ಚಾಟ್ ಜಿಪಿಟಿಯಿಂದ ರಚಿಸಲಾದ ಘಿಬ್ಲಿ ಶೈಲಿಯ ಎಐ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಹವಾ ಸೃಷ್ಟಿಸಿದೆ. ಸಿನಿಮಾ ತಾರೆಯರಿಂದು ಹಿಡಿದು ಪ್ರತಿಯೊಬ್ಬರೂ ತಮ್ಮ ಫೋಟೋಗಳನ್ನು ಘಿಬ್ಲಿ ಸ್ಟುಡಿಯೋದಲ್ಲಿ ಅಪ್ಲೋಡ್ ಮಾಡಿ ಎಐ ಚಿತ್ರಗಳನ್ನಾಗಿ ಪರಿವರ್ತಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ಆದರೆ ಘಿಬ್ಲಿಯಲ್ಲಿ ಫೋಟೋ ಅಪ್ಲೋಡ್ ಮಾಡುವುದರಿಂದ ನಮ್ಮ ವೈಯಕ್ತಿಕ ಡೇಟಾವನ್ನು ಮತ್ತೊಬ್ಬರ ಕೈಗೆ ನೀಡಿ ನಮಗೆ ನಾವೇ ಅಪಾಯ ತಂದುಕೊಳ್ಳುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ವಿಮರ್ಶಕರು ನೀಡಿದ್ದಾರೆ. ಹಾಗಿದ್ರೆ ಘಿಬ್ಲಿಯಲ್ಲಿ ಎಐ ಫೋಟೋ ರಚಿಸುವುದು ಎಷ್ಟು ಸೇಫ್? ಇದರಿಂದ ಬಳಕೆದಾರರಿಗೆ ಎದುರಾಗಬಹುದಾದ ಅಪಾಯಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಏನಿದು ಸ್ಟುಡಿಯೋ ಘಿಬ್ಲಿ ?
ಸ್ಟುಡಿಯೋ ಘಿಬ್ಲಿ ಎಂಬುದು ಜಪಾನೀಸ್ ಅನಿಮೇಷನ್ ಸ್ಟುಡಿಯೋ ಆಗಿದ್ದು, ಮೈ ನೇಬರ್ ಟೊಟೊರೊ, ಪ್ರಿನ್ಸೆಸ್ ಮೊನೊನೊಕೆ ಮುಂತಾದ ಕಾರ್ಟೂನ್ ಚಿತ್ರಗಳನ್ನು ನಿರ್ಮಿಸಿ ಮಕ್ಕಳ ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಶೈಲಿಯ ಚಿತ್ರಗಳು ಹೊಳೆಯಂತೆ ಹರಿದುಬರುತ್ತಿವೆ. ಎಲ್ಲರೂ ತಮ್ಮ ಹಾಗೂ ಕುಟುಂಬ ಸದಸ್ಯರು, ಸ್ನೇಹಿತರ ಜತೆಗಿನ ಫೋಟೋಗಳನ್ನು ಕೊಟ್ಟು ಎಐ ರಚಿತ ಘಿಬ್ಲಿ ಸ್ಟೈಲ್ ಇಮೇಜ್‌ಗಳನ್ನು ಪರಿಶೀಲಿಸುತ್ತಿರುವುದು ಇದಕ್ಕೆ ಕಾರಣ. ದೊಡ್ಡ ದೊಡ್ಡ ಬ್ರಾಂಡ್‌ಗಳು ಕೂಡ ಈ ಟ್ರೆಂಡ್ ಅನ್ನು ಅನುಸರಿಸುತ್ತಿದ್ದು, ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ಮಾರ್ಚ್ 26ರಂದು ಈ ಫೀಚರ್ ಅನ್ನು ಚಾಟ್‌ಜಿಪಿಟಿ ಪರಿಚಯಿಸಿದೆ.
ಘಿಬ್ಲಿ ಆರ್ಟ್ ಟ್ರೆಂಡ್ ಶುರುವಾಗಿದ್ದು ಹೇಗೆ?
ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ತಮ್ಮ ಪ್ರೊಫೈಲ್ ಪಿಕ್ಚರ್‌ಗೆ ಘಿಬ್ಲಿ ಸ್ಟೈಲ್‌ನ ತನ್ನ ಚಿತ್ರವನ್ನು ಅಪ್ಲೋಡ್ ಮಾಡಿದ್ದು, ಅದರ ಬಗ್ಗೆ ಬರೆದಾಗ ಸಾಮಾಜಿಕ ಜಾಲತಾಣದಲ್ಲಿ ಇದು ಹಲ್‌ಚಲ್ ಎಬ್ಬಿಸಿತು.
ಏನಿದು ಘಿಬ್ಲಿ ಆರ್ಟ್?
ಸ್ಟುಡಿಯೋ ಘಿಬ್ಲಿಯನ್ನು ಹಯಾವೋ ಮಿಯಾಝಕಿ, ಇಸಾವೋ ಟಕಹಟ ಮತ್ತು ತೋಷಿಯೋ ಸುಜುಕಿ ಅವರು 1985ರಲ್ಲಿ ಹುಟ್ಟುಹಾಕಿದರು. ಜಪಾನ್ ದೇಶದ ಅತ್ಯಂತ ಜನಪ್ರಿಯ ಅನಿಮೇಷನ್ ಸ್ಟುಡಿಯೋ ಇದು. ಕೈಯಲ್ಲೇ ಬರೆದ ಅನಿಮೇಷನ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಈ ಸ್ಟುಡಿಯೋ, ಅದರಲ್ಲಿ ಸೂಕ್ತ ಹಿನ್ನೆಲೆ ಹಾಗೂ ಭಾವನೆಗಳನ್ನು ತುಂಬಿ ಕಥೆಗಳ ನಿರೂಪಣೆಗೆ ಜೀವ ತುಂಬಿಕೊಡುವ ಕೆಲಸ ಮಾಡುತ್ತಿದೆ. ಘಿಬ್ಲಿ ಎಂಬ ಹೆಸರು ಲಿಬಿಯನ್ ಅರೇಬಿಕ್ ಶಬ್ದದಿಂದ ಬಂದಿದ್ದು, ಮರುಭೂಮಿಯ ಬಿಸಿಗಾಳಿ ಎಂಬ ಅರ್ಥ ಕೊಡುತ್ತದೆ.
ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಈ ಹೊಸ ಇಮೇಜ್ ಜನರೇಟರ್ ಫೀಚರ್ ಅನ್ನು ಉಚಿತವಾಗಿ ನೀಡಲು ಯೋಜಿಸಿದ್ದರು. ಇದಕ್ಕೆ ಸಿಕ್ಕ ಅನಿರೀಕ್ಷಿತ ಯಶಸ್ಸಿನ ಕಾರಣ ಬಳಿಕ ಚಂದಾದಾರಿಗೆ ಮಾತ್ರ ನೀಡಲು ತೀರ್ಮಾನಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಇದು ಸದ್ಯ ಜಿಪಿಟಿ ಪೇಯ್ಡ್ ವರ್ಷನ್‌ನಲ್ಲಿ ಮಾತ್ರ ಲಭ್ಯವಿದೆ ಎಂದು ವರದಿ ಹೇಳಿದೆ.
ಚಾಟ್ ಜಿಪಿಟಿ ಹೊರತುಪಡಿಸಿ, ನೀವು ಇದನ್ನು ಉಚಿತವಾಗಿ ಮಾಡಲು ಕೆಲ ಆ್ಯಪ್ಗಳಿವೆ. ಫ್ರೀ ಆಗಿ ಘಿಬ್ಲಿ ಚಿತ್ರಗಳನ್ನು ರಚಿಸಲು ಮೊದಲ ಸಾಧನವೆಂದರೆ ಮಿಡ್‌ಜರ್ನಿ, ಇಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸ್ಟುಡಿಯೋ ಘಿಬ್ಲಿ-ಪ್ರೇರಿತ, ಹಯಾವೊ ಮಿಯಾಜಾಕ್ ಮತ್ತು ಇತರ ಕೀವರ್ಡ್‌ಗಳನ್ನು ಬಳಸಬಹುದು. ಇದರೊಂದಿಗೆ ನಿಮ್ಮ ಚಿತ್ರವು ಘಿಬ್ಲಿ ಶೈಲಿಯಾಗುತ್ತದೆ.
ನೀವು ಘಿಬ್ಲಿ ಶೈಲಿಯ ಚಿತ್ರಗಳನ್ನು ಉಚಿತವಾಗಿ ರಚಿಸಲು ಬಯಸಿದರೆ ಎಲೋನ್ ಮಸ್ಕ್ ಅವರ ಗ್ರೋಕ್ ಎಐ ಅನ್ನು ಕೂಡ ಬಳಸಬಹುದು. ಗ್ರೋಕೆ ಎಐ ಚಾಟ್ ಜಿಪಿಟಿಯಷ್ಟು ನಿಖರವಾದ ಚಿತ್ರಗಳನ್ನು ರಚಿಸಲು ಸಾಧ್ಯವಾಗದಿದ್ದರೂ, ನೀವು ಅದನ್ನು ಉಚಿತವಾಗಿ ರಚಿಸಬಹುದು. ಗೂಗಲ್ ಎಐ ಸ್ಟುಡಿಯೋದ ಇತ್ತೀಚಿನ ಜೆಮಿನಿಯಲ್ಲಿಯೂ ಘಿಬ್ಲಿ ಶೈಲಿಯ ಚಿತ್ರಗಳನ್ನು ರಚಿಸಬಹುದು.
ಕಾರ್ಟೂನ್ ರೀತಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳಲು ಖುಷಿಯಾಗುತ್ತದೆ ಎನ್ನುವ ಕಾರಣಕ್ಕೆ ಘಿಬ್ಲಿ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಇತರೇ ಕೆಲವು ಆ್ಯಪ್ಗಳು, ತಂತ್ರಜ್ಞಾನಗಳಂತೆಯೇ ಘಿಬ್ಲಿ ಕೂಡ ಮಾರಕವಾಗಿರುವುದಾಗಿ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಸೈಬರ್ ಪೊಲೀಸರ ಪ್ರಕಾರ, ನಾವು ತೆಗೆದ ಪ್ರತಿಯೊಂದು ಫೋಟೊದಲ್ಲಿಯೂ ಮೆಟಾಡೇಟಾ ಎಂಬ ಮಾಹಿತಿ ಇರುತ್ತದೆ. ಈ ಮೆಟಾಡೇಟಾ ಅಥವಾ EXIF ಮಾಹಿತಿಗಳು ನಮ್ಮ ಹಲವಾರು ವೈಯಕ್ತಿಯ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ನಾವು ಯಾವ ಮೊಬೈಲ್ನಲ್ಲಿ ಫೋಟೋ ತೆಗೆದಿರುವುದು, ಅದರ ಸ್ಥಳ, ಸಮಯ ಸೇರಿದಮತೆ ಸಂಪೂರ್ಣ ದತ್ತಾಂಶ ಸಂಗ್ರಹವಾಗಿರುತ್ತದೆ. ಈ ಎಲ್ಲಾ ಮಾಹಿತಿಗಳೇ ಸೈಬರ್ ಕ್ರಿಮಿನಲ್ಸ್ಗೆ ಅಸ್ತ್ರ. ನೀವು ಅಪ್ಲೋಡ್ ಮಾಡುವ ಫೋಟೋಗಳು ಅಥವಾ ವಿಡಿಯೋಗಳು, ನಿಮ್ಮ ಮುಖದ ವೈಶಿಷ್ಟ್ಯಗಳು, ಸಿಸಿಟಿವಿ ಕ್ಯಾಮೆರಾಗಳ ಮುಖಾಂತರ ನಿಮ್ಮ ಓಡಾಟದ ಮಾಹಿತಿ ಸಂಗ್ರಹವಾಗಿ, ಟ್ರ್ಯಾಕಿಂಗ್ಗೆ ಅವಕಾಶಗಳನ್ನೂ ಮಾಡಿಕೊಡುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೇ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೃಷ್ಟಿಸಿದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಎಲಾನ್ ಮಸ್ಕ್, ಆರ್ಯಭಟ, ಮೊಗ್ಯಾಂಬೋ, ಸ್ಯಾಮ್ ಆಲ್ಟ್‌ಮನ್ ಸೇರಿದಂತೆ ಹಲರ ನಕಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಇದೀಗ ವೈರಲ್ ಆಗಿದೆ. ವಿಶ್ವದ ದಿಗ್ಗಜರು, ಉದ್ಯಮಿಗಳು, ಕ್ರೀಡಾಪಟುಗಳ ನಕಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಸೃಷ್ಟಿಸಿ ಪೋಸ್ಟ್ ಮಾಡಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಗಾಗಿ ನಕಲಿ ಕಾರ್ಡ್ ಪೋಸ್ಟ್ ಮಾಡಲಾಗುತ್ತಿದೆ. ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ಸೇರಿದಂತೆ ಹಲವರನ ನಕಲಿ ಆಧಾರ್ ಕಾರ್ಡ್ ಪೋಸ್ಟ್ ಆಗಿರುವುದು ಕಂಡುಬಂದಿದೆ.
ಬಳಕೆದಾರರಿಗೆ ಅಪಾಯಗಳೇನು?
Lusiza Jarovsky ಹೆಸರಿನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು ಇದರಲ್ಲಿ, ‘ಬಳಕೆದಾರರು ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿದ ಬಳಿಕ ಆ ಫೋಟೋಗಳ ಬಳಕೆಯ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ಓಪನ್ ಎಐನ ಗೌಪ್ಯತಾ ನೀತಿಯು ಬಳಕೆದಾರರ ಇನ್‌ಪುಟ್ ಅನ್ನು ಮಾದರಿ ತರಬೇತಿಗಾಗಿ ಬಳಸಬಹುದು, ಇದರಿಂದ ಬಳಕೆದಾರರಿಗೆ ಎದುರಾಗುವ ಅಪಾಯವೇ ಹೆಚ್ಚು ಎಂದು ತಿಳಿಸಿದ್ದಾರೆ.
*ಗೌಪ್ಯತೆಯ ಉಲ್ಲಂಘನೆ: ನೀವು ಒಮ್ಮೆ ಫೋಟೋ ಅಪ್‌ಲೋಡ್ ಮಾಡಿದ ನಂತರ, ನಿಮಗೆ ಅದರ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಆದ್ದರಿಂದ ನಿಮ್ಮ ಫೋಟೋವನ್ನು ಇತರ ಉದ್ದೇಶಗಳಿಗೂ ಬಳಸಬಹುದು.
*ಗುರುತಿನ ಕಳ್ಳತನ: ನೀವು ಅಪ್ಲೋಡ್ ಮಾಡುವ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬೇರೋಬ್ಬರ ಗುರುತನ್ನು ಕದಿಯಬಹುದು.
*ಸುರಕ್ಷಿತ ಡೇಟಾ: ಇದು ನಿಮ್ಮ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿರಿಸದೇ ಇರಬಹುದು ಮತ್ತು ನೀವು ಹ್ಯಾಕಿಂಗ್‌ಗೆ ಬಲಿಯಾಗಬಹುದು.
*ದುರುಪಯೋಗ: ನಿಮ್ಮ ಫೋಟೋಗಳನ್ನು ತಪ್ಪು ಉದ್ದೇಶಕ್ಕಾಗಿ ಬಳಸಬಹುದು. ನಕಲಿ ಪ್ರೊಫೈಲ್‌ಗಳನ್ನು ರಚಿಸುವುದು ಇತ್ಯಾದಿ.
*ಕಾನೂನು ಸಮಸ್ಯೆಗಳು: ಬಳಕೆದಾರರ ಫೋಟೋಗಳ ಅನಧಿಕೃತ ಬಳಕೆಯು ಕಾನೂನು ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಬಳಕೆದಾರರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಬೇಕು.