ಸಾಮಾನ್ಯವಾಗಿ ಎಲ್ಲರೂ ಮೊಮೊಸ್ ತಿಂದೇ ಇರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೊಮಸ್‌ನಲ್ಲಿಯೂ ವಿವಿಧ ರೀತಿಯ ಮೊಮೊಸ್‌ಗಳಿವೆ. ವೆಜ್ ಮೊಮೊಸ್, ಪನ್ನೀರ್ ಮೊಮಸ್, ಚೀಸ್ ಮೊಮೊಸ್, ಚಾಕಲೇಟ್ ಮೊಮೊಸ್, ಕುರಕುರೆ ಮೊಮೊಸ್, ಚಿಲ್ಲಿ ಮೊಮೊಸ್ ಹಾಗೂ ಚಿಕನ್ ಮೊಮೊಸ್ ಹೀಗೆ ವಿವಿಧ ರೀತಿಯ ಮೊಮೊಸ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಮೊಮೊಸ್‌ಗಳನ್ನ ಹಬೆಯಲ್ಲಿ ಮಾಡಲಾಗುತ್ತದೆ. ಆದರೆ ಇದೀಗ ಫ್ರೈಡ್ ಮೊಮೊಸ್ ಮಾಡುವುದು ಇನ್ನೊಂದು ರೀತಿಯ ವಿಶೇಷತೆ.
ಬೇಕಾಗುವ ಸಾಮಗ್ರಿಗಳು:
ಮೈದಾ
ಚಿಕನ್ ಕಿಮಾ
ಕರಿಮೆಣಸಿನ ಪುಡಿ
ಹಸಿರು ಮೆಣಸಿನಕಾಯಿ
ಈರುಳ್ಳಿ
ಅಲುಗಡ್ಡೆ
ಕೊತ್ತಂಬರಿ ಸೊಪ್ಪು
ಉಪ್ಪು
ನಿಂಬೆ ರಸ
ಎಣ್ಣೆ
ತಯಾರಿಸುವ ವಿಧಾನ:
ಮೊದಲಿಗೆ ಮೈದಾ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚಪಾತಿ ಹಿಟ್ಟಿಗೆ ಹದಕ್ಕೆ ಕಲಸಿಕೊಳ್ಳಿ, ಬಳಿಕ ಅದರ ಮೇಲೆ ತಣ್ಣನೆಯ ಬಟ್ಟೆ ಹಾಕಿ 20 ನಿಮಿಷ ಮುಚ್ಚಿಟ್ಟುಕೊಳ್ಳಿ.
ಇನ್ನೊಂದು ಕಡೆ ಚಿಕನ್ ಕಿಮಾ, ಈರುಳ್ಳಿ, ಕರಿಮೆಣಸಿನ ಪುಡಿ, ಚಿಕ್ಕದಾಗಿ ಕತ್ತರಿಸಿರುವ ಮೆಣಸಿನಕಾಯಿ ಅಥವಾ ಕೆಂಪು ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಎಣ್ಣೆ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕಲಸಿಟ್ಟ ಮೈದಾ ಹಿಟ್ಟಿನ ಮಿಶ್ರಣವನ್ನು ತ್ರಿಭುಜಾಕಾರದ ಆಕಾರಕ್ಕೆ ತಂದು ಅದರೊಳಗೆ ಕಲಸಿಟ್ಟ ಚಿಕನ್ ಮಿಶ್ರಣವನ್ನು ಹಾಕಿ ಮೂರು ತುದಿಗಳನ್ನು ಜೋಡಿಸಿ. ಆಗ ಮೊಮೊಸ್ ಆಕಾರಕ್ಕೆ ಬರುತ್ತದೆ.
ಬಳಿಕ ಸರಿಯಾಗಿ ಮೂರು ತುದಿಗಳನ್ನು ಜೋಡಿಸಿ, 10 ನಿಮಿಷ ಇಡಿ. ಒಂದು ಬಾಣಲಿಗೆ ಎಣ್ಣೆ ಹಾಕಿ ಕಾಯಲು ಇಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಮಾಡಿಟ್ಟ ಮೊಮೊಸ್ ಹಾಕಿ ಗೋಲ್ಡನ್ ಬಣ್ಣ ಬರುವವರೆಗೆ ಚೆನ್ನಾಗಿ ಕರಿಯಿರಿ. ಆಗ ಗರಿಗರಿಯಾದ ಮೊಮೊಸ್ ತಯಾರಾಗುತ್ತದೆ.
ಮೊಮೊಸ್‌ಗೆ ಸಾಸ್ ಅಥವಾ ಮಯಾನಿಸ್ ಜೊತೆಗೆ ತಿನ್ನಲು ಸಿದ್ಧವಾಗಿರುತ್ತದೆ.