– ಶನಿವಾರ ಮಧ್ಯಾಹ್ನದಿಂದ ಕಿಡ್ನಿಯಲ್ಲಿ ತೊಂದರೆ
– ಸೋಮವಾರ ಕಿರಿಯ ಶ್ರೀಗಳನ್ನು 30 ಸೆಕೆಂಡ್ ದಿಟ್ಟಿಸಿ ನೋಡಿದ್ರು
– ಆಸ್ಪತ್ರೆ ಹೇಗಿದೆ? ಹೇಗೆ ನಡೆಯುತ್ತಿದೆ? – ಪ್ರಶ್ನಿಸಿದ್ದ ಶ್ರೀಗಳು
ಬೆಂಗಳೂರು: ಸುದೀರ್ಘ ಕಾಲದವರೆಗೂ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ಪರಮೇಶ್ ಅವರು, ಗುರುವಾರದಿಂದ ಭಾನುವಾರದವರೆಗೆ ಶ್ರೀಗಳ ಆರೋಗ್ಯದಲ್ಲಾದ ಬದಲಾವಣೆಗಳ ಕುರಿತು ಪಬ್ಲಿಕ್ ಟಿವಿಗೆ ವಿವರಣೆ ನೀಡಿದ್ದಾರೆ.
ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ ಅವರು, ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ಉತ್ಪಾದನೆ ನಿಂತು ಹೋಗಿತ್ತು. ಶನಿವಾರ ಮಧ್ಯಾಹ್ನದಿಂದ ಶ್ರೀಗಳ ದೇಹದಲ್ಲಿ ಬಿಪಿ, ಪಲ್ಸ್ ರೇಟ್ ಕಡಿಮೆಯಾಗತೊಡಗಿತು. ಕಿಡ್ನಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವುದು ಗೊತ್ತಾಯಿತು. ಈ ಸಂದರ್ಭದಲ್ಲಿ ಗುರುಗಳನ್ನು ಮಠದಿಂದ ಆಸ್ಪತ್ರೆಗೆ ಶಿಫ್ಟ್ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ವೈದ್ಯರಲ್ಲಿ ಬಂತು. ಆದರೆ ಡಯಾಲಿಸಿಸ್ ಮಾಡಿದರೆ ಶ್ರೀಗಳಿಗೆ ನಾವು ಮತ್ತಷ್ಟು ನೋವು ನೀಡಿದಂತೆ ಆಗುತ್ತದೆ. ಮತ್ತಷ್ಟು ಕಷ್ಟ ನೀಡುವುದು ಸರಿಯಲ್ಲ ಎನ್ನುವ ತೀರ್ಮಾನಕ್ಕೆ ಬಂದೆವು. ನಾವು ಪ್ರಯತ್ನ ನಡೆಸಿದರೂ ಕಿಡ್ನಿ ಸಾಮಾನ್ಯ ಸ್ಥಿತಿಗೆ ಬರಲಿಲ್ಲ. ಇದು ಶ್ರೀಗಳ ಶಿವೈಕ್ಯದ ಮುನ್ಸೂಚನೆ ಎನ್ನುವುದನ್ನು ನಾವು ಅರಿತೆವು ಎಂದು ಹೇಳಿದರು. ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ
Advertisement
Advertisement
111 ವರ್ಷದಲ್ಲೂ ಸ್ವಾಮೀಜಿಗಳು ಈ ಎಲ್ಲ ಚಿಕಿತ್ಸೆಗೆ ಹೇಗೆ ಸ್ಪಂದನೆ ನೀಡುತ್ತಿದ್ದರು ಎನ್ನುವ ಪ್ರಶ್ನೆಗೆ, ನಾನು ಡಿಸೆಂಬರ್ 1 ರಿಂದ ದಿನವೂ ಹತ್ತಿರ 20 ಗಂಟೆ ಸ್ವಾಮೀಜಿಗಳ ಜೊತೆಯಲ್ಲೇ ಇರುತ್ತಿದ್ದೆ. ಅವರನ್ನು ಬಹಳ ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. 111 ವರ್ಷ ಬದುಕಿರುವುದು ಪವಾಡವಾದರೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ರೀತಿಯೇ ಒಂದು ದೊಡ್ಡ ಪವಾಡ. ಒಮ್ಮೊಮ್ಮೊ ಬಿಪಿ, ಹೃದಯ ಬಡಿತ ಕಡಿಮೆ ಆಗುತ್ತಿದ್ದರೆ, ಒಮ್ಮೆ ದಿಢೀರ್ ಏರಿಕೆಯಾಗುತ್ತಿತ್ತು. 60, 70 ವರ್ಷದವರಿಗೆ ಈ ರೀತಿ ಆದರೆ ಅವರಿಗೆ ಕಾಯಿಲೆಯನ್ನು ತಡೆದುಕೊಳ್ಳಲು ಶಕ್ತಿ ಇರುವುದಿಲ್ಲ. ಆದರೆ ಸ್ವಾಮೀಜಿಯವರ ದೇಹದಲ್ಲಿ 140-150 ಹೃದಯ ಬಡಿತ ಆಗುತ್ತಿತ್ತು. ಆ ರೀತಿ ಹೃದಯ ಬಡಿತ ಜಾಸ್ತಿ ಆದರೆ ವ್ಯಕ್ತಿ ಬದುಕುವುದು ಕಷ್ಟ. ಮತ್ತೆ ನಾವು ಚಿಕಿತ್ಸೆ ನೀಡಿದಾಗ 70-80 ಹೃದಯ ಬಡಿತ ಇಳಿಕೆಯಾಗುತಿತ್ತು. ಇದು ನಮಗೆ ಅಚ್ಚರಿಯಾಗಿತ್ತು. ವೈದ್ಯ ಲೋಕಕ್ಕೆ ಇದೊಂದು ಪವಾಡವೇ ಸರಿ ಎಂದು ಡಾ.ಪರಮೇಶ್ ಹೇಳಿದರು. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು
Advertisement
Advertisement
ಚೆನ್ನೈನಲ್ಲಿದ್ದಾಗ ಕಿರಿಯ ಶ್ರೀಗಳಲ್ಲಿ ವಯಸ್ಸು ಎಷ್ಟು ಎಂದು ಕೇಳಿದಾಗ 111 ಅಂದಿದ್ದಕ್ಕೆ ಇದು ಬಹಳ ಆಯ್ತು ಎಂದಿದ್ದರಂತೆ. ಇದು ಶ್ರೀಗಳು ಮಾತನಾಡಿದ ಕೊನೆಯ ಮಾತೇ ಎಂದು ಕೇಳಿದ ಪ್ರಶ್ನೆಗೆ, ನಾವು ಚೆನ್ನೈಯಿಂದ ವಾಪಸ್ ಬಂದಾಗ ಕೂಡ ಅವರು ಮಾತನಾಡಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆ ಹೇಗಿದೆ? ಆಸ್ಪತ್ರೆ ಹೇಗೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಇತ್ತೀಚೆಗೆ ಹಳೆ ಮಠಕ್ಕೆ ಬಂದಾಗ 4-5 ದಿನಗಳಲ್ಲಿ ಅವರು ಬಹಳ ಆಯಾಸಗೊಂಡಿದ್ದರು. ಆಗ ಸ್ವಾಮೀಜಿ ಅವರು ಚೇತರಿಕೆ ಆಗುತ್ತಿಲ್ಲ ಎಂದು ಅನಿಸುತ್ತಿತ್ತು. ಆದರು ನಾವು ಚಿಕಿತ್ಸೆ ನೀಡುತ್ತಿದ್ದೇವು ಎಂದು ವಿವರಿಸಿದರು. ಇದನ್ನೂ ಓದಿ:ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’
ಭಾನುವಾರ ಸಂಜೆಯಿಂದ ನಮಗೆ ಯಾವುದೇ ಭರವಸೆ ಇರಲಿಲ್ಲ. ಅಚ್ಚರಿ ಏನೆಂದರೆ ಸೋಮವಾರ ಚಿಕ್ಕ ಸ್ವಾಮೀಜಿ ಅವರು ಹಳೆ ಮಠಕ್ಕೆ ಬಂದು ಸ್ವಾಮೀಜಿ ಅವರ ಪಕ್ಕದಲ್ಲಿ ನಿಂತು ಇಷ್ಟಲಿಂಗದ ಪೂಜೆ ಮಾಡಿದ್ದರು. ಎರಡು ದಿನದಿಂದ ಸ್ವಾಮೀಜಿ ಕಣ್ಣು ಬಿಡದೇ ಗಾಢ ನಿದ್ರೆಯಲ್ಲಿದ್ದರು. ಸೋಮವಾರ ಕಿರಿಯ ಸ್ವಾಮೀಜಿ ಪೂಜೆ ಮಾಡಿದ ನಂತರ ಶ್ರೀಗಳು ಕಣ್ಣು ಬಿಟ್ಟು ಕಿರಿಯ ಸ್ವಾಮೀಜಿ ಅವರನ್ನು 30 ಸೆಕೆಂಡ್ ದಿಟ್ಟಿಸಿ ನೋಡುತ್ತಿದ್ದರು. ಅದೇ ಅವರು ಕೊನೆಯದಾಗಿ ಕಣ್ಣು ಬಿಟ್ಟಿದ್ದು, ಆದಾದ ಬಳಿಕ ಅವರು ಕಣ್ಣು ಬಿಡಲೇ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಪರಮೇಶ್ ಮಾಹಿತಿ ನೀಡಿದರು.
https://www.youtube.com/watch?v=mxA9HE4qgJQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv