– ಊಟಕ್ಕೆ ವಿರಾಮದಂತೆ ಕೆಲಸದ ಕಚೇರಿಯಲ್ಲಿ ಲೈಂಗಿಕತೆಗೂ ಸಿಗುತ್ತಾ ವಿರಾಮ?
ರಷ್ಯಾದಲ್ಲಿ (Russia) ಕುಸಿಯುತ್ತಿರುವ ಜನಸಂಖ್ಯೆ ಹೆಚ್ಚಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನೇತೃತ್ವದ ಸರ್ಕಾರ ‘ಸೆಕ್ಸ್ ಸಚಿವಾಲಯ’ (Ministry Of Sex) ಸ್ಥಾಪನೆಗೆ ಚಿಂತನೆ ನಡೆಸಿದೆ. ಪುಟಿನ್ ಆಪ್ತೆ ಹಾಗೂ ರಷ್ಯಾ ಸರ್ಕಾರದ ಕುಟುಂಬ ಸಂರಕ್ಷಣೆ ಸಂಸದೀಯ ಸಮಿತಿ ಅಧ್ಯಕ್ಷೆ ನಿನಾ ಆಸ್ಟೇನಿಯಾ ಎಂಬುವರು ಈ ಸಂಬಂಧ ಸಲ್ಲಿಕೆಯಾಗಿರುವ ಮನವಿಯನ್ನು ಪರಿಶೀಲಿಸುತ್ತಿದ್ದಾರೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
ಹೌದು. ಕೆಲ ದಿನಗಳ ಹಿಂದೆಯಷ್ಟೇ ಭಾರತದಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೆಚ್ಚು ಮಕ್ಕಳನ್ನು ಹೊಂದುವಂತೆ ಜನರಲ್ಲಿ ಮನವಿ ಮಾಡಿದ್ದರು, 2 ಅಥವಾ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮಾತ್ರ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ನೀಡುವಂತಹ ಹೊಸ ಕಾನೂನು ರೂಪಿಸುವುದಾಗಿಯೂ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪೂರ್ವಜರು 16 ಬಗೆಯ ಸಂಪತ್ತನ್ನು ಹೊಂದುವಂತೆ ಆಶೀರ್ವದಿಸುವ ಬದಲಾಗಿ ʻ16 ಮಕ್ಕಳನ್ನು ಹೊಂದುವಂತೆ ಆಶೀರ್ವದಿಸಬೇಕಾದ ಅನಿವಾರ್ಯತೆ ಇದೆʼ ಎಂದು ಜನಸಂಖ್ಯೆ ಹೆಚ್ಚಳದ ಬಗ್ಗೆ ಹೇಳಿದ್ದರು.
Advertisement
ಇನ್ನೂ ಜನಸಂಖ್ಯೆ ನಿಯಂತ್ರಿಸಲು ಚೀನಾ, 80ರ ದಶಕದಲ್ಲಿ ‘ಒಂದು ಮಗುವಿನ ನೀತಿ’ಯನ್ನು ಜಾರಿಗೆ ತಂದಿತ್ತು. ಆದ್ರೆ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಒಂದು ಮಗುವಿನ ನೀತಿಯನ್ನು ರದ್ದುಗೊಳಿಸಿ, ʻಎರಡು ಮಗು’ ಮತ್ತು ನಂತರ ‘ಮೂರು ಮಗು’ ನೀತಿಯನ್ನು ಜಾರಿಗೆ ತರಲಾಯಿತು. ಇದೀಗ ಹೆಚ್ಚುಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿರುವ ಚೀನಾ, ಹೆಚ್ಚು ಮದುವೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ ಯುವಕ-ಯುವತಿಯರು ಪ್ರೀತಿಯಲ್ಲಿ ತೊಡಗುವಂತೆ ಮಾಡಲು ಕಾಲೇಜುಗಳಲ್ಲಿ ವಿಶೇಷ ಕೋರ್ಸ್ ಸಹ ಆರಂಭಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
Advertisement
ಇದೀಗ ಜನಸಂಖ್ಯಾ ಸಮಸ್ಯೆ ಭಾರತ ಮಾತ್ರವಲ್ಲ, ಇಡೀ ವಿಶ್ವವನ್ನು ಕಾಡತ್ತಿದೆ. ರಷ್ಯಾದಲ್ಲಿ ಜನಸಂಖ್ಯೆ ವೇಗವಾಗಿ ಕುಸಿಯುತ್ತಿದೆ. ಕಳೆದ 3 ವರ್ಷದಿಂದ ನಡೆಯುತ್ತಿರುವ ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಸಾಕಷ್ಟು ಜನ ಮೃತಪಟ್ಟಿದ್ದು, ಜನಸಂಖ್ಯೆ ಇಳಿಕೆಯ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ. ಹೀಗಾಗಿ ಮಹಿಳೆಯರು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಈಗಾಗಲೇ ಸರ್ಕಾರ ಅನೇಕ ಉಪಕ್ರಮಗಳನ್ನು ಜಾರಿಗೊಳಿಸಿದೆ. ಆ ಪ್ರಯತ್ನವನ್ನು ತೀವ್ರಗೊಳಿಸಲು ಗ್ಲಾವ್ ಎಂಬ ಪಿಆರ್ ಏಜೆನ್ಸಿಯು ಸರ್ಕಾರಕ್ಕೆ ‘ಸೆಕ್ಸ್ ಸಚಿವಾಲಯ’ ಸ್ಥಾಪಿಸುವ ಸಲಹೆ ನೀಡಿದೆ. ಅದಕ್ಕಾಗಿ ʻಕೆಲಸದ ಸ್ಥಳದಲ್ಲಿ ಸೆಕ್ಸ್ʼ ಎನ್ನುವ ಯೋಜನೆಯನ್ನೂ ಪ್ರಸ್ತಾಪಿಸಲಾಗಿದೆ. ಈ ಯೋಜನೆ ಪ್ರಕಾರ, ಜಸನರು ಕಚೇರಿಯಲ್ಲಿ ಊಟ ಅಥವಾ ಕಾಫಿ, ಟೀಗೆ ವಿರಾಮ ತೆಗೆದುಕೊಂಡಂತೆ ಸೆಕ್ಸ್ ಮಾಡುವುದಕ್ಕೂ ಸಮಯ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ರಷ್ಯಾ ಈ ಕ್ರಮ ಕೈಗೊಂಡಿದ್ದೇಕೆ? ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳು ಜನಸಂಖ್ಯೆ ಹೆಚ್ಚಳಕ್ಕೆ ಒತ್ತು ನೀಡುತ್ತಿರುವುದಕ್ಕೆ ಎಂಬುದನ್ನು ಮುಂದೆ ತಿಳಿಯೋಣ…
Advertisement
ಜನಸಂಖ್ಯೆ ಹೆಚ್ಚಳಕ್ಕೆ ಏಕೆ ಒತ್ತು?
ಸುಮಾರು 50 ವರ್ಷಗಳ ಹಿಂದೆ, ಲೇಖಕ ಮತ್ತು ಅರ್ಥಶಾಸ್ತ್ರಜ್ಞ ಪಾಲ್ ಎಲ್ರಿಚ್ ತಮ್ಮ ʻಜನಸಂಖ್ಯಾ ಸ್ಫೋಟ’ ಎಂಬ ಪುಸ್ತಕದಲ್ಲಿ ಮುಂದೊಂದು ದಿನ ಜನಸಂಖ್ಯೆ ಎಷ್ಟರಮಟ್ಟಿಗೆ ಹೆಚ್ಚುತ್ತದೆ ಎಂದರೆ ಜನರು ಹಸಿವಿನಿಂದ ಸಾಯುತ್ತಾರೆ ಮತ್ತು ಭೂಮಿಯು ಸತ್ತವರ ಗ್ರಹವಾಗುತ್ತದೆ ಎಂದು ಉಲ್ಲೇಖಿಸಿದ್ದರು. ಇದು ಇಡೀ ವಿಶ್ವವನ್ನು ಚಿಂತೆಗೀಡುಮಾಡಿತ್ತು. ಆದ್ರೆ ಈಗ ಇದಕ್ಕೆ ತದ್ವಿರುದ್ಧವಾದಂತಿದೆ. ಅದಕ್ಕಾಗಿ ವೃದ್ಧರ ಸಂಖ್ಯೆಯನ್ನು ಕಡಿಮೆಗೊಳಿಸಲು ಹಾಗೂ ಫಲವತ್ತತೆಯ ದರವನ್ನು ಹೆಚ್ಚಿಸಲು ಸರ್ಕಾರಗಳು ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೊಡಗಿವೆ, ಅದಕ್ಕಾಗಿ ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿವೆ ಎಂದು ವರದಿಗಳಿಂದ ತಿಳಿದುಬಂದಿದೆ.
2100ರ ವೇಳೆಗೆ ಏನಾಗುತ್ತದೆ?
ಪ್ರಸಕ್ತ ವರ್ಷ ಜುಲೈನಲ್ಲಿ ಬಿಡುಗಡೆಯಾದ ವಿಶ್ವಸಂಸ್ಥೆ ವರದಿಯೊಂದು 2100ರ ಇಸವಿ ವರೆಗೆ ಜನಸಂಖ್ಯೆಯನ್ನು ಅಂದಾಜಿಸಲಾಗಿದೆ. 1990ಕ್ಕೆ ಹೋಲಿಸಿದ್ರೆ ಮಹಿಳೆಯರು ಈಗ ಕಡಿಮೆ ಮಕ್ಕಳನ್ನು ಹೊಂದುತ್ತಿದ್ದಾರೆ. 2080ರ ವೇಳೆಗೆ ಭೂಮಿಯ ಮೇಲಿನ ಜನಸಂಖ್ಯೆಯು 10 ಶತಕೋಟಿ ದಾಟುತ್ತದೆ. ನಂತರ ಕಡಿಮೆಯಾಗಲು ಶುರುವಾಗುತ್ತದೆ. ಇದರೊಂದಿಗೆ ವಾಷಿಂಗ್ಟನ್ ವಿಶ್ವವಿದ್ಯಾಲಯ ಅಧ್ಯಯನ ವರದಿಯೊಂದನ್ನ ಬಿಡುಗಡೆ ಮಾಡಿದ್ದು, ಜನಸಂಖ್ಯೆಯ ಬಗ್ಗೆ ಉಲ್ಲೇಖ ಮಾಡಿದೆ. 1950 ರಿಂದ 2021ರವರೆಗಿನ 204 ದೇಶಗಳ ಫಲವತ್ತತೆ ದರ ವಿಶ್ಲೇಷಿಸಿದೆ. 2080ರ ವೇಳೆಗೆ ಜನಸಂಖ್ಯೆಯು ಹೆಚ್ಚಳವಾಗಿ ಮತ್ತು 2100ರ ವೇಳೆಗೆ ಮತ್ತೆ ಇಳಿಕೆಯಾಗುವತ್ತ ಸಾಗುತ್ತದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಏನಾಗುತ್ತದೆ?
ಸದ್ಯ ವೃದ್ಧರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿಲ್ಲ ಎಂಬುದನ್ನು ವರದಿಗಳು ತೋರಿಸಿವೆ. ʻಇಂಡಿಯಾ ಏಜಿಂಗ್ ರಿಪೋರ್ಟ್-2023ʼರ ಪ್ರಕಾರ, ದೇಶದಲ್ಲಿ 2025ರ ವೇಳೆಗೆ 60 ವರ್ಷ ಮೇಲ್ಪಟ್ಟ ವದ್ಧರ ಸಂಖ್ಯೆಯು 20.8% ರಷ್ಟು ಇರಲಿದೆ. 2050ರ ವೇಳೆಗೆ ಭಾರತದಲ್ಲಿ ವೃದ್ಧರ ಸಂಖ್ಯೆ 34.7 ಕೋಟಿ ಎಂದು ಅಂದಾಜಿಸಲಾಗಿದೆ, 2100ರ ವೇಳೆ ಈ ಸಂಖ್ಯೆ ಭಾರತದ ಶೇ.36ಕ್ಕೆ ತಲುಪುತ್ತದೆ. ಅದೇ ಸಮಯದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಜನರ ಜನಸಂಖ್ಯೆಯು ಹೆಚ್ಚಾಗಬಹುದು ಎಂದು ವರದಿ ಹೇಳಿದೆ. ಒಟ್ಟಾರೆ ಜನಸಂಖ್ಯೆ ದೃಷ್ಟಿಯಿಂದ ನೋಡುವುದಾದ್ರೆ 2050ರ ವರೆಗೆ ಭಾರತದ ಜನಸಂಖ್ಯೆಯು 18% ರಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರ ಪಾಲು ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ.
ಇತ್ತೀಚೆಗೆ ಪ್ರಪಂಚದ ಬಹುತೇಕ ದೇಶಗಳಂತೆ ಭಾರತದಲ್ಲಿಯೂ ಫಲವತ್ತತೆಯ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನಲಾಗಿದೆ. 1950ರ ದಶಕದಲ್ಲಿ ಭಾರತದಲ್ಲಿ ಪ್ರತಿ ಮಹಿಳೆ ಸರಾಸರಿ 6 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಎನ್‌ಟಿಐ ಆಯೋಗ ವರದಿ ಹೇಳುತ್ತದೆ. 2000ನೇ ಇಸವಿ ಹೊತ್ತಿಗೆ ಈ ಫಲವತ್ತತೆಯ ದರವು 3.4ಕ್ಕೆ ಇಳಿಕೆಯಾಗಿದೆ. 2019-21ರ ನಡುವೆ ನಡೆದ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಭಾರತದಲ್ಲಿ ಫಲವತ್ತತೆಯ ಪ್ರಮಾಣ ಶೇ.2ಕ್ಕೆ ಇಳಿದಿದೆ. ಅಂದ್ರೆ ಈಗ ಭಾರತೀಯ ಮಹಿಳೆಯರು ಸರಾಸರಿ 2 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. 2050ರ ವೇಳೆಗೆ ಇದರ ಸರಾಸರಿಯು 1.7ಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ.
ಯಾವ ಯಾವ ದೇಶಗಳಲ್ಲಿ ಏನಾಗುತ್ತಿದೆ?
ಬ್ರಿಟಿಷ್ ಪತ್ರಿಕೆ ʻದಿ ಗಾರ್ಡಿಯನ್ʼ ವರದಿಯ ಪ್ರಕಾರ, ತೈವಾನ್‌ನಲ್ಲಿ ಫಲವತ್ತತೆ ಪ್ರಮಾಣ 0.85, ಜಪಾನ್‌ನಲ್ಲಿ 1.21, ಗ್ರೀಸ್‌ನಲ್ಲಿ 1.26, ದಕ್ಷಿಣ ಕೊರಿಯಾದಲ್ಲಿ 0.72 ತಲುಪಿದೆ. ಇದರಿಂದ 2100 ವೇಳೆಗೆ ಇಲ್ಲಿಇನ ಜನಸಂಖ್ಯೆಯು ಅರ್ಧದಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಇಲ್ಲಿನ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡದೇ ಇದ್ದದ್ದು, ಹೆಚ್ಚಿನ ಮಹಿಳೆಯರು ಕಡಿಮೆ ಮಕ್ಕಳನ್ನು ಹೊಂದಲು ಬಯಸುತ್ತಿರುವುದು, ಕುಟುಂಬ ಯೋಜನೆಗಿಂತ ವೃತ್ತಿಯ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದು ಹಾಗೂ ಗರ್ಭನಿರೋಧಕ ಮಾತ್ರೆ ಮತ್ತು ಕಾಂಡೋಮ್ ಬಳಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ವರದಿ ಉಲ್ಲೇಖಿಸಿದೆ.
ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿ ಯಾವ ರೀತಿ ಏರಿಳಿತವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.