ಜನರ ಸಮಸ್ಯೆ ಅರ್ಥವಾಗೋಕೆ ಇನ್ನೆಷ್ಟು ತಲೆಮಾರಿನ ಅಧಿಕಾರ ಬೇಕು: ಸಿಎಂಗೆ ಸಿಟಿ ರವಿ ಪ್ರಶ್ನೆ

Public TV
2 Min Read
c.t ravi

ಮಡಿಕೇರಿ: 2 ತಲೆಮಾರುಗಳು ಅಧಿಕಾರ ನಡೆಸಿದ್ದರೂ ಸಿಎಂ ಅವರಿಗೆ ರಾಜ್ಯದ ಸಮಸ್ಯೆಗಳು ಇನ್ನೂ ಅರ್ಥವಾಗದಿರುವುದು ರಾಜ್ಯದ ಜನತೆಯ ದುರಾದೃಷ್ಟ ಎಂದು ಗ್ರಾಮ ವಾಸ್ತವ್ಯವನ್ನು ಶಾಸಕ ಸಿ.ಟಿ ರವಿ ಟೀಕಿಸಿದ್ದಾರೆ.

ಮಡಿಕೇರಿ ನಗರದ ಬಾಲ ಭವನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಕಾರ್ಯಕ್ರಮಕ್ಕೆ ಸಿ.ಟಿ ರವಿ ಆಗಮಿಸಿದ್ದರು. ಅಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿದ ಅವರು, ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಅಧಿಕಾರ ಸಿಎಂ ಅವರಿಗೆ ಅನಿರೀಕ್ಷಿತವಾಗಿ ಸಿಕ್ಕಿದೆ. ಮಹತ್ಮಾ ಗಾಂಧಿಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ದೇಶಸುತ್ತಿ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಾಯಕತ್ವ ವಹಿಸಿಕೊಳ್ಳಲಿಲ್ಲವೇ? ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಇವರಿಗೆ ಇನ್ನೂ ಎಷ್ಟು ತಲೆಮಾರುಗಳು ಬೇಕು ಎಂದು ಪ್ರಶ್ನಿಸಿದರು.

CM HDK 2

ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ಕ್ಷೇತ್ರದಲ್ಲಿದ್ದವರು. ಅವರು ಒಂದು ವೇಳೆ ಗ್ರಾಮ ವಾಸ್ತವ್ಯ ಮಾಡುವುದರಲ್ಲಿ ಅರ್ಥವಿದೆ. ಆದರೆ ದೇವೇಗೌಡರು ಒಮ್ಮೆ ಪ್ರಧಾನಿ ಹಾಗೂ ಸಿಎಂ ಆಗಿದ್ದಾರೆ. ಸಿಎಂ ಅವರು ಈಗ ಎರಡನೇ ಬಾರಿ ಆ ಸ್ಥಾನವನ್ನು ಅಲಂಕರಿಸಿದ್ದಾರೆ. ಎರಡು ತಲೆಮಾರು ಆಡಳಿತ ನಡೆಸಿದರು ಇನ್ನೂ ಜನರ ಸಮಸ್ಯೆ ಬಗ್ಗೆ ಅವರಿಗೆ ಅರ್ಥವಾಗಿಲ್ಲ. ಇದು ರಾಜ್ಯದ ಜನತೆಯ ದುರಾದೃಷ್ಟ ಎಂದು ಟಾಂಗ್ ಕೊಟ್ಟರು.

MND HDD HDK

ಬಿಜೆಪಿ ವಿರುದ್ಧ ಸಿಎಂ ಹಾಗೂ ಮಾಜಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಇವರಂತೆ ಮೋದಿ ಅವರೇನು ನಾಟಕ ಆಡಿದ್ದಾರೆಯೇ? ಅವರೇನೂ ಜನತೆಯ ವಿಶ್ವಾಸ ಗಳಿಸಿಲ್ಲವೇ? ಜನ ಯಾವುದನ್ನು ಪ್ರಧಾನಿ ಅವರನ್ನು ಕೇಳಬೇಕು ಎಂಬುದು ಗೊತ್ತಿದೆ. ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಇಬ್ಬರಿಗೂ ಜವಾಬ್ದಾರಿ ಇದೆ. ಸಂವಿಧಾನದ ಅಡಿಯಲ್ಲಿ ಸಿಎಂ ಆದವರಿಗೆ ಪಕ್ಷದ ತಾರತಮ್ಯ ಮಾಡುವ ಅಧಿಕಾರವನ್ನು ಕೊಟ್ಟಿಲ್ಲ. ದೇಶದ ಜನತೆ ಪ್ರಾಮಾಣಿಕ, ದೇಶಭಕ್ತಿ ನೋಡಿ ಬಿಜೆಪಿ ಬೆಂಬಲಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನಂತೆ ಜಾತಿ ರಾಜಕಾರಣ ಮಾಡಿದ್ದರೆ ಮೋದಿ ಅವರನ್ನೂ ಸೋಲಿಸುತ್ತಿದ್ದರು. ಜಾತಿ ರಾಜಕಾರಣ ಮಾಡಿದ್ದರಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದು ಎಂದು ತಿರುಗೇಟು ನೀಡಿದರು.

JDS COngress 2

ರಾಜ್ಯಾಧ್ಯಕ್ಷ ಎಂಬುದು ಅಧಿಕಾರದ ಹುದ್ದೆಯಲ್ಲ. ಅದೊಂದು ಪಕ್ಷ ಸಂಘಟಿಸುವ ಜಬಾಬ್ದಾರಿ. ಅಧಿಕಾರದ ಹುದ್ದೆಯಾಗಿದ್ದರೆ ಅದಕ್ಕೆ ಸ್ಪರ್ಧೆ ಇರುತ್ತದೆ. ಸಂಘಟನೆಗೆ ಸ್ಪರ್ಧೆಯ ಅಗತ್ಯವಿಲ್ಲ. ರಾಜ್ಯಾಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಲು ಹಲವರಿಗೆ ಯೋಗ್ಯತೆ ಇದ್ದು, ಸಮಯ ಬಂದಾಗ ಪಕ್ಷದ ನಾಯಕರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

c.t ravi 1

ಜುಲೈ 6 ರಿಂದ ದೇಶಾದ್ಯಂತ ಸದಸ್ಯತ್ವ ಅಭಿಯಾನ ಪ್ರಾರಂಭವಾಗಲಿದೆ. ಈ ಬಾರಿ ರಾಜ್ಯದಲ್ಲಿ 50 ಲಕ್ಷ ಹೊಸ ಮತಗಳ ನೊಂದಣಿ ಗುರಿ ಹೊಂದಿದ್ದೇವೆ. ದುರ್ಬಲ ಮತಗಟ್ಟೆಗಳನ್ನು ಕೇಂದ್ರೀಕರಿಸಿ ಶಕ್ತಿ ತುಂಬುವ ಹಾಗೂ ಮಡಿಕೇರಿಯಲ್ಲಿ ಶೇ. 20 ಮತಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿದ್ದೇವೆ. ನಮ್ಮ ಟಾರ್ಗೆಟ್ 18% ಇರುವ ನವ ಮತದಾರರು. ಎಲ್ಲಾ ವರ್ಗದ ಮತದಾರರ ವಿಶ್ವಾಸ ಗಳಿಸಲು ಸದಸ್ಯತ್ವ ಆಂದೋಲನ ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಫೀಲ್ಡಿಗೆ ಇಳಿಯಲಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *