ಝಗಮಗಿಸುವ ಚರ್ಚ್‌ಗಳು, ವಿದ್ಯುತ್ ದೀಪಗಳಿಂದ ಮಿನುಗುವ ಕ್ರಿಸ್‌ಮಸ್ ಟ್ರೀ (Christmas Tree), ಚರ್ಚ್‌ಗಳಿಂದ ಪ್ರಾರ್ಥನೆ, ಸಾಂತಾನಿಂದ ಮಕ್ಕಳಿಗೆ ಸಪ್ರೈಸ್ ಉಡುಗೊರೆಗಳು, ಕೈಯಲ್ಲಿ ವೈನ್ ಗ್ಲಾಸ್, ಬಗೆಬಗೆಯ ಕೇಕ್‌ಗಳ ಸ್ವಾದ… ಈ ಎಲ್ಲಾ ವಿಶೇಷತೆಗಳ ಹೂರಣ. ಭಕ್ತಿ ಮತ್ತು ಸಂಭ್ರಮಾಚರಣೆ. ಪ್ರೀತಿ, ಶಾಂತಿ, ಸೌಹಾರ್ದತೆ ಸಾರಿದ ಏಸುಕ್ರಿಸ್ತನ ಸ್ಮರಣೆ. ಎಲ್ಲವೂ ಮೇಳೈಸಿದ ಹಬ್ಬವೇ ಕ್ರಿಸ್‌ಮಸ್. ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬ ಕ್ರಿಸ್‌ಮಸ್ (Christmas Festival) ಮತ್ತೆ ಬಂದಿದೆ.
ಪ್ರತಿ ವರ್ಷ ಡಿಸೆಂಬರ್ 25 ರಂದು ಆಚರಿಸುವ ಕ್ರಿಸ್‌ಮಸ್ ಎಂದಾಕ್ಷಣ ನಮಗೆ ನೆನಪಾಗುವುದು ಚರ್ಚ್, ಏಸುಕ್ರಿಸ್ತ, ಕ್ರಿಸ್‌ಮಸ್ ಟ್ರೀ, ಕೇಕ್ ಮತ್ತು ಆಚರಣೆ. ಆದರೆ, ಕ್ರಿಸ್‌ಮಸ್ ಹಬ್ಬದ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ನಿಮಗೇನಾದರೂ ತಿಳಿದಿದೆಯೇ?
ಕ್ರಿಸ್‌ಮಸ್ ಇತಿಹಾಸವೇನು?
ಕ್ರೈಸ್ತ ಧರ್ಮೀಯರ ಈ ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ. ಕ್ರಿಸ್‌ಮಸ್ ಆಚರಣೆ ಮೊದಲು ಶುರುವಾಗಿದ್ದು ರೋಮ್ ದೇಶದಲ್ಲಿ ಎಂದು ಹೇಳಲಾಗಿದೆ. ಕ್ರಿಸ್‌ಮಸ್‌ಗೆ ಮುನ್ನ ರೋಮ್‌ನಲ್ಲಿ ಡಿ.25ರ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಯಿತು. ಆಗ ರೋಮ್ ಚಕ್ರವರ್ತಿಗಳು ಸೂರ್ಯದೇವನನ್ನು ತಮ್ಮ ದೇವರಾಗಿ ಪರಿಗಣಿಸುತ್ತಿದ್ದರು. ಸೂರ್ಯ ದೇವನನ್ನೇ ಪೂಜಿಸುತ್ತಿದ್ದರು. ಕಾಲಾನಂತರ ಕ್ರಿ.ಶ.330ರ ಹೊತ್ತಿಗೆ ರೋಮ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಚಾರವು ವೇಗವಾಗಿ ಬೆಳೆಯಿತು. ಕ್ರೈಸ್ತ ಧರ್ಮದ ಅನುಯಾಯಿಗಳ ಸಂಖ್ಯೆಯೂ ಹೆಚ್ಚಿತು. ಬಳಿಕ ಕ್ರಿ.ಶ.336ರಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳು ‘ಯೇಸುಕ್ರಿಸ್ತನನ್ನು ಸೂರ್ಯದೇವನ ಅವತಾರ’ ಎಂದು ಪರಿಗಣಿಸಿದರು. ಅಂದಿನಿಂದ ಕ್ರಿಸ್‌ಮಸ್ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಸಂಪ್ರದಾಯ ಆರಂಭವಾಯಿತು. ಹೀಗಾಗಿ, ಡಿ.25 ರಂದು ಕ್ರಿಸ್‌ಮಸ್ ಹಬ್ಬ ಆಚರಿಸುವ ಪರಿಪಾಠ ಶುರುವಾಯಿತು.
ಕ್ರೈಸ್ತರಿಗೆ ಹೊಸ ವರ್ಷ
ಭಾರತೀಯರಿಗೆ ‘ಯುಗಾದಿ’ಯನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಆದರೆ ಕ್ರೈಸ್ತರಿಗೆ ಕ್ರಿಸ್‌ಮಸ್ ಹಬ್ಬವು ಹೊಸ ವರ್ಷವಾಗಿದೆ. ಈ ದಿನವನ್ನು ಕೆಟ್ಟದರ ಮೇಲೆ ಒಳಿತಿನ ವಿಜಯವೆಂದು ಪರಿಗಣಿಸುತ್ತಾರೆ. ಕ್ರಿಸ್ತ ಜನಿಸಿದ ದಿನವೆಂದು ಕ್ರೈಸ್ತರು ಡಿ.25 ರಂದು ಕ್ರಿಸ್‌ಮಸ್ ಆಚರಿಸುತ್ತಾರೆ. ಕ್ರಿಶ್ಚಿಯನ್ ಧರ್ಮದ ಜನರಿಗೆ ಇದು ಸಾಂಪ್ರದಾಯಿಕ ಹಬ್ಬ. ಪರಸ್ಪರ ಕ್ರಿಸ್‌ಮಸ್ ಕಾರ್ಡ್ ಉಡುಗೊರೆ ನೀಡುವುದು, ಚರ್ಚ್‌ಗೆ ಹೋಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುವುದು ಜೊತೆಗೆ ಮನೆಗಳನ್ನು ಕ್ರಿಸ್‌ಮಸ್ ಟ್ರೀ ಹಾಗೂ ಹೂಗಳಿಂದ ಅಲಂಕರಿಸುತ್ತಾರೆ. ಸಂಬಂಧಿಕರು, ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ವಿಶೇಷ ಆಹಾರ ಸವಿದು ಸಂಭ್ರಮಿಸುತ್ತಾರೆ.
ಆಚರಣೆ ಹೇಗೆ?
ಕ್ರಿಸ್‌ಮಸ್ ಹಬ್ಬದ ದಿನ ಪ್ರಭು ಯೇಸುವಿನ ನೆನಪಿಗಾಗಿ ಗೋಶಾಲೆಯನ್ನು ನಿರ್ಮಿಸುತ್ತಾರೆ. ಈ ಗೋಶಾಲೆಯು ಕುರುಬರೊಂದಿಗಿನ ಯೇಸುವಿನ ಬಾಲ್ಯವನ್ನು ಚಿತ್ರಿಸುತ್ತದೆ. ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುತ್ತಾರೆ. ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುತ್ತಾರೆ. ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುತ್ತಾರೆ. ಕ್ರಿಸ್ಮಸ್‌ಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವ ಮೂಲಕ ಕ್ರಿಸ್‌ಮಸ್ ಹಬ್ಬ ಆಚರಿಸುತ್ತಾರೆ.
ಗಿಫ್ಟ್ ವಿನಿಮಯ
ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್‌ಮಸ್ ಹಬ್ಬದ ವಿಶೇಷತೆಗಳಲ್ಲಿ ಒಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ನಂಬಿಕೆ. ‘ಸಾಂಟಾ ಕ್ಲಾಸ್’ ಅಂದ್ರೆ ‘ಸಂತಾ ನಿಕೋಲಾಸ್’. ಇವರು 4ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತಾ ನಿಕೋಲಾಸ್ ಪ್ರಸಿದ್ಧ. ಹೀಗಾಗಿ, ಪ್ರತಿವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.
ಕ್ರಿಸ್‌ಮಸ್ ಹಬ್ಬದ ಪ್ರಾಮುಖ್ಯತೆ
ಹಿಂದೆಲ್ಲ ಕ್ರಿಸ್‌ಮಸ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಈಗ ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಮಾರ್ಪಟ್ಟಿದೆ. ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದನು. ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಯೇಸುಕ್ರಿಸ್ತನು ತನ್ನ ಪ್ರಾಣವನ್ನು ತ್ಯಾಗ ಮಾಡಿದನು ಎಂಬ ನಂಬಿಕೆ ಕ್ರಿಸ್‌ಮಸ್ ಹಬ್ಬದ್ದು.
ಯೇಸುಕ್ರಿಸ್ತನನ್ನು ಬರಮಾಡಿಕೊಳ್ಳುವ ಪ್ರಕ್ರಿಯೆಯಾಗಿ ಮನೆಮನೆಗೂ ತೆರಳಿ ಹಾಡುಗಳನ್ನು ಹಾಡಲಾಗುತ್ತದೆ. ಕ್ರೆöÊಸ್ತ ಧರ್ಮೀಯರು ಕ್ರಿಸ್ಮಸ್‌ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾರೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.