ಆಂಧ್ರದಲ್ಲಿ ನಾಯ್ಡುಗೆ ಹೀನಾಯ ಸೋಲು -ಜಗನ್ ಗೆಲುವಿನ ಹಿಂದಿದೆ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ!

Public TV
4 Min Read
Prashant Kishor Jagan

ಹೈದರಾಬಾದ್: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಗೆ ಯಶಸ್ಸು ಕಂಡಿದ್ದು, ವೈಎಸ್‍ಆರ್ ಕಾಂಗ್ರೆಸ್ ಪಕ್ಷವು ಭರ್ಜರಿ ಗೆಲುವು ಸಾಧಿಸಿದೆ.

ವೈ.ಎಸ್. ಜಗನ್‍ಮೋಹನ್ ರೆಡ್ಡಿ ಅವರು ಮಾರ್ಚ್ 2011ರಲ್ಲಿ ವೈಎಸ್‍ಆರ್ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ಆದರೆ ಕಳೆದ ಎಂಟು ವರ್ಷಗಳಿಂದ ಎಷ್ಟೇ ಪರಿಶ್ರಮ ಪಟ್ಟಿದ್ದರೂ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಪ್ರಶಾಂತ್ ಕಿಶೋರ್ ಹಾಗೂ ಅವರ ಭಾರತೀಯ ರಾಜಕೀಯ ಕಾರ್ಯ ಸಮಿತಿ (ಐಪಿಸಿ) ತಂಡದ ತಂತ್ರಗಾರಿಕೆಯಿಂದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಜಯಶಾಲಿಯಾಗಿದ್ದಾರೆ.

Jagan B

ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಚಂದ್ರಬಾಬು ನಾಯ್ಡು ಅವರು ತಾಂತ್ರಿಕ ಪರಿಣಿತರು. ಅದರಿಂದಲೇ ಮತದಾರರನ್ನು ತಮ್ಮತ್ತ ಸೆಳೆಯುವ ಕಾರ್ಯತಂತ್ರವನ್ನು ರೂಪಿಸುವಲ್ಲಿ ನಿಸ್ಸೀಮರು. ಈ ಕಾರ್ಯತಂತ್ರಕ್ಕೆ ತಿರುಗೇಟು ನೀಡಲು ವೈ.ಎಸ್.ಜಗನ್ ಅವರು ಐ-ಪ್ಯಾಕ್ ಸಂಸ್ಥೆಯ ಮುಖ್ಯಸ್ಥ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಆರಿಸಿಕೊಂಡಿದ್ದರು.

ವೈ.ಎಸ್.ಜಗನ್‍ಮೋಹನ್ ಅವರಿಗೆ ವಿಶೇಷ ಸಲಹೆಗಾರರಾಗಿ ಪ್ರಶಾಂತ್ ಕಿಶೋರ್ ಮೇ 2017 ರಲ್ಲಿ ನೇಮಕಗೊಂಡರು. ಈ ಮೂಲಕ ಚಂದ್ರಬಾಬು ನಾಯ್ಡು ಅವರ ವಿರುದ್ಧ ರಣತಂತ್ರ ರೂಪಿಸಲು ಆರಂಭಿಸಿದರು. ಚಂದ್ರಬಾಬು ನಾಯ್ಡು ಅವರನ್ನು ಸೋಲಿಸಲು ರೂಪಿಸಿದ ಹಲವು ಕಾರ್ಯತಂತ್ರಗಳ ಪೈಕಿ ವಿಶೇಷ ವರ್ಗಗಳ ಸ್ಥಾನಮಾನ (ಎಸ್‍ಸಿಎಸ್) ಕೂಡ ಒಂದಾಗಿತ್ತು. 2017 ನವೆಂಬರ್ 6ರಂದು ಆರಂಭವಾದ ‘ಪ್ರಜಾ ಸಂಕಲ್ಪ ಯಾತ್ರಾ’ ಮೂಲಕ ಜಗನ್‍ಮೋಹನ್ ಅವರು ಎಸ್‍ಸಿಎಸ್ ವಿವಾದವನ್ನು ಎತ್ತಿದರು. ಈ ವಿಚಾರವಾಗಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ವಾಗ್ದಾಳಿ ನಡೆಸಿದರು. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಎಸ್‍ಸಿಎಸ್ ವಿಚಾರವಾಗಿ ಚಂದ್ರಬಾಬು ನಾಯ್ಡು ಅವರು ಮೃದು ಧೋರಣೆ ತೋರಿದರು. ಇದರಿಂದಾಗಿ ಬಿಜೆಪಿ ಕೂಡ ಎಸ್‍ಸಿಎಸ್ ಬೇಡಿಕೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆರೋಪಿಸಿದ್ದರು.

Jagan A

ಜಗನ್‍ಮೋಹನ್ ರೆಡ್ಡಿ ಅವರು, ಆಂಧ್ರ ಪ್ರದೇಶದಾದ್ಯಂತ 3,641 ಕಿ.ಮೀ ಪಾದಯಾತ್ರೆ ನಡೆಸಿದ್ದರು. ಪ್ರತೀ ಹಳ್ಳಿಗೂ ಭೇಟಿ ನೀಡಿ ಗ್ರಾಮೀಣ ಭಾಗದ ಜನರ ಕಷ್ಟಗಳನ್ನು ಆಲಿಸಿದ್ದರು. ಜಗನ್ ಅವರು ತಮ್ಮ 14 ತಿಂಗಳ ಸುದೀರ್ಘ ಪಾದಯಾತ್ರೆಯಲ್ಲಿ ಸುಮಾರು 2 ಕೋಟಿ ಜನರನ್ನು ಭೇಟಿ ಮಾಡಿದ್ದರು. ಇದು ವೈಎಸ್‍ಆರ್ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸಲು ನೆರವಾಯಿತು. ಅಷ್ಟೇ ಅಲ್ಲದೆ ಲಕ್ಷಾಂತರ ಜನರು ವೈಎಸ್‍ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಮೂಲ ಜಗನ್‍ಮೋಹನ್ ರೆಡ್ಡಿ ಜನಪ್ರಿಯತೆ ಅರಿತ ಟಿಡಿಪಿ ನಾಯಕರು ರಾಜೀನಾಮೆ ನೀಡಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

Chandrababu naidu

ಜಗನ್‍ಮೊಹನ್ ರೆಡ್ಡಿ ಅವರು ಪ್ರಸ್ತಾಪಿಸಿದ ‘ನವರತ್ನ ಯೋಜನೆ’ ಮತದಾರರನ್ನು ಓಲೈಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಆರೋಗ್ಯ, ಶಿಕ್ಷಣ, ರೈತರ ಸಮಸ್ಯೆಗಳು, ಮಹಿಳಾ ಪರ ಯೋಜನೆಗಳು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತಂತೆ ತಮ್ಮ ಯೋಜನೆಗಳನ್ನು ರೂಪಿಸಿದ್ದರು.

ಜಗನ್ ಕ್ಲಿಕ್:
ವಿಧಾನಸಭಾ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಸಿದ್ಧಪಡಿಸಿದ ರಾವಾಲಿ ಜಗನ್ (ಜಗನ್ ಬರಬೇಕು), ಕಾವಾಲಿ ಜಗನ್ (ಜಗನ್ ಬೇಕು) ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯೂಟ್ಯೂಬ್‍ನಲ್ಲಿ ಈ ಹಾಡು ಬರೊಬ್ಬರಿ 2.2 ಕೋಟಿಗೂ ಅಧಿಕ ವೀಕ್ಷಣೆಯಾಗಿತ್ತು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣವನ್ನು ಜಗನ್‍ಮೋಹನ್ ಅವರು ಸಮರ್ಪಕವಾಗಿ ಬಳಸಿಕೊಂಡರು. ಈ ಮೂಲಕ ಯುವಕರ ಗಮನವನ್ನು ಸೆಳೆದು ಭರ್ಜರಿ ಗೆಲುವು ಸಾಧಿಸಿದರು. ಜಗನ್‍ಮೋಹನ್ ಅವರ ಈ ಎಲ್ಲ ಯಶಸ್ವಿ ಪ್ರಚಾರದ ಹಿಂದೆ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ ಅಡಗಿತ್ತು.

modi prashanth kishore

ಪ್ರಶಾಂತ್ ಕಿಶೋರ್ ಯಾರು?:
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ದರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಶೀಲಾ ದೀಕ್ಷಿತ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

prashanth kishore 2

2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು. 2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದ ಕಾಂಗ್ರೆಸ್‍ಗೆ ಈ ಗೆಲುವು ಸಮಾಧಾನ ತಂದುಕೊಟ್ಟಿತ್ತು.

prashanth kishore 9

ಫಲಿತಾಂಶ ಏನು?
ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಪರ ಶೇ. 49.9ರಷ್ಟು ಮತದಾನವಾಗಿದ್ದು, 175 ವಿಧಾನಸಭಾ ಕ್ಷೇತ್ರಗಳ ಪೈಕಿ 151 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಉಳಿದಂತೆ ತೆಲುಗು ದೇಶಂ ಪಕ್ಷವು 23 ಹಾಗೂ ಜನಸೇನಾ ಪಾರ್ಟಿ 1 ಕ್ಷೇತ್ರದಲ್ಲಿ ಜಯ ಗಳಿಸಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಶೇ 1.17 ಹಾಗೂ ಬಿಜೆಪಿ ಶೇ. 0.84 ಮತ ಪಡೆದಿದ್ದರೂ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *