2017- 18ನೇ ಸಾಲಿನ ಬಜೆಟ್‍ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಪ್ರತಿವರ್ಷಫೆಬ್ರವರಿ ಕೊನೆಯಲ್ಲಿ ಬಜೆಟ್ ಮಂಡನೆ ಆಗುತಿತ್ತು. ಈ ಬಾರಿ ಮುಂಚಿತವಾಗಿಯೇ ಬಜೆಟ್ ಮಂಡನೆಯಾಗುತ್ತಿದೆ. ಹೀಗಾಗಿ ಇಲ್ಲಿ ಹಣಕಾಸು ಬಜೆಟ್ ಸಿದ್ಧತೆ ಹೇಗೆ ನಡೆಯುತ್ತದೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
5 ತಿಂಗಳಿನಿಂದ ಸಿದ್ಧತೆ: ಬಜೆಟ್ ಮಂಡನೆಗೆ 5 ತಿಂಗಳು ಇರುವಂತೆಯೇ ಸಿದ್ಧತೆಗಳು ಆರಂಭವಾಗುತ್ತದೆ. ಸೆಪ್ಟೆಂಬರ್‍ನಲ್ಲಿ ಹಣಕಾಸು ಸಚಿವಾಲಯ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಟಿಪ್ಪಣಿಯೊಂದನ್ನು ಕಳುಹಿಸಿ ಖರ್ಚು ವೆಚ್ಚಗಳ ವಿವರ ಪಡೆದುಕೊಳ್ಳುತ್ತದೆ. ಇದರೊಂದಿಗೆ ಮುಮದಿನ ವರ್ಷದ ಹಣಕಾಸು ಲೆಕ್ಕಾಚಾರದ ಅಂದಾಜನ್ನೂ ಪಡೆದುಕೊಳ್ಳುತ್ತದೆ.
Advertisement
ನಿರಂತರ ಸಭೆ: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಖರ್ಚುವೆಚ್ಚಗಳ ಕಾರ್ಯದರ್ಶಿ, ಕೆಲವು ಇಲಾಖೆಗಳ ಹಣಕಾಸು ಸಲಹೆಗಾರರ ಜತೆ ಸಭೆಗಳನ್ನು ನಡೆಸಿ ಇಲಾಖಾವಾರು ವೆಚ್ಚಗಳ ಪರಿಶೀಲನೆ ನಡೆಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮುಂದಿನ ವರ್ಷದ ಪ್ರಸ್ತಾವನೆಯ ಕುರಿತಂತೆಯೂ ಚರ್ಚೆ ನಡೆಸಲಾಗುತ್ತದೆ. ಹೀಗೆ ಸಿಕ್ಕ ಖರ್ಚು ವೆಚ್ಚದ ವಿವರಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ತಂಡಕ್ಕೆ ಒಪ್ಪಿಸಲಾಗುತ್ತದೆ. ಬಳಿಕ ಆದಾಯ, ಹೊಸ ಪ್ರಸ್ತಾವನೆ, ಸುಂಕ ಏರಿಕೆಯ ಮೂಲಕ ಹೆಚ್ಚಿನ ನಿಧಿ ಸಂಗ್ರಹಣೆ, ಹಣದ ಕೊರತೆ ಮತ್ತು ಇನ್ನಿತರ ಅಂಕಿ ಸಂಖ್ಯೆಗಳ ಕುರಿತಂತೆ ತಂಡದ ಸದಸ್ಯರು ಚರ್ಚೆ ನಡೆಸುತ್ತಾರೆ. ಈ ಸಭೆಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಮತ್ತು ಕೇಂದ್ರೀಯ ನೇರ ಅಬಕಾರಿ ತೆರಿಗೆ ಮಂಡಳಿ ಈ ಎರಡೂ ಸಂಸ್ಥೆಗಳನ್ನೂ ಸಭೆಗೆ ಕರೆಯಲಾತ್ತದೆ.
Advertisement
ಆರ್ಥಿಕ ಸಮೀಕ್ಷೆ ಆರಂಭ: ಬಜೆಟ್‍ನ ಪ್ರಧಾನ ತಂಡ ಚರ್ಚೆ ನಡೆಸಿದ ವಿಷಯದ ಮೇಲೆ ಬಜೆಟ್ ಪ್ರಸ್ತಾವನೆಗಳ ಒಂದು ನೀಲ ನಕ್ಷೆಯನ್ನು ರೆಡಿ ಮಾಡಲಾಗುತ್ತದೆ. ಆದರೆ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಈ ನೀಲ ನಕ್ಷೆಯ ಪ್ರತಿಗಳನ್ನು ಹಿರಿಯ ಅಧಿಕಾರಿಗಳು ನಾಶಪಡಿಸುತ್ತಾರೆ. ಬಳಿಕ ನವೆಂಬರ್ ಅಂತ್ಯಕ್ಕಾಗುವಾಗ ಕೆಲ ಪ್ರಮುಖ ಸಿಬ್ಬಂದಿಗಳಿಗೆ ಮಾತ್ರ ಹಣಕಾಸು ಸಚಿವಾಲಯದ ಕಚೇರಿಯ ಒಳಗಡೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಮಾತ್ರವಲ್ಲದೇ ಕಚೇರಿಯ ಸುತ್ತ ಗುಪ್ತಚರ ಸಂಸ್ಥೆಗೆ ಒಪ್ಪಿಸಲಾಗುತ್ತದೆ. ಈ ವೇಳೆ ಮುಖ್ಯ ಆರ್ಥಿಕ ಸಲಹೆಗಾರರ ಮೇಲುಸ್ತುವಾರಿಯಲ್ಲಿ ಸಮೀಕ್ಷೆಯ ಕಾರ್ಯವನ್ನು ನಡೆಸಲಾಗುತ್ತದೆ. ಈ ಮೂಲಕ ಬಜೆಟ್ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯುತ್ತದೆ.
Advertisement
ಅಂಕಿ ಅಂಶ ತಯಾರಿ: ಹಣಕಾಸು ಸಚಿವಾಲಯ, ನೀತಿ ಆಯೋಗ ಮತ್ತು ಇತರೆ ಸಚಿವಾಲಯಗಳ ಅಧಿಕಾರಿಗಳು ಸಭೆ ನಡೆಸಿ ಬಜೆಟ್ ಅಂಕಿ ಅಂಶಗಳನ್ನು ತಯಾರಿಸುತ್ತಾರೆ. ಖರ್ಚುಗಳನ್ನು ಆಧಾರಿಸಿ ಹಣಕಾಸು ಸಚಿವಾಲಯವು ಕೆಲವೊಂದು ಮಾರ್ಗಸೂಚಿಯನ್ನು ಪ್ರಕಟಿಸುತ್ತದೆ. ಇದಕ್ಕೆ ಅನುಗುಣವಾಗಿ ವಿವಿಧ ಸಚಿವಾಲಯಗಳು ಬೇಡಿಕೆಯನ್ನು ಸಲ್ಲಿಸುತ್ತವೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಬಜೆಟ್ ವಿಭಾಗವು ಇದನ್ನು ಸಿದ್ಧಪಡಿಸುತ್ತದೆ.
Advertisement
ಪ್ರಧಾನಿ ಎಂಟ್ರಿ: ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಪ್ರಧಾನಿ ಬಜೆಟ್‍ನಲ್ಲಿ ತಮ್ಮನ್ನೂ ತೊಡಗಿಸಿಕೊಳ್ಳುತ್ತಾರೆ. ಹಣಕಾಸು ಸ್ಥಿತಿಗತಿ, ಹೊಸ ಯೋಜನೆಗಳು, ಖರ್ಚುವೆಚ್ಚಗಳಿಗೆ ನೀಡಬೇಕಾದ ಆದ್ಯತೆ, ಹೆಚ್ಚುವರಿ ಆದಾಯ ಕ್ರಮಗಳು ಹೀಗೆ ಬಜೆಟ್‍ನ ರೂಪುರೇಷೆಗಳ ಕುರಿತಂತೆ ಹಣಕಾಸು ಸಚಿವಾಲಯದ ಜತೆ ಪ್ರಧಾನಿ ಚರ್ಚೆ ನಡೆಸುತ್ತಾರೆ. ಪ್ರಧಾನಿ ಮತ್ತು ಹಣಕಾಸು ಸಚಿವರ ಮಧ್ಯೆ ಬಜೆಟ್ ಕುರಿತಂತೆ ಹಲವು ಸುತ್ತಿನ ಮಾತುಕತೆಗಳು ನಡೆಯುತ್ತವೆ.
ಕರಡು ಬಜೆಟ್ ಮುದ್ರಣ: ಇನ್ನು ಬಜೆಟ್‍ಗೆ ಕೆಲವೇ ವಾರಗಳು ಬಾಕಿಯಿರುವ ವೇಳೆಯಲ್ಲಿ ಕಡತಗಳನ್ನು ಸಂಗ್ರಹ ಮಾಡಲಾಗುತ್ತದೆ. ಇಲ್ಲಿಯವರೆಗೆ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ವಿವಿಧ ಸಚಿವಾಲಯಗಳು ನೀಡಿದ ಅಂಕಿ-ಅಂಶಗಳನ್ನು ಆಧರಿಸಿ ರೂಪಿಸಿದ ಕರಡು ಬಜೆಟ್ ಪ್ರತಿಯನ್ನು ಹಣಕಾಸು ಸಚಿವಾಲಯದಲ್ಲಿರುವ ಮುದ್ರಣಾಲಯಕ್ಕೆ ಕಳುಹಿಸಲಾಗುತ್ತಿತ್ತು. ಆದ್ರೆ ಈ ಬಾರಿ ಫೆಬ್ರವರಿ ಮೊದಲ ವಾರದಲ್ಲೇ ಬಜೆಟ್ ಮಂಡನೆಯಾಗುವುದರಿಂದ ಜನವರಿ ತಿಂಗಳಲ್ಲೇ ಮುದ್ರಣಕ್ಕೆ ಕಳುಹಿಸಲಾಗಿತ್ತು.
ಸಿಬ್ಬಂದಿಗೆ ಗೃಹಬಂಧನ!: ಬಜೆಟ್ ಪ್ರತಿ ಮುದ್ರಣಕ್ಕೆ ಕಳುಹಿಸುವ ಮೊದಲು ಹಲ್ವಾ ಕಾಯಿಸುವ ಸಂಪ್ರದಾಯವಿದೆ. ಹಣಕಾಸು ಸಚಿವರು ನಾರ್ತ್ ಬ್ಲಾಕ್‍ನಲ್ಲಿರುವ ಕಚೇರಿಯಲ್ಲಿ ದೊಡ್ಡ ಕಡಾಯಿಯಲ್ಲಿ ಹಲ್ವಾ ಕಾಯಿಸುತ್ತಾರೆ. ಕೆಲವು ತಿಂಗಳಿನಿಂದ ಬಜೆಟ್ ತಯಾರಿಸಿದ ಸಿಬ್ಬಂದಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಬಜೆಟ್ ಅಧಿವೇಶನಕ್ಕೆ ಅಂದಾಜು ಹತ್ತು ದಿನ ಮೊದಲು ಈ ಕಾರ್ಯಕ್ರಮ ನಡೆಯುತ್ತದೆ.
ಬಜೆಟ್ ಮುದ್ರಣದ ವೇಳೆ ಮುದ್ರಣಾಲಯದಲ್ಲಿ ಕಾರ್ಯನಿರ್ವಹಿಸಿರುವ ಸಿಬ್ಬಂದಿಗೆ ಗೃಹ ಬಂಧನ ವಿಧಿಸಲಾಗುತ್ತದೆ. ಹಣಕಾಸು ಸಚಿವಾಲಯ ಅಧಿಕಾರಿಗಳು, ಹಣಕಾಸು ಮಸೂದೆ ಮತ್ತು ಕಾರ್ಯಸೂಚಿ ಮಸೂದೆಯನ್ನು ಸಿದ್ಧಪಡಿಸಿದ ಕಾನೂನು ಸಚಿವಾಲಯದ ಸಿಬ್ಬಂದಿಯ ಫೋನ್, ಇಮೇಲ್ ವ್ಯವಹಾರ ಬಂದ್ ಆಗುತ್ತದೆ. ಹಿರಿಯ ಅಧಿಕಾರಿಗಳಿಗೆ ಮಾತ್ರ ಮನೆಗೆ ತೆರಳು ಅನುಮತಿ ನೀಡಲಾಗುತ್ತದೆ. ಬಜೆಟ್ ಮಂಡನೆಯಾದ ಬಳಿಕವಷ್ಟೇ ಸಿಬ್ಬಂದಿ ಮನೆಗೆ ತೆರಳುತ್ತಾರೆ.
ಬಜೆಟ್ ಮಂಡನೆ ಹೇಗೆ?: ಬಜೆಟ್‍ನ ದಿನದಂದು ಹಣಕಾಸು ಸಚಿವರು ಮೊದಲು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಬಜೆಟ್‍ಗೆ ಅವರಿಂದ ಸಹಿ ಪಡೆದುಕೊಳ್ಳುತ್ತಾರೆ. ಬಳಿಕ ಸಂಪುಟ ಸಭೆ ನಡೆಸಲಾಗುತ್ತದೆ. ಈ ವೇಳೆ ಹಣಕಾಸು ಸಚಿವರು ಬಜೆಟ್ ನಲ್ಲಿರುವ ಅಂಶಗಳ ಕುರಿತಂತೆ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ. ಆದರೆ, ತೆರಿಗೆ ಪ್ರಸ್ತಾವನೆಗಳ ಕುರಿತಂತೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. 11 ಗಂಟೆಗೆ ಬಜೆಟ್ ಮಂಡಿಸಲಾಗುತ್ತೆ. ಇದಕ್ಕೆ ಕೆಲವೇ ನಿಮಿಷಗಳಷ್ಟೇ ಬಾಕಿ ಇರುವಂತೆ ಪ್ರಧಾನಿ ಅವರು ಹಣಕಾಸು ಸಚಿವರನ್ನು ಲೋಕಸಭೆಗೆ ಕರೆತಂದು ಆಸನದಲ್ಲಿ ಕೂರಿಸುತ್ತಾರೆ. ಬಳಿಕ ಸ್ಪೀಕರ್ ಅವರಿಂದ ಅನುಮತಿ ಪಡೆದು ಹಣಕಾಸು ಸಚಿವರು ಬಜೆಟ್ ಪ್ರತಿಯನ್ನು ಓದಲು ಆರಂಭಿಸುತ್ತಾರೆ.
ಈ ಬಾರಿ 1 ತಿಂಗಳು ಮೊದಲೇ ಯಾಕೆ?: ಇಲ್ಲಿಯವರೆಗೆ ಫೆಬ್ರವರಿ ಕೊನೆಯ ದಿನಾಂಕದಂದು ಬಜೆಟ್ ಮಂಡನೆಯಾಗುತಿತ್ತು. ಆದರೆ ಈ ಬಜೆಟ್‍ಗೆ ಮಾರ್ಚ್ 31ರೊಳಗೆ ಸಂಸತ್ತಿನ ಅನುಮೋದನೆ ಸಿಗುತ್ತಿರಲಿಲ್ಲ. ಹೀಗಾಗಿ ಅಲ್ಲಿಯವರೆಗೆ ಎರಡು ತಿಂಗಳ ಅವಧಿಗೆ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯಬೇಕಿತ್ತು. ಇದಾದ ಬಳಿಕ ಅನುಮೋದನೆ ಪಡೆದು ಪೂರ್ಣ ಪ್ರಮಾಣದಲ್ಲಿ ಬಜೆಟ್ ಅನುಷ್ಠಾನ ಮಾಡುವ ವೇಳೆ ಮೂರು, ನಾಲ್ಕು ತಿಂಗಳು ಕಳೆದು ಹೋಗುತಿತ್ತು. ಈ ಲೇಖಾನುದಾನ ಪಡೆಯುವುದನ್ನು ತಪ್ಪಿಸಲು ಮತ್ತು ಏಪ್ರಿಲ್‍ನಿಂದ ಆರಂಭವಾಗುವ ಹಣಕಾಸು ವರ್ಷದಿಂದಲೇ ಬಜೆಟ್ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಈ ಬಾರಿ ಜನವರಿ 31ರಿಂದ ಬಜೆಟ್ ಅಧಿವೇಶನ ನಡೆಸಲು ಮುಂದಾಗಿದೆ. ಈ ವರ್ಷದಿಂದ ರೈಲ್ವೇ ಬಜೆಟ್ ಪ್ರತ್ಯೇಕವಾಗಿ ಮಂಡನೆಯಾಗುವುದಿಲ್ಲ. ಹಣಕಾಸು ಬಜೆಟ್ ನಲ್ಲೇ ರೈಲ್ವೇ ಬಜೆಟ್ ವಿಲೀನವಾಗಲಿದೆ. ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ 92 ವರ್ಷಗಳ ಪದ್ಧತಿ ಈ ಹಣಕಾಸು ವರ್ಷದಲ್ಲಿ ಕೊನೆಯಾಗಲಿದೆ.