ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮ ವಲಸಿಗರು ಹೆಚ್ಚಾಗಿದ್ದು, ಅವರನ್ನು ಬಲೆಗೆ ಬೀಳಿಸಲು ಸಿಟಿ ಸ್ಪೆಷಲ್ ಬ್ರ್ಯಾಂಚ್ ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದು ಹೇಗೆ ಎನ್ನುವ ರೋಚಕ ಸ್ಟೋರಿಯೊಂದು ಬಹಿರಂಗಗೊಂಡಿದೆ.
ಅಕ್ರಮವಾಗಿ ವಲಸೆ ಬಂದ ಬಾಂಗ್ಲಾದೇಶಿಯರನ್ನು ಪತ್ತೆಹಚ್ಚಲು ಸಿಟಿ ಸ್ಪೆಷಲ್ ಬ್ರ್ಯಾಂಚ್ ಪೊಲೀಸರು ಉಪಯೋಗಿಸಿದ ಮಾಸ್ಟರ್ ಪ್ಲಾನ್ ರಾಮ ಬಾಣವಾಗಿದೆ. ಹತ್ತಾರು ದಿನಗಳ ಕಾಲ ಚರ್ಚೆ ಮಾಡಿ ಚಕ್ರವ್ಯೂಹ ರಚಿಸಿದ್ದ ಸಿಟಿ ಸ್ಪೆಷಲ್ ಬ್ರ್ಯಾಂಚ್ ಪೊಲೀಸರು, ಬೆಂಗಳೂರಿಗೆ ಅಕ್ರಮವಾಗಿ ವಲಸೆ ಬಂದಿದ್ದ ಬಾಂಗ್ಲಾದೇಶಿಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಂಗ್ಲಾದವರನ್ನ ಪತ್ತೆ ಮಾಡಲು ಬಿಬಿಎಂಪಿ ಅಧಿಕಾರಿಗಳ ವೇಷದಲ್ಲಿ ಪೊಲೀಸರು ಹೋಗಿದ್ದರು. ಪಾಲಿಕೆ ಕಡೆಯಿಂದ ನಿಮಗೆ ಮನೆ, ಸೈಟ್, ವಿದ್ಯುತ್ ವ್ಯವಸ್ಥೆ ಮಾಡಿಕೊಡೊದಾಗಿ ಬಾಂಗ್ಲಾದವರಿಗೆ ಅಮಿಷವೊಡ್ಡಿ ಸತ್ಯ ಹೊರ ತಂದಿದ್ದಾರೆ.
ಪೊಲೀಸರು ಅಂಗೈಯಲ್ಲಿ ಚಂದ್ರನ ತೋರಿಸಿದ್ದೆ ತಡ ಅಕ್ರಮ ವಲಸಿಗರು ಪಟ ಪಟ ಅಂತ ತಮ್ಮ ಜಾತಕ ಬಿಚ್ಚಿಟ್ಟಿದ್ದಾರೆ. ಸತತ ಹತ್ತು ದಿನಗಳ ಕಾಲ ಬಿಬಿಎಂಪಿ ಅಧಿಕಾರಿಗಳ ಹೆಸರಲ್ಲೇ ಕಾರ್ಯಚರಣೆ ನಡೆಸಿ, ಅಕ್ರಮ ಬಾಂಗ್ಲಾ ವಲಸಿಗರ ಹಾಟ್ ಸ್ಪಾಟ್‍ಗಳಾದ ಮಾರತ್ತಹಳ್ಳಿ, ರಾಮಮೂರ್ತಿ ನಗರದ ನೆಲೆಗಳ ವಿವರ ಪಡೆದು, ಸಿಸಿಬಿ ಕೈಗೆ ಸ್ಪೆಷಲ್ ಬ್ರ್ಯಾಂಚ್ ಪೊಲೀಸರು ಕೊಟ್ಟಿದ್ದರು. ಸಿಟಿ ಸ್ಪೆಷಲ್ ಬ್ರ್ಯಾಂಚ್ ಕೊಟ್ಟ ಮಾಹಿತಿ ಮೇರೆಗೆ ಅಕ್ರಮವಾಗಿ ನೆಲೆಸಿದ್ದ 60 ಮಂದಿಯನ್ನ ಸಿಸಿಬಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.