– ಭಾನುವಾರವೂ ಕೆಲಸ ಮಾಡಿ ಎಂದು ಉದ್ಯೋಗಿಗಳಿಗೆ ಸಲಹೆ
– ಇನ್ಫೋಸಿಸ್ ನಾರಾಯಣಮೂರ್ತಿ ಬಳಿಕ ಚರ್ಚೆ ಹುಟ್ಟುಹಾಕಿದ ಸುಬ್ರಹ್ಮಣ್ಯನ್ ಹೇಳಿಕೆ
ನವದೆಹಲಿ: ಮನೆಯಲ್ಲಿದ್ದು ಎಷ್ಟು ಹೊತ್ತು ಅಂತ ಹೆಂಡತಿ ಮುಖ ನೋಡ್ತೀರಾ? ಕಚೇರಿಗೆ ಹೋಗಿ ವಾರಕ್ಕೆ 90 ಗಂಟೆ ಕೆಲಸ ಮಾಡಿ ಎಂದು ಹೇಳಿಕೆ ನೀಡುವ ಮೂಲಕ ಲಾರ್ಸೆನ್ & ಟೂಬ್ರೊ (ಎಲ್ & ಟಿ) ಅಧ್ಯಕ್ಷ ಎಸ್.ಎನ್.ಸುಬ್ರಹ್ಮಣ್ಯನ್ ವಿವಾದ ಹುಟ್ಟುಹಾಕಿದ್ದಾರೆ.
Advertisement
ದೇಶದ ಅಭಿವೃದ್ಧಿಗಾಗಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿ ಇನ್ಫೋಸಿಸ್ನ ನಾರಾಯಣಮೂರ್ತಿ ಚರ್ಚೆ ಹುಟ್ಟುಹಾಕಿದ್ದರು. ಅವರ ಬೆನ್ನಲ್ಲೇ ಸುಬ್ರಹ್ಮಣ್ಯನ್ ಈ ಹೇಳಿಕೆ ನೀಡಿದ್ದಾರೆ.
Advertisement
ಎಲ್ & ಟಿ ತನ್ನ ಉದ್ಯೋಗಿಗಳಿಗೆ ಶನಿವಾರದಂದು ಕೆಲಸ ಮಾಡಬೇಕು ಎಂದು ಏಕೆ ಆದೇಶಿಸಿದೆ? ಎಂಬ ಪ್ರಶ್ನೆಗೆ ಸುಬ್ರಹ್ಮಣ್ಯನ್ ಪ್ರತಿಕ್ರಿಯೆ ನೀಡಿದ್ದಾರೆ. ನಿಜ ಹೇಳಬೇಕೆಂದರೆ, ಭಾನುವಾರದಂದೂ ನಿಮ್ಮಿಂದ ಕೆಲಸ ಮಾಡಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಭಾನುವಾರವೂ ನೀವು ಕೆಲಸ ಮಾಡಿದರೆ ನನಗೆ ಹೆಚ್ಚು ಸಂತೋಷ. ಏಕೆಂದರೆ ನಾನು ಭಾನುವಾರವೂ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement
ರಜೆ ತೆಗೆದುಕೊಂಡು ಮನೆಯಲ್ಲಿ ಇರುವುದರಿಂದ ಉದ್ಯೋಗಿಗಳಿಗೆ ಏನು ಸಿಗುತ್ತದೆ? ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನೀವು ಎಷ್ಟು ಹೊತ್ತು ನಿಮ್ಮ ಹೆಂಡತಿ ಮುಖವನ್ನೇ ನೋಡುತ್ತಾ ಕೂರಬಹುದು? ಹೆಂಡತಿಯರು ತಮ್ಮ ಗಂಡಂದಿರನ್ನು ಎಷ್ಟು ಹೊತ್ತು ದಿಟ್ಟಿಸಿ ನೋಡಬಹುದು? ಅದಕ್ಕೆ ಬದಲು, ಕಚೇರಿಗೆ ಹೋಗಿ ಕೆಲಸ ಮಾಡಿ ಎಂದು ತಿಳಿಸಿದ್ದಾರೆ.
Advertisement
ಚೀನಾದ ಸಮರ್ಪಕ ಕೆಲಸದ ನೀತಿಯಿಂದಾಗಿ ಅಮೆರಿಕವನ್ನು ಮೀರಿಸುವಂತಾಗಿದೆ. ಚೀನಿ ಜನರು ವಾರಕ್ಕೆ 90 ಗಂಟೆಗಳು ಕೆಲಸ ಮಾಡುತ್ತಾರೆ. ಆದರೆ ಅಮೆರಿಕನ್ನರು ವಾರಕ್ಕೆ 50 ಗಂಟೆಗಳು ಮಾತ್ರ ಕೆಲಸ ಮಾಡುತ್ತಾರೆ. ಹೀಗಾಗಿ, ನಮ್ಮ ಸಂಸ್ಥೆಯ ಉದ್ಯೋಗಿಗಳಿಗೂ ಇದನ್ನೇ ಹೇಳುವುದು ಎಂದಿದ್ದಾರೆ.
ಜಗತ್ತಿನಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ, ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸುಬ್ರಹ್ಮಣ್ಯನ್ ಪುನರುಚ್ಚರಿಸಿದ್ದಾರೆ.