ಇಡ್ಲಿಯನ್ನು ಬಿಸಿ ಇರುವಾಗಲೇ ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ. ಈ ಹಿಟ್ಟನ್ನು ದೋಸೆ ಮತ್ತು ಉತ್ತಪ್ಪ ಮಾಡಲು ಕೂಡ ಬಳಸಬಹುದು