ಅಮೆರಿಕದಂಥ ಮುಂದುವರಿದ ರಾಷ್ಟ್ರಗಳು ಸೀಕ್ರೆಟ್ ಆಪರೇಷನ್ ಮಾಡೋವಾಗ ಹೇಗೆ ಸಂದೇಶ ಹಂಚಿಕೊಳ್ತಾರೆ? ಈ ಸಿನಿಮಾಗಳಲ್ಲಿ ನೋಡಿರೋ ಹಾಗೇ ಸ್ಯಾಟಲೈಟ್ ಫೋನ್ ಬಳಸ್ತಾರಾ? ಅಥವಾ ಪ್ರತ್ಯೇಕ ಅಪ್ಲಿಕೇಷನ್ ಬಳಸಿಕೊಳ್ತಾರಾ? ಒಂದು ವೇಳೆ ನಾವು ಬಳಸುವ ತಂತ್ರಾಂಶವನ್ನ ಯಾರಿಂದಲೂ ಹ್ಯಾಕ್ ಮಾಡೋಕೆ ಆಗಲ್ವ? ಬಹುಶಃ ಇದೆಲ್ಲವೂ ಹಾಲಿವುಡ್‌ನ ಥ್ರಿಲ್ಲರ್ ಸಿನಿಮಾಗಳಲ್ಲಿ ನಡೆಯುತ್ತೆ. ವಾಸ್ತವದಲ್ಲಿ ಅಮೆರಿಕದ (America) ಭದ್ರತಾ ಅಧಿಕಾರಿಗಳು ವಿದೇಶಿ ನೆಲದಲ್ಲಿ ನಡೆಸೋಕೆ ಹೊರಟಿದ್ದ ಕಾರ್ಯಾಚರಣೆಗಳ ಬಗ್ಗೆ ʻಸಿಗ್ನಲ್ʼ (Signal App) ಅನ್ನೋ ಮೆಸೇಜಿಂಗ್ ಆ್ಯಪ್‌ನಲ್ಲಿ ಚರ್ಚೆ ಮಾಡ್ಕೊಂಡಿದ್ದಾರೆ. ಅಂಥದ್ದೇ ಒಂದು ಚರ್ಚೆ ಲೀಕ್ ಆಗಿರೋದು ಅಮೆರಿಕದ ಭದ್ರತಾ ಅಧಿಕಾರಿಗಳು, ಮುಖ್ಯಸ್ಥರನ್ನು ತಲೆ ತಗ್ಗಿಸುವಂತೆ ಮಾಡಿದೆ.
ಈಗ ಜಗತ್ತಿನಾದ್ಯಂತ ಚರ್ಚೆಯ ಕೇಂದ್ರ ವಸ್ತು ಆಗಿರೋದು ‘ಸಿಗ್ನಲ್’ ಮೆಸೆಜಿಂಗ್ ಆ್ಯಪ್. ವಾಟ್ಸಪ್, ಟೆಲಿಗ್ರಾಂ ರೀತಿನೇ ಇದೇ ಕೂಡ ಒಂದು ಮೆಸೆಜಿಂಗ್ ಅಪ್ಲಿಕೇಷನ್. ಆದ್ರೆ, ಇದರಲ್ಲಿ ಖಾಸಗಿತನಕ್ಕೆ ಧಕ್ಕೆಯಿಲ್ಲ ಎನ್ನುತ್ತಾರೆ. ಬಹುಶಃ ಇದೇ ಕಾರಣಕ್ಕೆ ಅಮೆರಿಕದ ಭದ್ರತಾ ಅಧಿಕಾರಿಗಳನ್ನು ಅಷ್ಟೊಂದು ನಂಬಿದ್ದು ಅನಿಸುತ್ತೆ. ಆದಾಗ್ಯೂ ದೊಡ್ಡ ದಾಳಿಯ ಮಾಹಿತಿ ಲೀಕ್ ಆಗಿದ್ದು ಹೇಗೆ ಅನ್ನೋದ್ರ ಬಗ್ಗೆ ಸ್ವಲ್ಪ ಗಮನಿಸಬೇಕು.
ಹೌತಿ ಉಗ್ರರ ನೆಲೆ ಉಡೀಸ್ ಮಾಡಿದ್ದ ಅಮೆರಿಕ:
ಮಾರ್ಚ್ 13ರಂದು ಅಮೆರಿಕದ ನೌಕಾಪಡೆ ಮತ್ತು ಏರ್‌ಫೋರ್ಸ್ ಜೊತೆಯಾಗಿ ಯೆಮೆನ್‌ನಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿತ್ತು. ಹೌತಿ ಉಗ್ರ ಸಂಘಟನೆಯ ಜಾಗಗಳನ್ನು ಟಾರ್ಗೆಟ್ ಮಾಡಿ ಬಾಂಬ್‌ಗಳ ದಾಳಿ ನಡೆಸಿದವು. ಈ ದಾಳಿ ನಡೆದು ಒಂದೂವರೆ ದಿನ ಆದ್ಮೇಲೆನೆ ಜಗತ್ತಿಗೆ ಅಂಥದ್ದೊಂದು ಕಾರ್ಯಾಚರಣೆ ನಡೆದಿರೊ ವಿಚಾರ ಬಹಿರಂಗ ಆಗಿದ್ದು. ಆದ್ರೆ, ಅಮೆರಿಕದ ಫೈಟರ್ ಜೆಟ್‌ಗಳು ಹೌತಿ (Houthi Rebels) ನೆಲೆಗಳ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಆದ್ರೆ ಈ ದಾಳಿ ಮಾಡುವ 2 ಗಂಟೆಗೂ ಮುಂಚೆಯೇ ಅಮೆರಿಕದ ಪತ್ರಕರ್ತರೊಬ್ಬರಿಗೆ ಅದರ ಎಲ್ಲ ಮಾಹಿತಿಯು ಲಭ್ಯವಾಗಿತ್ತು.
ಯಾವೆಲ್ಲ ಶಸ್ತ್ರಾಸ್ತ್ರಗಳು ಬಳಕೆ ಮಾಡಲಾಗ್ತಿದೆ, ಟಾರ್ಗೆಟ್ ಎಲ್ಲಿ, ದಾಳಿ ಮಾಡೋ ಟೈಮ್ ಯಾವುದು, ಈ ಎಲ್ಲದರ ಸಂಪೂರ್ಣ ಪ್ಲ್ಯಾನ್ ಅಮೆರಿಕದ ‘ದಿ ಅಟ್ಲಾಂಟಿಕ್’ ಮ್ಯಾಗ್‌ಜೀನ್ ಎಡಿಟರ್ ಜೆಫ್ರಿ ಗೋಲ್ಡ್‌ಬರ್ಗ್ ಅವರಿಗೆ ಗೊತ್ತಾಗಿತ್ತು. ಇಲ್ಲಿ ಮತ್ತೊಂದು ಟ್ವಿಸ್ಟ್ ಅಂದ್ರೆ, ಆ ಎಡಿಟರ್‌ಗೆ ಇಷ್ಟೆಲ್ಲ ಮಾಹಿತಿ ಸಿಗೋಕೆ ಕಾರಣ ರಕ್ಷಣಾ ಇಲಾಖೆ ಕಾರ್ಯದರ್ಶಿ ಪೀಟ್ ಹೆಗ್ಸೆಥ್. ಅವರೇ ಆ ಎಲ್ಲ ಮಾಹಿತಿಯನ್ನು ಗ್ರೂಪ್ ಚಾಟ್‌ನಲ್ಲಿ ಹಂಚಿಕೊಂಡಿದ್ರು. ಅದಾದ ಮೇಲೆ ಹೌತಿಗಳ ವಿಚಾರ ಚರ್ಚಿಸೋ ಒಂದು ಗ್ರೂಪ್ ಕ್ರಿಯೇಟ್ ಆಗಿತ್ತು. ಅದರಲ್ಲಿ ಎಡಿಟರ್ ಅನ್ನೂ ಕೂಡ ಸೇರಿಸಲಾಗಿತ್ತು. ಅಲ್ಲಿ ಇಡೀ ಅಮೆರಿಕದ ಭದ್ರತೆಗೆ ಸಂಬಂಧಿಸಿದ ಉನ್ನತ ಅಧಿಕಾರಿಗಳಿಂದ ಹಿಡಿದು ಅಮೆರಿಕ ಉಪಾಧ್ಯಕ್ಷರ ವರೆಗೂ ಎಲ್ಲರೂ ಇದ್ರು. ರಕ್ಷಣಾ ಇಲಾಖೆ, ಗುಪ್ತಚರ ಇಲಾಖೆ, ರಾಷ್ಟ್ರೀಯ ಭದ್ರತೆ ಹಾಗೂ ಅಮೆರಿಕದ ಆಡಳಿತ ಎಲ್ಲರ ನಡುವೆ ಸಂವಹನ ಮಾಡಿಕೊಂಡು ಯೆಮೆನ್‌ನಲ್ಲಿ ಹೌತಿಗಳ ಮೇಲೆ ದಾಳಿಯ ಪ್ಲ್ಯಾನ್ ಅದೇ ಗ್ರೂಪ್‌ನಲ್ಲಿ ಆಗಿತ್ತು. ಅದರ ಪಿನ್ ಟು ಪಿನ್ ಮಾಹಿತಿ ಎಡಿಟರ್ ಜೆಫ್ರಿ ಗೋಲ್ಡ್‌ಬರ್ಗ್‌ಗೂ ಗೊತ್ತಾಗ್ತಿತ್ತು. ಆದ್ರೆ, ಅದೆಲ್ಲವೂ ನಿಜ ಅನ್ನೋದು ಗೊತ್ತಾಗಿದ್ದು, ಅಮೆರಿಕ ಹೌತಿಗಳ ಮೇಲೆ ಬಾಂಬ್ ಹಾಕಿದ್ಮೇಲೆನೆ. ಇದೆಲ್ಲವೂ ಈಗ ಗುಟ್ಟಾಗಿ ಉಳಿದಿಲ್ಲ. ಆ ಎಡಿಟರ್, ನನಗೆ ಆಕಸ್ಮಿಕವಾಗಿ ಇದೆಲ್ಲ ಗೊತ್ತಾಯ್ತು ಅಂತ ವಿವರವಾದ ಆರ್ಟಿಕಲ್ ಬರೆದಿದ್ದಾರೆ. ಇನ್ನು ಭದ್ರತಾ ಅಧಿಕಾರಿಗಳಿಗೆ ಈ ಬೆಳವಣಿಗೆ ಬೆಂಕಿಯಲ್ಲಿ ತಾವೇ ಕೈಯಿಟ್ಟು ಸುಟ್ಟುಕೊಂಡ ಹಾಗೇ ಆಗಿದೆ.
ಸಿಗ್ನಲ್ ಮೆಸೆಜಿಂಗ್ ಆಪ್‌ನಲ್ಲಿ ‘ಹೌತಿ ಪಿಸಿ ಸ್ಮಾಲ್ ಗ್ರೂಪ್’ ಹೆಸರಿನ ಗ್ರೂಪ್‌ನಲ್ಲಿ ದಾಳಿಯ ಬಗ್ಗೆ ಚರ್ಚೆ ಮಾಡಲಾಗಿತ್ತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸೇರಿದಂತೆ 18 ಮಂದಿ ಆ ಗ್ರೂಪ್‌ನಲ್ಲಿದ್ರು. ಅಮೆರಿಕ ನಡೆಸೋ ದಾಳಿಯ ವಿಚಾರ ಅತ್ಯಂತ ಗೋಪ್ಯವಾದುದು, ಇಲ್ಲಿ ರಾಷ್ಟ್ರೀಯ ಭದ್ರತೆಯ ಲೋಪ ಆಗಿದೆ ಅನ್ನೋ ಆರೋಪಗಳು ಟ್ರಂಪ್ ಆಡಳಿತಕ್ಕೆ ತಲೆ ನೋವಾಗಿದೆ. ತುಳಸಿ ಗಬಾರ್ಡ್, ಮೈಕೆಲ್ ವಾಲ್ಟ್ಜ್ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಸ್ಥಾನದಿಂದ ಕಿತ್ತು ಹಾಕಿ ಅನ್ನೋ ಒತ್ತಾಯ ಕೇಳಿಬಂದಿದೆ. ಆದ್ರೆ, ಟ್ರಂಪ್ ಅಧಿಕಾರಿಗಳನ್ನು ಕಿತ್ತು ಹಾಕೋ ಕೂಗನ್ನು ನಿರಾಕರಿಸಿದ್ದಾರೆ.
ಇನ್ನು ಅಮೆರಿಕ ಈ ದಾಳಿಯನ್ನು ಪ್ಲ್ಯಾನ್ ಮಾಡೋಕೆ ಕಾರಣ, ಕೆಂಪು ಸಮುದ್ರ ಮತ್ತು ಗಲ್ಫ್ ಆಫ್ ಅಡೆನ್‌ನಲ್ಲಿ ಹೌತಿ ಉಗ್ರರು ಸರಕು ಸಾಗಣೆ ಹಡಗುಗಳ ಮೇಲೆ ನಡೆಸ್ತಿದ್ದ ಅಟ್ಯಾಕ್. ಅಷ್ಟೇ ಅಲ್ಲದೇ ಹೌತಿಗಳು ಹಮಾಸ್ ಅನ್ನು ಬೆಂಬಲಿಸಿ ಇಸ್ರೇಲ್ ಮೇಲೂ ದಾಳಿ ಶುರು ಮಾಡಿದ್ದರು. ಅಮೆರಿಕದ ಯುದ್ಧ ನೌಕೆಗಳ ಮೇಲೆ ಹಲವು ಬಾರಿ ಹೌತಿಗಳು ದಾಳಿ ಮಾಡಿದ್ದರು. ಕೆಂಪು ಸಮುದ್ರ ಮಾರ್ಗದಲ್ಲಿ ಸರಕು ಸಾಗಣೆ ಹಡಗು ಸಂಚಾರಕ್ಕೆ ಅವರು ಅಡ್ಡಿ ಪಡಿಸ್ತಿದ್ರು. ಇದೆಲ್ಲವನ್ನೂ ಸರಿಪಡಿಸೋಕೆ ಅಮೆರಿಕ ಹೌತಿ ನೆಲೆಗಳ ಮೇಲೆ ಕಾರ್ಯಾಚರಣೆ ನಡೆಸಿದೆ. ಆ ಕಾರ್ಯಾಚರಣೆಯ ಮೊದಲ ಪ್ಲ್ಯಾನ್ ಲೀಕ್ ಆಗಿತ್ತು.
ಹೌತಿ ಉಗ್ರರು ಯಾರು?
1990ರಲ್ಲಿ ಯೆಮೆನ್ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ವಿರುದ್ಧ ಭ್ರಷ್ಟಾಚಾರದ ಆರೋಪ ಬರುತ್ತದೆ. ಈ ವೇಳೆ ಧಾರ್ಮಿಕ ನಾಯಕ ಹುಸೇನ್ ಅಲಿ ಹೌತಿ ನೇತೃತ್ವದಲ್ಲಿ ಒಂದು ಚಳುವಳಿ ಆರಂಭವಾಗುತ್ತದೆ. ಈ ಚಳುವಳಿ ಈಗ ಹೌತಿ ಉಗ್ರ ಸಂಘಟನೆಯಾಗಿ ಮಾರ್ಪಾಡಾಗಿದೆ. ರಷ್ಯಾದ (Russia) ವಿರುದ್ಧ ಹೋರಾಡಲು ಅಮೆರಿಕ ತಾಲಿಬಾನ್ ಹೇಗೆ ಬೆಳೆಸಿತೋ ಅದೇ ರೀತಿ ಇರಾನ್ ತನ್ನ ವಿರುದ್ಧ ಇರುವ ದೇಶಗಳ ವಿರುದ್ಧ ಹೋರಾಡಲು ಹೌತಿ ಬಂಡುಕೋರರಿಗೆ ಸಹಾಯ ನೀಡುತ್ತದೆ. ಈಗ ಯೆಮೆನ್‌ನ ಒಂದು ಕಡೆ ಸೌದಿ ಅರೇಬಿಯಾ ಮತ್ತು ಅಮೆರಿಕದ ಬೆಂಬಲ ಇರುವ ಒಂದು ಸರ್ಕಾರ ಇದ್ದರೆ ಇನ್ನೊಂದು ಕಡೆ ಇರಾನ್ ಬೆಂಬಲಿತ ಹೌತಿ ಉಗ್ರರು ಇದ್ದಾರೆ. ಅಮೆರಿಕ, ಇಸ್ರೇಲ್, ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಹೌತಿ ಉಗ್ರರ ಶತ್ರುಗಳು.
ಅಮೆರಿಕ ದಾಳಿ ನಡೆಸಿದ್ದು ಯಾಕೆ?
2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ಯುದ್ಧ ವಿಮಾನಗಳನ್ನು ಬಳಸಿ ಬಾಂಬ್ ದಾಳಿ ನಡೆಸಿದೆ. ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ಅಮೆರಿಕ ಏರ್‌ಸ್ಟ್ರೈಕ್ ಮಾಡಿದೆ.
ʻಸಿಗ್ನಲ್ʼ ವಿಶೇಷತೆ ಏನು?
ಸಿಗ್ನಲ್ ಆಪ್ ಇದೊಂದು ಓಪನ್ ಸೋರ್ಸ್ ಮೆಸೆಜಿಂಗ್ ಅಪ್ಲಿಕೇಷನ್. 2012ರಲ್ಲಿ ಬಿಡುಗಡೆಯಾಗಿರುವ ಆಪ್, ಆಂಡ್ರಾಯ್ಡ್ ಮತ್ತು ಆಪಲ್ ಎರಡೂ ಪ್ಲಾಟ್‌ಫಾರ್ಮ್‌ನಲ್ಲಿ ವರ್ಕ್ ಆಗುತ್ತೆ. ಜಗತ್ತಿನಾದ್ಯಂತ 7 ಕೋಟಿಗೂ ಅಧಿಕ ಜನ ಇದನ್ನು ಬಳಸುತ್ತಿದ್ದಾರೆ. ಇದು ಲಾಭಕ್ಕಾಗಿ ಕ್ರಿಯೇಟ್ ಆಗಿರುವ ಪ್ಲಾಟ್‌ಫಾರ್ಮ್ ಅಲ್ಲ ಎನ್ನಲಾಗಿದೆ. ಸುರಕ್ಷಿತ ಸಂದೇಶ ರವಾನೆಯು ಇದರ ಮುಖ್ಯ ಉದ್ದೇಶ ಸಿಗ್ನಲ್ ಬಣ್ಣಿಸಿಕೊಂಡಿದೆ.
ಇದರಲ್ಲಿ ಮಾಡೋ ಸಂದೇಶಗಳು ಎಂಡ್ ಟು ಎಂಡ್ ಎನ್ಕ್ರಿಪ್ಟ್ ಆಗಿರೋದ್ರಿಂದ ಮಧ್ಯದಲ್ಲಿ ಹ್ಯಾಕ್ ಮಾಡಿ, ಅದನ್ನು ಓದೋಕೆ ಸಾಧ್ಯವಾಗೋದಿಲ್ಲ. ಹಾಗೇ ಬೇರೆ ಮೆಸೆಜಿಂಗ್ ಆಪ್‌ಗಳ ರೀತಿ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿಕೊಂಡು, ಸರ್ವರ್‌ನಲ್ಲಿ ಅದನ್ನು ಉಳಿಸುವ ವ್ಯವಸ್ಥೆ ಸಿಗ್ನಲ್‌ನಲ್ಲಿ ಇಲ್ಲ. ಯಾವುದೇ ಖಾಸಗಿ ಮಾಹಿತಿಯನ್ನೂ ಸಿಗ್ನಲ್ ಕೇಳುವುದು-ಸಂಗ್ರಹಿಸುವುದನ್ನು ಮಾಡೋದಿಲ್ಲ. ಇದೇ ಕಾರಣಕ್ಕೆ ಬಹಳಷ್ಟು ಮಂದಿ ಸುರಕ್ಷಿತ ಸಂವಹನಕ್ಕೆ ಇದೇ ಆಪ್ ಬಳಸ್ತಿದ್ದಾರೆ.
ʻಸಿಗ್ನಲ್ʼ ಹ್ಯಾಕ್ ಮಾಡಬಹುದೇ?
ಸಿಗ್ನಲ್ ಆಪ್ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ರೂ, ಈ ಹಿಂದೆ ರಷ್ಯಾ – ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಹ್ಯಾಕಿಂಗ್‌ಗೆ ಯತ್ನ ನಡೆದಿತ್ತು ಎಂಬ ವರದಿಗಳು ಕಂಡುಬಂದಿವೆ. ರಷ್ಯಾ ವಿರುದ್ಧ ರೂಪಿಸುವ ಯುದ್ಧ ತಂತ್ರಗಳನ್ನು ತಿಳಿಯಲು ಉಕ್ರೇನ್ ಮಿಲಿಟರಿ ಅಧಿಕಾರಿಗಳ ಸಿಗ್ನಲ್ ಖಾತೆಗಳನ್ನು ಹ್ಯಾಕ್ ಮಾಡಲು ಪ್ರಯತ್ನ ನಡೆದಿತ್ತು. ಇದರ ಹೊರತಾಗಿ ಡೆಸ್ಕ್ ಟಾಪ್ ಅಪ್ಲಿಕೇಷನ್‌ಗೆ ಲಿಂಕ್ ಮಾಡುವ ಮೂಲಕ ಇದರಲ್ಲಿನ ಮಾಹಿತಿಯನ್ನು ಸೋರಿಕೆ ಮಾಡಬಹುದು. ಉಳಿದಂತೆ ಹ್ಯಾಕಿಂಗ್ ಮೂಲಕ ಮಾಹಿತಿ ಕದ್ದಿರುವುದಕ್ಕೆ ಸ್ಪಷ್ಟ ನಿದರ್ಶನಗಳಿಲ್ಲ ಎನ್ನುತ್ತವೆ ವರದಿಗಳು.
ಒಟ್ಟಿನಲ್ಲಿ ಅತಿ ಸುರಕ್ಷಿತ ಎಂದು ಭಾವಿಸಿದ್ದ ಆಪ್‌ನಲ್ಲಿ ಅಮೆರಿಕದಂತ ದೇಶದ ಭದ್ರತಾ ವಿಚಾರಗಳು ಹಂಚಿಹೋಗಿರೋದು ವಿಪರ್ಯಾಸವೇ ಸರಿ. ಟ್ರಂಪ್ ಆಡಳಿತ ಇದರ ಬಗ್ಗೆ ಎಂಥ ಕ್ರಮಕೈಗೊಳ್ಳುತ್ತೆ ಕಾದು ನೋಡಬೇಕಿದೆ.