ಯುಗಾದಿ ಎಂದರೆ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಮೊದಲ ದಿನ. ಯುಗಾದಿ (Ugadi) ಎಂಬ ಪದವು ಸಂಸ್ಕೃತದಿಂದ ಬಂದಿದೆ. ಹಿಂದೂಗಳು ಈ ದಿನವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯುಗಾದಿಯು ಒಂದು ಪ್ರಮುಖ ವಿಶ್ವ ಚಕ್ರದ ಆರಂಭವನ್ನು ಸೂಚಿಸುತ್ತದೆ. ಯುಗಾದಿಯನ್ನು ವಿಶೇಷವಾಗಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಜನರು ಆಚರಿಸುತ್ತಾರೆ.
ಕರ್ನಾಟಕದಲ್ಲಿ ಯುಗಾದಿ ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಎಂದು ಆಚರಿಸಿದರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ (Gudi Padwa), ತಮಿಳುನಾಡಿನಲ್ಲಿ ಪುತಂಡು, ಪಂಜಾಬ್‌ನಲ್ಲಿ ಬೈಸಾಕಿ, ಕೇರಳದಲ್ಲಿ ವಿಷು ಎಂದು ಆಚರಿಸಲಾಗುತ್ತದೆ. ಇದನ್ನೂ ಓದಿ: ಹೊಸ ವರುಷ.. ಹೊಸ ಹರುಷದ ಯುಗಾದಿ ಮತ್ತೆ ಬಂದಿದೆ
ಆಂಧ್ರಪ್ರದೇಶ ಮತ್ತು ತೆಲಂಗಾಣದ ಯುಗಾದಿ
ಪೂಜೆ ಮತ್ತು ಅಭ್ಯಂಗ ಸ್ನಾನದೊಂದಿಗೆ ಪ್ರಾರಂಭವ ಹಬ್ಬದ ಆಚರಣೆ. ಮನೆಗಳನ್ನು ಸ್ವಚ್ಛಗೊಳಿಸಿ ಮಾವಿನ ಎಲೆ ತೋರಣ ಮತ್ತು ರಂಗೋಲಿಗಳಿಂದ ಅಲಂಕರಿಸಲಾಗುತ್ತದೆ. ಮುಂದೆ ಪಂಚಾಂಗ ಓದುವಿಕೆಯೊಂದಿಗೆ ವರ್ಷದ ಒಳಿತುಗಳ ಬಗ್ಗೆ ತಿಳಿಯುತ್ತಾರೆ. ಜೀವನದ ವಿವಿಧ ಅನುಭವಗಳನ್ನು ಪ್ರತಿನಿಧಿಸುವ ಆರು ರುಚಿಗಳನ್ನು ಹೊಂದಿರುವ ʻಯುಗಾದಿ ಪಚಡಿʼ ಎಂಬ ಸಾಂಕೇತಿಕ ಖಾದ್ಯವನ್ನು ತಯಾರಿಸಲಾಗುತ್ತದೆ. ಇದನ್ನೂ ಓದಿ: ಯುಗಾದಿ ಸ್ಪೆಷಲ್; ಆರೋಗ್ಯಕರ ಪಚಡಿ ರೆಸಿಪಿ!
ಕರ್ನಾಟಕದ ಯುಗಾದಿ
ಯುಗಾದಿಯಂದು ಪ್ರಾರ್ಥನೆ ಮತ್ತು ಎಣ್ಣೆ ಸ್ನಾನದೊಂದಿಗೆ ದಿನವನ್ನು ಆರಂಭಿಸುತ್ತಾರೆ. ನಂತರ ಬೇವು ಮತ್ತು ಬೆಲ್ಲದ ಸೇವಿಸುತ್ತಾರೆ. ಇದು ಜೀವನದ ಸಿಹಿ ಮತ್ತು ಕಹಿ ಕ್ಷಣಗಳನ್ನು ಸಂಕೇತಿಸುತ್ತದೆ. ಅಂದು ದೇವಾಲಯಗಳಿಗೆ ತೆರಳಿ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ.
ಮಹಾರಾಷ್ಟ್ರ ಮತ್ತು ಗೋವಾದ ಗುಡಿ ಪಾಡ್ವ
ವಸಂತ ಋತುವಿನ ಆಗಮನ ಮತ್ತು ರಬಿ ಬೆಳೆಗಳ ಕೊಯ್ಲಿಗೆ ಸೂಚಿಸುವ ಹಬ್ಬದಂದು ಮನೆಗಳಲ್ಲಿ ಗುಡಿ ಅಂದರೆ ಧ್ವಜ ಹಾರಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಎಂದು ನಂಬಲಾದ ಗುಡಿಯನ್ನು ಉದ್ದವಾದ ಬಿದಿರಿನ ಕೋಲಿನ ಮೇಲೆ ಹಳದಿ, ಹಸಿರು ಅಥವಾ ಕೆಂಪು ಬಣ್ಣದ ರೇಷ್ಮೆ ಬಟ್ಟೆಯಿಂದ ಕಟ್ಟಲಾಗುತ್ತದೆ. ಗುಡಿಯ ಮೇಲೆ ಬೇವಿನ ಎಲೆ, ಮಾವಿನ ಎಲೆ, ಹೂವು ಮತ್ತು ಸಕ್ಕರೆ ಹರಳುಗಳ ಹಾರವನ್ನು ಹಾಕಿ, ತಲೆಕೆಳಗಾದ ಕಂಚು, ಬೆಳ್ಳಿ ಅಥವಾ ತಾಮ್ರದ ಕಲಶದಿಂದ ಅಲಂಕರಿಸುವ ಮೂಲಕ ಆಚರಿಸುತ್ತಾರೆ. ಇದನ್ನೂ ಓದಿ: ಯುಗಾದಿ ವಿಶೇಷ – ಏನಿದು ಗುಡಿಪಾಡ್ವ? ಯಾಕೆ ಈ ಆಚರಣೆ?
ತಮಿಳುನಾಡಿನ ಪುತಂಡು
ತಮಿಳರು ಹೊಸ ವರ್ಷವನ್ನು ಸ್ವಾಗತಿಸಲು ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಹಳೆಯ ವಸ್ತುಗಳನ್ನು ಎಸೆದು, ಮನೆಯ ಮುಂದೆ ರಂಗೋಲಿಯನ್ನು ಬಿಡಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ʻಮಾಂಗ ಪಚಡಿʼ ಎಂಬ ವಿಶೇಷ ಪದಾರ್ಥವನ್ನು ತಯಾರಿಸುತ್ತಾರೆ.
ಕೇರಳದ ವಿಷು
ಕೇರಳದಲ್ಲಿ ಈ ಹಬ್ಬದಂದು ದೇವರ ಕೋಣೆಯಲ್ಲಿ ʻವಿಷು ಕಣಿʼ ಇಡುವ ಸಂಪ್ರದಾಯವಿದೆ. ವಿಷುಕಣಿ ವಿಷು ಹಬ್ಬದ ಪ್ರಮುಖ ಭಾಗವಾಗಿದೆ. ವಿಷು ಹಬ್ಬದ ಹಿಂದಿನ ದಿನವೇ ಮನೆಯನ್ನು ಶುಚಿಗೊಳಿಸಿ ಶೃಂಗಾರ ಮಾಡುತ್ತಾರೆ. ದೇವರ ಕೋಣೆಯಲ್ಲಿ ಕಣಿ ಕಾಣಲು ಬೇಕಾದ ವಸ್ತುಗಳನ್ನು ತಯಾರು ಮಾಡುತ್ತಾರೆ. ದೇವರ ವಿಗ್ರಹ, ಫಲ ವಸ್ತುಗಳು, ನವ ಧಾನ್ಯ, ಹೊಸ ಬಟ್ಟೆ, ಧನ ಇತ್ಯಾದಿಯನ್ನು ಹೊಸ ಮಡಿಕೆಯಲ್ಲಿ ಅಥವಾ ಉರುಳಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಹಾಗೂ ಕನ್ನಡಿಯನ್ನು ಇಡುತ್ತಾರೆ. ಇದನ್ನೂ ಓದಿ: ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ
ಈ ರೀತಿಯಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾದ ಆಚರಣೆಗಳ ಮೂಲಕ ಯುಗಾದಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸುತ್ತಾರೆ. ನವ ಸಂವತ್ಸರದ ಯುಗಾದಿಯು ಕೆಡುಕನ್ನು ಹೋಗಲಾಡಿಸಿ ಒಳಿತನ್ನು ತರುತ್ತದೆ ಎಂಬುದು ಜನರ ನಂಬಿಕೆಯಾಗಿದೆ.