ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಇಂದು ಯಶ್ ಹಾಗೂ ಅವರ ತಾಯಿ ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಈ ವೇಳೆ ಐಟಿ ಅಧಿಕಾರಿಗಳಿಗೆ ತಮ್ಮ ಬಳಿ ಇರುವ ಆಸ್ತಿ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಯಶ್ ಐಟಿ ಅಧಿಕಾರಿಗಳಿಗೆ ನೀಡಿರುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
ಸಾಮಾನ್ಯ ವ್ಯಕ್ತಿಯಿಂದ ಸ್ಟಾರ್ ನಟರಾಗಿ ಬೆಳೆದ ಯಶ್, ತಮ್ಮ ಪ್ರತಿ ಸಿನಿಮಾದ ಸಂಭಾವನೆ ಸೇರಿದಂತೆ, ಆದಾಯ ಮೂಲಗಳಿಂದ ಗಳಿಸಿದ ಆಸ್ತಿಯ ಸಂರ್ಪೂಣ ಮಾಹಿತಿಯನ್ನು ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ. ಇಂದು ಐಟಿ ಅಧಿಕಾರಿಗಳ ಮುಂದೆ ನಡೆದ ಸತತ 3 ಗಂಟೆಗಳ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದು, ಯಾವುದೇ ಸಮಯದಲ್ಲಿ ಕರೆದರೂ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
Advertisement
Advertisement
ಆಸ್ತಿ ಎಷ್ಟಿದೆ?
ನಟ ಯಶ್ ಬೆಂಗಳೂರಿನ ಗಾಲ್ಫ್ ಕ್ಲಬ್ ಬಳಿ 20 ಕೋಟಿ ರೂ. ಮೌಲ್ಯದ ಪ್ರೆಸ್ಟೀಜ್ ಪೆಂಟೌಸ್ ಹೊಂದಿದ್ದಾರೆ. ಇದನ್ನು ಯಶ್ ಖರೀದಿ ಮಾಡಲು ಪ್ರಮುಖ ಕಾರಣ ನಟ ಅಂಬರೀಶ್ ಅವರ ಮೇಲಿನ ಪ್ರೀತಿ. ಅಂಬರೀಶ್ ಅವರು ಇದೇ ಗಾಲ್ಫ್ ಕ್ಲಬ್‍ನ ಆಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು. ಅಂಬರೀಶ್ ಅವರೊಂದಿಗೆ ಇರಬೇಕು ಎನ್ನುವ ಕಾರಣದಿಂದ ಯಶ್ ಈ ಪೆಂಟೌಸನ್ನು ಖರೀದಿ ಮಾಡಿದ್ದಾರೆ. ಅಲ್ಲದೇ ಹುಟ್ಟೂರಿನ ಮೇಲೆ ಆಪಾರ ಪ್ರೀತಿಯನ್ನು ಹೊಂದಿರುವ ಯಶ್ ಮೈಸೂರಲ್ಲೂ ಒಂದು ಪೆಂಟೌಸ್ ಖರೀದಿ ಮಾಡಿದ್ದಾರೆ. ಮೈಸೂರಿನ ಬೋಗಾದಿ ಬಳಿ ವಿಲಾಸಿ ಫ್ಲಾಟ್ ಹಾಗೂ ರಿಂಗ್ ರಸ್ತೆಯಲ್ಲಿ 1 ಎಕರೆ ಜಮೀನು ಯಶ್ ಹೆಸರಿನಲ್ಲಿದೆ.
Advertisement
Advertisement
ಸೂಪರ್ ಸ್ಟಾರ್ ರಜನಿಕಾಂತ್ ಅವರ ಪ್ರೇರಣೆ ಹಾಗೂ ಅಮ್ಮನ ಆಸೆಯಂತೆ ಯಶ್ ಮೈಸೂರಿನಲ್ಲಿ 78 ಎಕ್ರೆ ಜಮೀನು ಖರೀದಿ ಮಾಡಲು ಮುಂದಾಗಿದ್ದು, ಸದ್ಯಕ್ಕೆ ಈ ಜಮೀನು ಖರೀದಿ ಮಾಡಲು ಟೋಕನ್ ಅಡ್ವಾನ್ಸ್ ಮಾತ್ರ ನೀಡಿದ್ದಾರೆ. ಈ ಆಸ್ತಿ ಇನ್ನು ಕೂಡ ನೋಂದಣಿ ಆಗಬೇಕಿದೆ. ಈ ಆಸ್ತಿ ಖರೀದಿ ಮಾಡಲು ಒಂದು ವಿಶೇಷವಾದ ಪ್ರೇರಣೆಯಿದೆ. ಒಬ್ಬ ಮಾದರಿ ರೈತನಾಗಬೇಕು ಎನ್ನುವ ಕನಸನ್ನು ಯಶ್ ಕಾಣುತ್ತಿದ್ದು, ಈ ಕನಸು ನನಸು ಮಾಡಲು ಈ ಜಾಗವನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಕಷ್ಟ ಕಾಲದಲ್ಲಿ ಸಹಾಯವಾಗಲು ಊರಿನ ಹೊರಭಾಗದಲ್ಲಿ ವ್ಯವಸಾಯದ ಭೂಮಿ ಪಡೆಯುವಂತೆ ರಜಿನಿಕಾಂತ್ ಯಶ್ ಅವರಿಗೆ ಸಲಹೆ ನೀಡಿದ್ದರಂತೆ. ಈ ಕಾರಣಕ್ಕಾಗಿ ತನ್ನೂರಿನ ನೆಲದಲ್ಲಿ ವ್ಯವಸಾಯ ಮಾಡಲು ಯಶ್ ಜಾಗ ಖರೀದಿಗೆ ಮುಂಗಡ ಹಣವನ್ನು ಪಾವತಿಸಿದ್ದಾರೆ.
ಮೈಸೂರಿನ ಬಳಿಕ ಹಾಸನದ ಮೇಲೆ ಅತಿ ಹೆಚ್ಚು ಪ್ರೀತಿಯನ್ನು ಹೊಂದಿರುವ ಯಶ್ ಅಲ್ಲಿಯೂ ಒಂದು ಮನೆಯನ್ನು ಹೊಂದಿದ್ದಾರೆ. ಅಲ್ಲದೇ ಕೋಲಾರ ಬಳಿ 10 ನಿವೇಶನಗಳನ್ನು ಹೊಂದಿದ್ದು. ಇದರಲ್ಲಿ ಕೆಲವು ಯಶ್ ಅವರ ತಾಯಿಯ ಹೆಸರಿನಲ್ಲಿದೆ. ಈ ಕಾರಣದಿಂದಲೇ ಐಟಿ ಅಧಿಕಾರಿಗಳು ಯಶ್ ತಾಯಿಯನ್ನು ವಿಚಾರಣೆಗೆ ಕರೆದಿದ್ದರು. ಇನ್ನು ಬೆಂಗಳೂರು ಸುತ್ತಮುತ್ತ ಅಂದರೆ ಬನ್ನೇರುಘಟ್ಟ ಸಮೀಪ 3 ಸೈಟ್, ಜೆ.ಪಿ.ನಗರದಲ್ಲಿ 1 ಸೈಟ್, ಹೊಸಕೆರೆ ಹಳ್ಳಿಯಲ್ಲಿ 1 ಮನೆ ಹಾಗೂ ಕತ್ರಿಗುಪ್ಪೆಯಲ್ಲಿ ತಂಗಿಗಾಗಿ ಒಂದು ಮನೆಯನ್ನು ಯಶ್ ಖರೀದಿ ಮಾಡಿದ್ದಾರೆ.
ಎಷ್ಟು ದಾನ ಮಾಡಿದ್ದಾರೆ?
ಪತ್ನಿ ರಾಧಿಕಾ ಹೆಸರಿಲ್ಲೂ ಕೆಲ ನಿವೇಶನಗಳನ್ನು ಹೊಂದಿದ್ದು, ಬೆಂಗಳೂರು-ಮೈಸೂರು ರಸ್ತೆಯಲ್ಲಿ ಒಂದು ನಿವೇಶನ ಹಾಗೂ ಬಿಡದಿ ಬಳಿ ಒಂದು ನಿವೇಶನ ಇದೆ. ಐಟಿ ಅಧಿಕಾರಿಗಳು ಇಷ್ಟೆಲ್ಲಾ ಆಸ್ತಿಯನ್ನು ಹೊಂದಿರುವ ಯಶ್ ಧಾನಧರ್ಮ ಮಾಡುವುದರಲ್ಲೂ ಎತ್ತಿದ ಕೈ ಆಗಿದ್ದು `ಯಶೋಮಾರ್ಗ’ ಹೆಸರಿನ ಸ್ವಯಂ ಸೇವಾ ಸಂಸ್ಥೆಯ ಮೂಲಕ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಇದರಲ್ಲಿ ಕೆರೆ ಹೂಳು ತೆಗೆದಿದ್ದು ಸೇರಿದಂತೆ, ಎಷ್ಟೇ ಮಂದಿಗೆ ದಾನಧರ್ಮ ಮಾಡಿರುವ ಮಾಹಿತಿಯನ್ನು ನೀಡಿದ್ದಾರೆ. ಇದು ಕೂಡ ಐಟಿ ಅಧಿಕಾರಿಗಳಿಗೆ ಪ್ರಮುಖ ಮಾಹಿತಿಯಾಗಿದ್ದು, ಇದುವರೆಗೆ 5 ಕೋಟಿ ರೂ. ಧಾನಧರ್ಮ ಮಾಡಿದ್ದಾರೆ.
ಕಾರು ಎಷ್ಟಿದೆ?
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಯಶ್ ಬಳಿ 3 ಬೆಂಜ್, 1 ಆಡಿ, 1 ಪಜೇರೋ, 1 ಫಾರ್ಚೂನರ್ ಐಷಾರಾಮಿ ಕಾರುಗಳಿವೆ. ಇವುಗಳ ಖರೀದಿ ಮಾಡಿರುವ ಮಾಹಿತಿ ಸೇರಿದಂತೆ ತೆರಿಗೆ ಪಾವತಿಸಿರುವ ದಾಖಲೆಗಳನ್ನು ಯಶ್ ಐಟಿ ಅಧಿಕಾರಿಗಳ ಮುಂದಿಟ್ಟಿದ್ದಾರೆ. ಐಟಿ ವಿಚಾರಣೆ ವೇಳೆ ತಾವು ದುಡಿದ ಪೈಸಾ, ಪೈಸಾ ರೂಪಾಯಿಗೂ ಮಾಹಿತಿ ಕೊಟ್ಟಿರುವ ಯಶ್ ಅವರು 15 ಬ್ಯಾಂಕುಗಳಲ್ಲಿ 16 ಕೋಟಿ ರೂ. ಸಾಲ ಮಾಡಿದ್ದಾರೆ. ಅಲ್ಲದೇ ಯಾವುದೇ ಸಮಯದಲ್ಲಿ ಕರೆದರೂ ನಾನು ವಿಚಾರಣೆಗೆ ಹಾಜರಾಗುವುದಾಗಿ ಐಟಿ ಅಧಿಕಾರಿಗಳಿಗೆ ಹೇಳಿದ್ದಾರೆ. ಇದನ್ನು ಓದಿ: 40 ಕೋಟಿ ರೂ. ಸಾಲ : ಪ್ರಶ್ನೆಗೆ ಯಶ್ ಖಡಕ್ ಪ್ರತಿಕ್ರಿಯೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv