ಕೋಲ್ಕತ್ತಾ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರ ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲು ಮುಂದಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವ ಮತ್ತು ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶೀಘ್ರ, ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಅತ್ಯಾಚಾರ ತಡೆ ವಿಧೇಯಕಕ್ಕೆ ಪಶ್ಚಿಮ ಬಂಗಾಳ (West Bengal) ಸರ್ಕಾರ ಅನುಮೋದನೆ ನೀಡಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡಿದ್ದ ಸರ್ಕಾರ ಇದಕ್ಕಾಗಿ ಸೆ.2ರಿಂದ ವಿಶೇಷ ಅಧಿವೇಶನ ನಡೆಸಿ ಮಂಗಳವಾರ ʼ ಅತ್ಯಾಚಾರ ತಡೆʼ ಕಾಯ್ದೆಗೆ (Aparajita Bill) ಅನುಮೋದನೆ ನೀಡಿದೆ. ಹಾಗಿದ್ರೆ ‘ಅತ್ಯಾಚಾರ ತಡೆ ಬಿಲ್’ ಹಾಗೂ ಪೋಕ್ಸೊ ಕಾಯ್ದೆಗೆ (POCSO Act) ಇರುವ ವ್ಯತ್ಯಾಸವೇನು? ಅಪರಾಜಿತ ಕಾಯ್ದೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಹೇಗೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಈ ಮಸೂದೆಯು ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ. ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಅಪರಾಧಗಳಿಗೆ ಸದ್ಯ ಇರುವ ಶಿಕ್ಷೆಯ ಪ್ರಮಾಣ ಹೆಚ್ಚಳ (ಕಠಿಣ) ಮಾಡುವುದು ಹಾಗೂ ವೇಗವಾಗಿ ವಿಚಾರಣೆ ನಡೆಸಿ ಶಿಕ್ಷೆ ಒಳಡಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಸದ್ಯ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು, ಸೆಪ್ಟೆಂಬರ್ 5 ರಂದು ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗಲಿದೆ. ಆ ದಿನವೇ ರಾಜ್ಯಪಾಲರು ಅಂಕಿತ ಹಾಕಿ ವಿಧೇಯಕ ಜಾರಿಗೆ ಬರುವ ಸಾಧ್ಯತೆ ಇದೆ.
Advertisement
Advertisement
ಬಂಗಾಳ ಅತ್ಯಾಚಾರ ತಡೆ ಕಾಯ್ದೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಕನಿಷ್ಟ ಶಿಕ್ಷೆಯನ್ನು 3 ವರ್ಷಗಳಿಂದ 7 ವರ್ಷಗಳಿಗೆ ಹೆಚ್ಚಿಸಲಾಗಿದೆ. ಹೊಸ ಕಾಯ್ದೆಯ ಪ್ರಕಾರ, ಲೈಂಗಿಕ ದೌರ್ಜನ್ಯದ ಶಿಕ್ಷೆ ಕನಿಷ್ಟ ಏಳು ವರ್ಷಗಳಾಗಿದ್ದು, ದಂಡದೊಂದಿಗೆ 10 ವರ್ಷಗಳವರೆಗೆ ವಿಸ್ತರಿಸಬಹುದು.
Advertisement
POCSO ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ಲೈಂಗಿಕ ದೌರ್ಜನ್ಯ ಎಸಗುವವರಿಗೆ ಕನಿಷ್ಟ ಮೂರು ವರ್ಷ ಹಾಗೂ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡ ಕೂಡ ಕಟ್ಟಬೇಕಾಗುತ್ತದೆ.
Advertisement
ಅಪರಾಜಿತ ಮಸೂದೆಯಲ್ಲಿ ,ಅಪರಾಧ ನಡೆದ 7 ದಿನಗಳ ಒಳಗಾಗಿ ಮಗುವಿನ ಅಥವಾ ಬಾಲಕಿಯ ಸಾಕ್ಷ್ಯವನ್ನು ಕಡ್ಡಾಯವಾಗಿ ದಾಖಲಿಸಬೇಕು. ಆದರೆ ಪೋಕ್ಸೊ ಕಾಯ್ದೆಯಡಿಯಲ್ಲಿ ವಿಶೇಷ ನ್ಯಾಯಾಲಯವು ಅಪರಾಧವನ್ನು ಗುರುತಿಸಿದ 30 ದಿನಗಳೊಳಗೆ ಮಗುವಿನ ಸಾಕ್ಷ್ಯವನ್ನು ದಾಖಲಿಸಬೇಕು ಮತ್ತು ಯಾವುದೇ ವಿಳಂಬಕ್ಕೆ ಕಾರಣಗಳನ್ನು ನ್ಯಾಯಾಲಯವು ದಾಖಲಿಸಬೇಕು ಎಂದು ಕಾಯ್ದೆ ಹೇಳುತ್ತದೆ.
ಬಂಗಾಳದ ಅತ್ಯಾಚಾರ ತಡೆ ಬಿಲ್ ಪ್ರಕಾರ, ಅಪರಾಧ ನಡೆದ 30 ದಿನಗಳಲ್ಲಿ ವಿಶೇಷ ನ್ಯಾಯಾಲಯವು ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಪೋಕ್ಸೊ ಕಾಯ್ದೆಯಲ್ಲಿ ವಿಶೇಷ ನ್ಯಾಯಾಲಯವು ಅಪರಾಧ ನಡೆದ ದಿನಾಂಕದಿಂದ ಒಂದು ವರ್ಷದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕು.
ಅತ್ಯಾಚಾರ ತಡೆ ಕಾಯ್ದೆಯ ಪ್ರಕಾರ ಆರೋಪಿಗೆ ವಿಧಿಸುವ ದಂಡವು ವಿಶೇಷ ನ್ಯಾಯಾಲಯ ನಿರ್ಧರಿಸಿದಂತೆ ಸಂತ್ರಸ್ತೆಯ ಸಂಬಂಧಕರಿಗೆ ಅಥವಾ ಕುಟುಂಬಸ್ಥರಿಗೆ ಪರಿಹಾರವನ್ನು ಒಳಗೊಂಡಿರುತ್ತದೆ. POCSO ಕಾಯ್ದೆಯ ಪ್ರಕಾರ ದಂಡವು ಸಂತ್ರಸ್ತರ ವೈದ್ಯಕೀಯ ವೆಚ್ಚಗಳು ಮತ್ತು ಪುನರ್ವಸತಿಯನ್ನು ಒಳಗೊಂಡಿರುತ್ತದೆ.
ಶಿಕ್ಷೆ ಏನು?
ಅತ್ಯಾಚಾರ ಆರೋಪ ಸಾಬೀತಾದ 10 ದಿನದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆ ವಿಧಿಸಲು ವಿಧೇಯಕದಲ್ಲಿ ಅನುಮತಿ ಇದೆ. ಈ ಶಿಕ್ಷೆ ಸಂದರ್ಭದಲ್ಲಿ ಅಪರಾಧಿಗೆ ಪರೋಲ್ ನೀಡಲಾಗುವುದಿಲ್ಲ. ಆರೋಪ ಸಾಬೀತಾದ 10 ದಿನದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಈ ಬಿಲ್‌ನಲ್ಲಿ ಅನುಮತಿ ಇದೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಭಾರತದಲ್ಲಿ ಇದೇ ಮೊದಲು ಪಶ್ಚಿಮ ಬಂಗಾಳ ಜಾರಿಗೆ ಬಂದಿದೆ ಎನ್ನಲಾಗಿದೆ.
ಸಾಮೂಹಿಕ ಅತ್ಯಾಚಾರದ ಶಿಕ್ಷೆಯು ಕನಿಷ್ಠ 20 ವರ್ಷಗಳ ಕಠಿಣ ಸೆರೆವಾಸವನ್ನು ಒಳಗೊಂಡಿರುತ್ತದೆ, ಇದು ವಿತ್ತೀಯ ದಂಡದ ಜೊತೆಗೆ ಜೀವಾವಧಿ ಶಿಕ್ಷೆಗೆ ವಿಸ್ತರಿಸಬಹುದು.
16 ವರ್ಷದೊಳಗಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಬಂಗಾಳದ ಅತ್ಯಾಚಾರ-ವಿರೋಧಿ ಕಾಯ್ದೆಯಲ್ಲಿ ಅತಿ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಈ ಶಿಕ್ಷೆಯು ಕಠಿಣ ಸೆರೆವಾಸ, ಜೀವಾವಧಿ ಮತ್ತು ದಂಡ ಅಥವ ಮರಣದಂಡನೆಯನ್ನು ಒಳಗೊಂಡಿರುತ್ತದೆ. POCSO ಕಾಯ್ದೆಯ ಪ್ರಕಾರ ಹದಿನಾರು ವರ್ಷದ ಒಳಗಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಕನಿಷ್ಟ 20 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಈ ಶಿಕ್ಷೆಯನ್ನು ಜೀವಾವಧಿಯವರೆಗೆ ವಿಸ್ತರಿಸಬಹುದು. ಇದರೊಂದಿಗೆ ದಂಡ ಕೂಡ ಕಟ್ಟಬೇಕಾಗುತ್ತದೆ.
ರೇಪ್ ಮಾಡಿದವರಿಗೆ ಮರಣದಂಡನೆ ವಿಧಿಸುವ ಅವಕಾಶವನ್ನು ಇದು ಕಲ್ಪಿಸುತ್ತದೆ. ಚಾರ್ಜ್‌ಶೀಟ್ ಸಲ್ಲಿಸಿದ 36 ದಿನದಲ್ಲಿ ಮರಣಶಿಕ್ಷೆ ನೀಡುವ ನಿಬಂಧನೆಯನ್ನು ಈ ಮಸೂದೆ ಒಳಗೊಂಡಿದೆ. ಆಸಿಡ್ ದಾಳಿಯನ್ನು ತೀವ್ರ ಸ್ವರೂಪದ ಅಪರಾಧ ಎಂದು ಪರಿಗಣಿಸಲಾಗಿದ್ದು, ಜೀವಾವಧಿ ಶಿಕ್ಷೆ ನೀಡುವ ನಿಬಂಧನೆ ಈ ಮಸೂದೆಯಲ್ಲಿದೆ.
ವಿಶೇಷ ಕಾರ್ಯಪಡೆ:
ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ‘ಅಪರಾಜಿತಾ ಕಾರ್ಯಪಡೆ’ ಸ್ಥಾಪಿಸಲಾಗುವುದು. ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳ ತನಿಖೆಯನ್ನು ಈ ಕಾರ್ಯಪಡೆ ನಡೆಸುತ್ತದೆ.
ವಿಶೇಷ ಮತ್ತು ತ್ವರಿತ ನ್ಯಾಯಾಲಯಗಳು:
ತನಿಖಾ ತಂಡಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳ ಪ್ರಕರಣಗಳನ್ನು ಸಮರ್ಥವಾಗಿ ಮೇಲ್ವಿಚಾರಣೆ ಮಾಡಲು 52 ವಿಶೇಷ ನ್ಯಾಯಾಲಯಗಳನ್ನು ರಚಿಸಲು ಮಸೂದೆಯು ಪ್ರಸ್ತಾಪಿಸುತ್ತದೆ.
ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ನ್ಯಾಯಾಲಯದ ವಿಚಾರಣೆಗಳನ್ನು ಅನಧಿಕೃತವಾಗಿ ಮುದ್ರಿಸುವುದು ಅಥವಾ ಪ್ರಕಟಿಸಲು ಮಸೂದೆಯು ದಂಡ ವಿಧಿಸುತ್ತದೆ. ಈ ಮಸೂದೆಯ ಪ್ರಕಾರ ಅಪರಾಧಿಗಳು 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ.