ಚಂದ್ರನ ಮಣ್ಣಿಗೆ ಹೋಲಿಕೆಯಾಗುತ್ತಂತೆ ತಮಿಳುನಾಡಿನ ಮಣ್ಣು – ಚಂದ್ರಯಾನ-3ಗೂ ಇದೆ ಈ ಮಣ್ಣಿನ ಕೊಡುಗೆ; ಏನಿದರ ವಿಶೇಷತೆ?

Public TV
3 Min Read
chandrayaan 3 namakkal soil

ನವದೆಹಲಿ: ಇಡೀ ದೇಶವೇ ಚಂದ್ರನ (Moon) ಮೇಲ್ಮೈನಲ್ಲಿ ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯ ಸಾಫ್ಟ್‌ ಲ್ಯಾಂಡಿಂಗ್‌ಗಾಗಿ ಪ್ರಾರ್ಥಿಸುತ್ತಿದೆ. ಇಂತಹ ಹೊತ್ತಿನಲ್ಲೇ ತಮಿಳುನಾಡಿನ (Tamil Nadu Soil) ಮಣ್ಣಿನ ಬಗ್ಗೆ ಚರ್ಚೆಯೊಂದು ಶುರುವಾಗಿದೆ. ಚಂದ್ರಯಾನ-3 ಸಾಫ್ಟ್‌ ಲ್ಯಾಂಡಿಂಗ್‌ ಮತ್ತು ತಮಿಳುನಾಡಿನ ಮಣ್ಣಿಗೂ ಒಂದು ನಂಟಿದೆ.

ಚಂದ್ರಯಾನ-3 ಯೋಜನೆಗೂ ತಮಿಳುನಾಡು ಮಣ್ಣಿಗೂ ಏನು ಸಂಬಂಧ? ಏನದು ಮಣ್ಣು? ಏನಿದರ ವಿಶೇಷತೆ? ಬನ್ನಿ ಅದೇನು ಅಂತ ತಿಳಿಯೋಣ. ಇದನ್ನೂ ಓದಿ: 146 ಪ್ರಯತ್ನಗಳ ಪೈಕಿ 69 ಚಂದ್ರಯಾನಗಳು ಯಶಸ್ವಿ – ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯ ಪ್ರಮುಖ ಉದ್ದೇಶವೇನು?

chandrayaan 3 11

ಈ ಮಣ್ಣಿನ ವಿಶೇಷತೆ ಏನು?
2012 ರಿಂದಲೂ ರಾಜ್ಯದ ರಾಜಧಾನಿ ಚೆನ್ನೈನಿಂದ ಸುಮಾರು 400 ಕಿಮೀ ದೂರದಲ್ಲಿರುವ ನಾಮಕ್ಕಲ್ (Namakkal) ಊರು, ಚಂದ್ರಯಾನ ಮಿಷನ್ ಸಾಮರ್ಥ್ಯದ ಪರೀಕ್ಷೆಗಾಗಿ ಇಸ್ರೋಗೆ ಮಣ್ಣನ್ನು ಪೂರೈಸಿದೆ. ಏಕೆಂದರೆ ಆ ಜಿಲ್ಲೆಯ ಭೂಮಿಯು ಚಂದ್ರನ ಮೇಲ್ಮೈಯನ್ನು ಹೋಲುತ್ತದೆ.

ನಾಮಕ್ಕಲ್ ಮಣ್ಣಿನ ಗುಣಲಕ್ಷಣಗಳು ಒಂದೇ ಆಗಿರುವುದರಿಂದ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಲ್ಯಾಂಡರ್ ಮಾಡ್ಯೂಲ್‌ನ ಸಾಮರ್ಥ್ಯವನ್ನು ಪರೀಕ್ಷಿಸಲು ಮತ್ತು ಪರಿಷ್ಕರಿಸಲು ಇದು ಇಸ್ರೋಗೆ ಸಹಕಾರಿಯಾಗಿದೆ. ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದರೆ, ಅದರ ಯಶಸ್ಸು ತಮಿಳುನಾಡಿನ ಮಣ್ಣಿಗೂ ಸಲ್ಲಿಸಬೇಕು. ಇದನ್ನೂ ಓದಿ: Chandrayaan-3: ಬಾಹ್ಯಾಕಾಶ ಯೋಜನೆಗಳಿಗೆ ನೂರಾರು ಕೋಟಿ ವ್ಯಯ – ಭಾರತಕ್ಕೇನು ಲಾಭ?

Chandrayaan 3 10

ಇಸ್ರೋಗೆ ಮಣ್ಣು ಪೂರೈಸಿದ ತಮಿಳುನಾಡು
ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನಕ್ಕಾಗಿ ಪರೀಕ್ಷೆಗಳನ್ನು ನಡೆಸಲು ಬೆಂಗಳೂರಿನ ಪ್ರಧಾನ ಕಚೇರಿಯ ಬಾಹ್ಯಾಕಾಶ ಸಂಸ್ಥೆಗೆ ಅಗತ್ಯವಾದ ಮಣ್ಣನ್ನು ತಮಿಳುನಾಡು ಪೂರೈಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.

ಪೆರಿಯಾರ್ ವಿಶ್ವವಿದ್ಯಾನಿಲಯದ ಭೂವಿಜ್ಞಾನ ವಿಭಾಗದ ನಿರ್ದೇಶಕ ಪ್ರೊಫೆಸರ್ ಎಸ್. ಅನ್ಬಳಗನ್ ಪ್ರಕಾರ, ನಾಮಕ್ಕಲ್ ಪ್ರದೇಶದಲ್ಲಿ ಮಣ್ಣು ಹೇರಳವಾಗಿ ಲಭ್ಯವಿದೆ. ಹೀಗಾಗಿ ಇಸ್ರೋಗೆ ಅಗತ್ಯವಿರುವಷ್ಟು ಮಣ್ಣು ಪೂರೈಸಲು ಸಾಧ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್‌ ಮಾಜಿ ಸಚಿವ

Chandrayaan 3 ISRO Vikram Lander

ಚಂದ್ರನ ದಕ್ಷಿಣ ಧ್ರುವ ಮಣ್ಣಿಗೆ ಹೋಲುತ್ತಂತೆ ನಾಮಕ್ಕಲ್‌ ಮಣ್ಣು
ನಾವು ಭೂವಿಜ್ಞಾನದಲ್ಲಿ ಸಂಶೋಧನೆ ನಡೆಸುತ್ತಿದ್ದೇವೆ. ಚಂದ್ರನ ಮೇಲ್ಮೈಯಲ್ಲಿ ಇರುವಂತಹ ಮಣ್ಣನ್ನು ತಮಿಳುನಾಡು ಹೊಂದಿದೆ. ವಿಶೇಷವಾಗಿ ದಕ್ಷಿಣ ಧ್ರುವದಲ್ಲಿರುವ (ಚಂದ್ರನ) ಮಣ್ಣಿಗೆ ನಾಮಕ್ಕಲ್‌ನ ಮಣ್ಣು ಹೋಲುತ್ತದೆ. ಚಂದ್ರನ ಮೇಲ್ಮೈಯಲ್ಲಿ ‘ಅನೋರ್ಥೋಸೈಟ್’ (ಒಂದು ರೀತಿಯ ಒಳನುಗ್ಗುವ ಅಗ್ನಿಶಿಲೆ) ರೀತಿಯ ಮಣ್ಣು ಇದೆ ಎಂದು ಪ್ರೊಫೆಸರ್‌ ವಿವರಿಸಿದ್ದಾರೆ.

ಚಂದ್ರನ ಪರಿಶೋಧನಾ ಕಾರ್ಯಕ್ರಮವನ್ನು ಘೋಷಿಸಿದ ಬೆನ್ನಲ್ಲೇ ನಾವು ಇಸ್ರೋಗೆ ಈ ಮಣ್ಣನ್ನು ಕಳುಹಿಸಿದ್ದೆವು. ಚಂದ್ರಯಾನ-2 ಸಂದರ್ಭದಲ್ಲೂ ಸುಮಾರು 50 ಟನ್ ಮಣ್ಣನ್ನು ಇಸ್ರೋಗೆ ಕಳುಹಿಸಿದ್ದೆವು. ಇದು ಚಂದ್ರನ ಮೇಲ್ಮೈಯಲ್ಲಿರುವ ಮಣ್ಣನ್ನು ಹೋಲುತ್ತದೆ ಎಂದು ಅನ್ಬಳಗನ್ ತಿಳಿಸಿದ್ದಾರೆ. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್

ವಿವಿಧ ಪರೀಕ್ಷೆಗಳನ್ನು ಕೈಗೊಂಡ ನಂತರ ಇಸ್ರೋದ ವಿಜ್ಞಾನಿಗಳು, ನಾಮಕ್ಕಲ್ ಪ್ರದೇಶದಲ್ಲಿ ಲಭ್ಯವಿರುವ ಮಣ್ಣು ಚಂದ್ರನ ಮೇಲ್ಮೈಗೆ ಹೊಂದಿಕೆಯಾಗಿದೆ ಎಂದು ದೃಢಪಡಿಸಿದರು. ನಾಮಕ್ಕಲ್ ಸುತ್ತಮುತ್ತಲಿನ ಸೀತಾಂಪೂಂಡಿ ಮತ್ತು ಕುನ್ನಮಲೈ ಗ್ರಾಮಗಳಂತಹ ಸ್ಥಳಗಳಲ್ಲೂ ಈ ಮಣ್ಣು ಲಭ್ಯವಿದೆ. ಅಲ್ಲದೇ ಆಂಧ್ರಪ್ರದೇಶ ಮತ್ತು ದೇಶದ ಉತ್ತರ ಭಾಗದ ಕೆಲವು ಪ್ರದೇಶಗಳಲ್ಲಿ ಮಣ್ಣು ಹೇರಳವಾಗಿ ಸಿಗುತ್ತದೆ ಎಂದು ವಿವರಣೆ ನೀಡಿದ್ದಾರೆ.

ಚಂದ್ರಯಾನ-4 ಕ್ಕೂ ಈ ಮಣ್ಣು ಬಳಕೆಯಾಗುತ್ತಾ?
ನಾವು ಇಸ್ರೋಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಮಣ್ಣನ್ನು ಕಳುಹಿಸುತ್ತಿದ್ದೇವೆ. ಇಸ್ರೋ ವಿಜ್ಞಾನಿಗಳು ನಾವು ಒದಗಿಸಿದ ಮಣ್ಣಿನಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಚಂದ್ರಯಾನ-4 ಮಿಷನ್ ಬಂದರೂ, ನಾವು ಅದಕ್ಕೆ ಮಣ್ಣನ್ನು ಪೂರೈಸಲು ಸಜ್ಜಾಗಿದ್ದೇವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Chandrayaan-3: ಕೊನೆಯ ಆ 20 ನಿಮಿಷವೇ ಆತಂಕ – ಲ್ಯಾಂಡಿಂಗ್‌ ಹೇಗಿರುತ್ತೆ? ಈ ಬಗ್ಗೆ ನೀವು ತಿಳಿಯಲೇಬೇಕು…

Web Stories

Share This Article